ಮಗು ಪಡೆಯಲು ನಾನು ಮದುವೆಯಾಗಲೇಬೇಕು ಅಂತೇನೂ ಇಲ್ಲ ; 41ವರ್ಷದ 'ಭದ್ರ' ನಟಿಯ ನೇರ ಮಾತು-ನಿರ್ಧಾರ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.
ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಎಷ್ಟೇ ದೃಢ ನಿರ್ಧಾರ ಮಾಡಿದರು.. ಜೀವನ ಸಂಗಾತಿಯೇ ಬೇಡ ಎಂದು ಅಂದುಕೊಂಡರು.. ಕೆಲ ಮಹಿಳೆಯರಲ್ಲಿ ತಾಯ್ತನದ ಹಂಬಲ ಮಾತ್ರ ಇದ್ದೇ ಇರುತ್ತೆ.

ಈ ಕಾರಣಕ್ಕಾಗಿಯೇ ಹಲವರು ಅದರಲ್ಲಿಯೂ ಚಿತ್ರರಂಗದಲ್ಲಿ ನಾಯಕಿಯರು ಅಂಡಾಣು ಶೇಖರಣೆ ಮಾಡಿ ಇಡುತ್ತಿದ್ದಾರೆ. ಮೆರ್ಹಿನ್ ಪಿರ್ಜಾದಾ.. ರಿಚಾ ಚಡ್ಡಾ.. ಮೃಣಾಲ್ ಠಾಕೂರ್.. ಹೀಗೆ ಒಬ್ಬರಾ.. ಇಬ್ಬರಾ.. ಹಲವರು ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಆಲೋಚನೆ ಮಾಡಿದ್ದಾರೆ. ಈ ಸಾಲಿನಲ್ಲಿ ಡೈಸಿ ಶಾ ಕೂಡ ಇದ್ದಾರೆ ಎನ್ನುವುದು ಸದ್ಯದ ಲೇಟೆಸ್ಟ್ ನ್ಯೂಸ್.
ಹೌದು ಡೈಸಿ ಶಾ .. ಬಾಲಿವುಡ್‌ನ ಬೆಡಗಿ. ಒಂದ್ಕಾಲದಲ್ಲಿ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ತಂಡದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಡೈಸಿ ಶಾ ಬಾಲಿವುಡ್‌ನ ಕೆಲ ಚಿತ್ರಗಳಲ್ಲಿ ಡ್ಯಾನ್ಸರ್ ಆಗಿ ಹೆಜ್ಜೆಯನ್ನು ಹಾಕಿದ್ದಾರೆ.
ಚಿತ್ರರಂಗದಲ್ಲಿ ಒಂದು ದೊಡ್ಡ ಗೆಲುವು ಪಡೆಯಲು 2001ರಿಂದ ಕಸರತ್ತು ಮಾಡುತ್ತಿರುವ ಡೈಸಿ ಶಾ , ಸಲ್ಮಾನ್ ಖಾನ್ ಅಭಿನಯದ 'ಜೈಹೋ' ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು. ಇದಕ್ಕೂ ಮುನ್ನ ಪ್ರಜ್ವಲ್ ದೇವರಾಜ್ ಅಭಿನಯದ 'ಭದ್ರ'.. ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್'.. 'ಗಜೇಂದ್ರ'.. ಹೀಗೆ ಒಂದಾದ ಮೇಲೊಂದು 3 ಕನ್ನಡ ಚಿತ್ರಗಳನ್ನು ಕೂಡ ಮಾಡಿದ್ದರು ಡೈಸಿ ಶಾ.
ಇಂಥಾ ಡೈಸಿ ಶಾಗೆ ಈಗ 41ರ ಹರೆಯ. ಆದರೆ ಇನ್ನೂ ಮದುವೆಯಾಗಿಲ್ಲ. ಈ ಹಿನ್ನೆಲೆ ಹಲವರಿಗೆ ಇವರ ಮದುವೆಯ ಚಿಂತೆ ಕಾಡುತ್ತಿದೆ. ಹೀಗಿರುವಾಗ ಕುಟುಂಬ ಅಂದರೆ ಕೇವಲ ಮದುವೆಯೊಂದೇ ಅಲ್ವಲ್ಲಾ ಎಂಬ ಪ್ರಶ್ನೆಯನ್ನು ಡೈಸಿ ಶಾ ಕೇಳಿದ್ದಾರೆ. ನನ್ನ ಅಂಡಾಣುವನ್ನು ನಾನು ಶೇಖರಿಸಿದ್ದೇನೆ ಎಂದಿದ್ದಾರೆ.

''ಫಿಲ್ಮಿಗ್ಯಾನ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಡೈಸಿ ಶಾ ಇವತ್ತ ನನ್ನ ಹತ್ರ ದುಡ್ಡು ಇದೆ, ನೆಮ್ಮದಿ ಇದೆ, ನನಗೆ ಬೇಕಾದದ್ದೆಲ್ಲವೂ ನನಗೆ ಸಿಕ್ಕಿದೆ, ನನ್ನ ಕುಟುಂಬ ಉತ್ತಮ ಜೀವನ ನಡೆಸುತ್ತಿದೆ, ಎರಡು ಮುದ್ದಾದ ನಾಯಗಳಿವೆ, ನನ್ನೆಲ್ಲ ಕನಸುಗಳು ನನಸಾಗಿವೆ, ನಾನು ಸಂತೋಷದಿಂದ ಇದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ಮದುವೆಯ ಕುರಿತು ನಾನು ಯಾವುದೇ ಆಲೋಚನೆ ಮಾಡಿಲ್ಲ, ಎಲ್ಲವೂ ಆ ದೇವರ ಇಚ್ಚೆ ಎಂದು ಹೇಳಿರುವ ಡೈಸಿ ಶಾ ಮದುವೆ ಈಗ ಅನಿವಾರ್ಯ ಅಲ್ಲ ಎಂದು ಹೇಳಿದ್ಧಾರೆ. ಈ ಮೂಲಕ ಮದುವೆಯಾಗದೇಯೂ ಜೀವನವು ಪರಿಪೂರ್ಣವಾಗಬಹುದು ಎಂದು ಹೇಳಿದ್ದಾರೆ. ಆರ್ಥಿಕ ಸ್ವಾತಂತ್ಯ್ರ ಮತ್ತು ಪ್ರೀತಿ ಎರಡು ಪರಸ್ಪರ ಪೂರಕವಾಗಿರಬೇಕು ಎಂದು ಹೇಳಿರುವ ಡೈಸಿ ಶಾ ಕೇವಲ ಪ್ರೀತಿ ಇದ್ದರೆ ಸಾಲಲ್ಲ ಸ್ಥಿರವಾದ ಜೀವನಕ್ಕೆ ಹಣ ಕೂಡ ಬೇಕು ಎಂದು ಹೇಳಿದ್ದಾರೆ.
ಇನ್ನು ಹೆಚ್ಚುತ್ತಿರುವ ವಿಚ್ಚೇದನ ಪ್ರಕರಣಗಳು ಕೂಡ ಮದುವೆಯಾಗದಿರಲು ಒಂದು ಕಾರಣ ಎಂದು ಹೇಳಿರುವ ಡೈಸಿ ಶಾ ದಿನ ಬೆಳಗಾದರೆ ಒಬ್ಬರಲ್ಲೊಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿಗಳು ಹೊರ ಬರುತ್ತಿವೆ, ಇದು ತುಂಬಾನೇ ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಡಿವೋರ್ಸ್ ಸುದ್ದಿಗಳು ನನ್ನನ್ನೂ ಎಚ್ಚರಿಸಿವೆ ಎಂದಿದ್ದಾರೆ.
ನಾನು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದೇನೆ, ಆದರೆ ತಾಯಿಯಾಗಲು ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿರುವ ಡೈಸಿ ಶಾ ನಾನು ಅಂಡಾಣುಗಳನ್ನು ಶೇಖರಿಸಿದ್ದೇನೆ, ಈ ಹಿನ್ನೆಲೆ ತಾಯಿಯಾಗಲೇಬೇಕು ಅಂದರೆ ನಾನು ಯಾವಾಗ ಬೇಕಾದರೂ ತಾಯಿಯಾಗಬಹುದು ಎಂದು ಹೇಳಿದ್ದಾರೆ. ಮದುವೆಯಾಗದೇ ನನ್ನ ಮಗುವನ್ನು ನಾನು ಪಡೆಯಬಹುದು ಎಂದು ಹೇಳಿದ್ದಾರೆ. ಸಾಮಾಜಿಕ ಒತ್ತಡಕ್ಕಿಂತ ಸ್ವಂತ ನಿರ್ಧಾರ ಮುಖ್ಯ ಎನ್ನುವುದನ್ನು ಈ ಮೂಲಕ ಹೇಳಿದ್ದಾರೆ.


Click it and Unblock the Notifications











