ನಾನು ಸನ್ಯಾಸಿಯಲ್ಲ; ಮದುವೆಯಾಗದಿದ್ದರೂ 52ರ ಹರೆಯದಲ್ಲೂ ದೈಹಿಕವಾಗಿ ತೃಪ್ತಳಾಗಿದ್ದೇನೆ - ಡ್ಯಾನ್ಸ್ ಗುರು ಗೀತಾ ಕಪೂರ್
ಹೆಣ್ಣು ಮಕ್ಕಳ ಪಾಲಿಗೆ ಮದುವೆಯೇ ಜೀವನದ ಅಂತಿಮ ಗುರಿ ಎಂಬ ನಂಬಿಕೆ ನಮ್ಮ ಸಮಾಜದಲ್ಲಿದೆ. ಮದುವೆಯಾದರೆ ಹೆಣ್ಣಿನ ಬದುಕಿಗೊಂದು ಅರ್ಥ ಎನ್ನುವ ವಾದವನ್ನು ಹಲವರು ಮಾಡುತ್ತಾರೆ. ಆದರೆ ಕಾಲ ಈಗ ಬದಲಾಗಿದೆ. ವಿಚಾರಗಳು ಬದಲಾಗಿವೆ. ಬದಲಾದ ಈ ಕಾಲದಲ್ಲಿ ಹೆಣ್ಣಿಗೆ ಗಂಡಿನ ಅವಶ್ಯಕತೆ ಇಲ್ಲ. ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಗಂಡಿನ ಅಗತ್ಯವೂ ಇಲ್ಲ. ಮದುವೆಯೊಂದೇ...
ಹೆಣ್ಣಿನ ಅಂತಿಮ ಗುರಿಯೂ ಅಲ್ಲ. ಸಂತೃಪ್ತಿ ಸಾಮಾಜಿಕ ಸಾಧನೆ ಕೂಡ ಅಲ್ಲ. ಒಂಟಿತನ ಅಂದರೆ ಅರ್ಥ ಇಲ್ಲದ ಜೀವನವೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 2022ರಲ್ಲಿ ಭಾರತದ ಅಂಕಿಅಂಶ ಸಚಿವಾಲಯದ (MoSPI) ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಪ್ರಕಟಿಸಿದ ಸಾಮಾಜಿಕ ಅಂಕಿ ಅಂಶಗಳ ವರದಿ ಪ್ರಕಾರ, ಭಾರತದಲ್ಲಿ ಮದುವೆಯಾಗದ ಮಹಿಳೆಯರ ಪ್ರಮಾಣ 2011ರ 13.5% ರಿಂದ 2021ರಲ್ಲಿ 19.9%ಕ್ಕೆ ಏರಿಕೆಯಾಗಿದೆ.

ಆದರೂ ಕೂಡ ಮದುವೆಯಾಗದ ಹೆಣ್ಣಿನ ಪ್ರೀತಿ ಮತ್ತು ಬಯಕೆಯನ್ನು ಅನುಮಾನದ ದೃಷ್ಟಿಯಿಂದ ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಂತಹವರಿಗೆ ಗೀತಾ ಕಪೂರ್ ಸದ್ಯ ಖಡಕ್ ಉತ್ತರ ನೀಡಿದ್ದಾರೆ.
ಹೌದು, ಗೀತಾ ಕಪೂರ್.. ಬಾಲಿವುಡ್‌ನ ಪ್ರಖ್ಯಾತ ನೃತ್ಯ ನಿರ್ದೇಶಕಿ. ಹಿಂದಿಯ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ''ಗೀತಾ ಮಾ'' ಎಂದೇ ಜನಜನಿತರಾದವರು ಇವರು. ಬಾಲಿವುಡ್‌ನ ಮತ್ತೊಬ್ಬ ಖ್ಯಾತ ಕೊರಿಯೋಗ್ರಾಫರ್ ಫರ್ಹಾ ಖಾನ್ ಅವರ ಬಳಿ 1998ರಲ್ಲಿ ತನ್ನ 17ರ ಪ್ರಾಯದಲ್ಲಿ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಸೇರಿಕೊಂಡು ಆ ನಂತರ ಸ್ವತಂತ್ರ್ಯ ನೃತ್ಯ ನಿರ್ದೇಶಕಿಯಾಗಿ ಗುರುತಿಸಿಕೊಂಡ ಗೀತಾ ಕಪೂರ್ ಇಲ್ಲಿಯವರೆಗೆ ಹಲವಾರು ಚಿತ್ರಗಳನ್ನು ಹಾಡುಗಳ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ.
ಆ ಪೈಕಿ ''ಫಿಜಾ''.. ''ಅಶೋಕಾ''.. ''ಸಾಥಿಯಾ''.. ''ಹೇ ಬೇಬಿ''.. ಪ್ರಮುಖವಾದವು. ಇನ್ನು ಕತ್ರಿನಾ ಕೈಫ್ ಅವರ ಜಗದ್ವಿಖ್ಯಾತ ಹಾಡು ''ಶೀಲಾ ಕೀ ಜವಾನಿ'' ಹಾಡನ್ನು ಕೂಡ ಕೊರಿಯೋಗ್ರಾಫ್ ಮಾಡಿದವರು ಕೂಡ ಇದೇ ಗೀತಾ ಕಪೂರ್.
ಇಂಥಾ ಗೀತಾ ಕಪೂರ್‌ಗೆ ಈಗ 52 ವರ್ಷ. ಆದರೆ ಇನ್ನೂ ಮದುವೆಯಾಗಿಲ್ಲ. ಹೀಗಾಗಿ ಹೋದಲ್ಲಿ ಬಂದಲ್ಲಿ.. ಕುಂತಲ್ಲಿ ನಿಂತಲ್ಲಿ.. ಹಲವರು ಗೀತಾ ಕಪೂರ್ ಅವರಿಗೆ ಮದುವೆ ಪ್ರಶ್ನೆ ಕೇಳುತ್ತಾರೆ. ಲೈಂ*ಗಿಕ ಸಂತೃಪ್ತಿಯ ಕುರಿತು ಕೂಡ ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಗೀತಾ ಕಪೂರ್ ಈಗ ಉತ್ತರ ನೀಡಿದ್ದಾರೆ.

''ಹಿಂದಿ ರಶ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗೀತಾ ಕಪೂರ್ ''ಅಮ್ಮ'' ಎಂಬ ಗೌರವವನ್ನು ನೀಡಿದ ಮಾತ್ರಕ್ಕೆ ಆ ವ್ಯಕ್ತಿಗೆ ವೈಯಕ್ತಿಕ ಆಸೆ, ಭಾವನೆ, ಅಥವಾ ಸಂಬಂಧಗಳಿರುವುದಿಲ್ಲ ಎಂದು ಭಾವಿಸುವುದು ತಪ್ಪು ಎಂದು ಹೇಳಿದ್ದಾರೆ.
ನಾನು ಸನ್ಯಾಸಿನಿಯೂ ಅಲ್ಲ , ಕನ್ಯತ್ವ ಕಳೆದುಕೊಳ್ಳದ ಮಹಿಳೆಯೂ ಅಲ್ಲ, ತ್ಯಾಗದ ಪ್ರತೀಕವೂ ಅಲ್ಲ ಎಂದು ಹೇಳಿರುವ ಗೀತಾ ಕಪೂರ್ ನಾನು ಕೂಡ ಎಲ್ಲರಂತೆ ಸಾಮಾನ್ಯ ಮಹಿಳೆ ಎಂದಿದ್ದಾರೆ. ನಾನು ಜನರನ್ನು ಭೇಟಿ ಮಾಡುತ್ತೇನೆ, ಅವರ ಜೊತೆ ಸುತ್ತಾಡುತ್ತೇನೆ, ಯಾರು ಬೇಕೋ ಅವರ ಜೊತೆ ನಾನು ತೀರಾ ಆಪ್ತಳಾಗುತ್ತೇನೆ ಎಂದು ಕೂಡ ಹೇಳಿದ್ದಾರೆ.
ಒಂದು ನಿರ್ದಿಷ್ಟ ವಯಸ್ಸಿನ ನಂತರ ಹೆಣ್ಣಿನ ಖಾಸಗಿ ಜೀವನ ಕೊನೆಗೊಳ್ಳುತ್ತದೆ ಎಂದು ಏಕೆ ಭಾವಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿರುವ ಗೀತಾ ಕಪೂರ್ ಭಾವನೆಗಳು ಎಲ್ಲರಲ್ಲಿಯೂ ಇರುತ್ತವೆ. ನಾನು ನನ್ನ ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ, ದೈಹಿಕವಾಗಿ ಕೂಡ ತುಂಬಾ ತೃಪ್ತಳಾಗಿದ್ದೇನೆ ಎಂದು ಹೇಳಿದ್ದಾರೆ.
ಒಂದು ಹೆಣ್ಣು ತನ್ನ ಸತ್ಯವನ್ನು ಹೇಳಿದಾಗ ಜನ ಆಕೆಯ ವಿರುದ್ಧ ತೀರ್ಪು ನೀಡುತ್ತಾರೆ, ತಮಗೆ ಇಷ್ಟ ಬಂದಂತೆ ಮಾತನಾಡುತ್ತಾರೆ ಎಂದು ಹೇಳಿರುವ ಗೀತಾ ಕಪೂರ್ ಜನರ ಈ ಮನಸ್ಥಿತಿ ಬದಲಾಗಬೇಕು ಅದು ಈಗ ಅವಶ್ಯಕ ಮತ್ತು ಅನಿವಾರ್ಯ ಎಂದು ಹೇಳಿದ್ದಾರೆ. ಜನ ತಮ್ಮ ಚಿಂತನೆಗಳಿಗೆ ಸರಿ ಹೋಗುವಂತಹ ವಿಷಯಗಳನ್ನು ಮಾತ್ರ ಕೇಳಲು ಬಯಸುತ್ತಾರೆ ಅದು ತಪ್ಪು ಎಂದು ಹೇಳಿದ್ದಾರೆ. ಸದ್ಯ ಗೀತಾ ಕಪೂರ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications











