ನಾನು ಇನ್ನೂ ಈ ದೇಶದಲ್ಲಿರಬೇಕು ; ನರೇಂದ್ರ ಮೋದಿ ನನ್ನ ಇಷ್ಟದ ರಾಜಕಾರಣಿ - ತಾಪ್ಸಿ ಪನ್ನು
ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು.
ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ಈ ಚೆಲುವೆ ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ. ''ದೊಬಾರಾ''.. ''ಬ್ಲರ್''.. ''ಫಿರ್ ಆಯೀ ಹಸೀನ್ ದಿಲ್‌ರುಬಾ'' ಭಾಗ 1 ಮತ್ತು ಭಾಗ 2.. ''ಖೇಲ್ ಖೇಲ್ ಮೇ''.. ಹೀಗೆ 2022ರಿಂದ ಒಂದಾದ ಮೇಲೊಂದು ಹಿಂದಿ ಸಿನಿಮಾ ಮಾಡುತ್ತ ಬಂದಿದ್ದಾರೆ.

ಸದ್ಯ ತಾಪ್ಸಿ '' 'ಅಸ್ಸಿ'' ಎಂಬ ಚಿತ್ರವನ್ನು ಮಾಡಿದ್ದಾರೆ. ಇವರ ನೆಚ್ಚಿನ ನಿರ್ದೇಶಕ ಅನುಭವ್ ಸಿನ್ಹಾ ನಿರ್ದೇಶನದ ಚಿತ್ರ ಇದು. ಇದೇ ಫೆಬ್ರವರಿ 20ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ತಾಪ್ಸಿ ಪನ್ನು ಮಾಡುತ್ತಿದ್ದಾರೆ.
ಆದರೆ, ವಿಪರ್ಯಾಸ, ಚಿತ್ರದ ಕುರಿತು ಮತ್ತು ಪಾತ್ರದ ಕುರಿತು ಇವರಿಗೆ ಪ್ರಶ್ನೆಯನ್ನು ಕೇಳಲಾಗುತ್ತಿಲ್ಲ. ಬದಲಿಗೆ ರಾಜಕೀಯದ ಕುರಿತು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಯಾಕೆಂದರೆ.. ಅನೇಕರಿಗೆ ಗೊತ್ತಿರುವಂತೆ ತಾಪ್ಸಿ ಮೋದಿ ಸರ್ಕಾರದ ವಿರೋಧಿ.
2020ರಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದಾಗ ಮನೆಯ ಎಲ್ಲಾ ದೀಪಗಳನ್ನು ಆರಿಸಿ ಮನೆ ಬಾಗಿಲಿನ ಬಳಿ ಅಥವಾ ಬಾಲ್ಕನಿಯಲ್ಲಿ ಮೊಂಬ್ಬತ್ತಿ, ದೀಪ, ಟಾರ್ಚ್, ಮೊಬೈಲ್ ಫ್ಲ್ಯಾಷ್, ಬೆಳಗಿಸಿ ಎಂದು ದೇಶದ ಜನತೆಗೆ ಪ್ರಧಾನ ಮಂತ್ರಿ ಮೋದಿ ಅವರು ಕರೆ ನೀಡಿದಾಗ ಮೋದಿ ಅವರನ್ನು ಅಪಹಾಸ್ಯ ಮಾಡಿದವರಲ್ಲಿ ತಾಪ್ಸಿ ಕೂಡ ಒಬ್ಬರು ಮತ್ತು ಪ್ರಮುಖರು.
ಕೇವಲ ಇದೊಂದೇ ಬಾರಿ ಅಲ್ಲ ಹಲವು ಬಾರಿ ಮೋದಿ ಸರ್ಕಾರದ ವಿರುದ್ಧ ಮಾತನಾಡಿ ಹಲವರ ಕೆಂಗಣ್ಣಿಗೆ ಹಿಂದೆ ತಾಪ್ಸಿ ಗುರಿಯಾಗಿದ್ದರು. ಇಂಥಾ ತಾಪ್ಸಿ ಈಗ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ಮಾತನಾಡಿದ್ದಾರೆ. ನನಗೆ ಮೋದಿ ಅಂದರೆ ಅಚ್ಚು ಮೆಚ್ಚು ಎಂದು ಹೇಳುವ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದಾರೆ. ಆದರೆ, ಅವರ ವಿಡಂಬನಾತ್ಮಕ ಶೈಲಿ ಇದೇ ವೇಳೆ ಕೆಲವರನ್ನು ಕೆರಳಿಸಿದೆ. ಆಕ್ರೋಶಕ್ಕೂ ಕೂಡ ಕಾರಣವಾಗಿದೆ.

ಹೌದು, ''ಟಿವಿ9 ಭಾರತ್‌ವರ್ಷ''ದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರ್‍ಯಾಪಿಡ್ ಫೈರ್ ಸುತ್ತಿನಲ್ಲಿ ಇವರಲ್ಲಿ ನಿಮ್ಮ ನೆಚ್ಚಿನ ರಾಜಕಾರಣಿ ಯಾರು..? ಎಂಬ ಪ್ರಶ್ನೆಯನ್ನು ನಿರೂಪಕ ಕೇಳಿದ್ದಾರೆ. ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಫೋಟೊವನ್ನು ತೋರಿಸಿದ್ದಾರೆ.
ಈ ಸಮಯದಲ್ಲಿ ತಾಪ್ಸಿ ಪನ್ನು ಪ್ರಶ್ನೆ ಕೇಳಿದ ಆಂಕರ್ ಗೆ ಕೈ ಮುಗಿದಿದ್ದಾರೆ. ಮರುಮಾತನಾಡದೇ ಸೀದಾ ಮೋದಿ ಅವರ ಫೋಟೊವನ್ನು ಆಯ್ಕೆ ಮಾಡಿದ್ದಾರೆ. ಆದರೆ ಇದೇ ಸಮಯದಲ್ಲಿ ಚಪ್ಪಾಳೆ ತಟ್ಟುತ್ತಿದ್ದ ನೆರೆದ ಜನರತ್ತ ಕೂಡ ಕೈ ಮುಗಿದಿರುವ ತಾಪ್ಸಿ ''ನನಗೆ ಈ ದೇಶದಲ್ಲಿ ಇನ್ನೂ ಬದುಕಬೇಕು'' ಎಂದು ಮಾರ್ಮಿಕವಾಗಿ ಹೇಳಿದ್ಧಾರೆ.
ಕೇವಲ 22 ಸೆಕೆಂಡ್ ಇರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ. ಮೋದಿ ಅವರನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯ ಇಲ್ಲ ಎನ್ನುವ ಅರ್ಥದಲ್ಲಿ ತಾಪ್ಸಿ ಪನ್ನು ಆ ಮಾತನ್ನು ಹೇಳಿದರಾ..? ಅಥವಾ ಅಭಿಮಾನದಿಂದ ಹೇಳಿದರಾ..? ಎನ್ನುವುದು ಹಲವರಿಗೆ ಗೊತ್ತಾಗುತ್ತಿಲ್ಲ.
ಕೆಲವರು ಇದೆಲ್ಲ ತಮ್ಮ ಚಿತ್ರಕ್ಕಾಗಿ ತಾಪ್ಸಿ ಮಾಡುತ್ತಿರುವ ಪ್ರಚಾರದ ಗಿಮಿಕ್ ಎಂದರೆ ಇನ್ನೂ ಕೆಲವರು ವಿರೋಧಿ ಎಂಬ ಹಣೆಪಟ್ಟಿಯನ್ನು ತೆಗೆದು ಹಾಕಲು ತಾಪ್ಸಿ ಹೀಗೆ ಹೇಳಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರ ಪ್ರಕಾರ ಇದು ತಾಪ್ಸಿಯ ಮಾಸ್ಟರ್ ಸ್ಟ್ರೋಕ್ ಮತ್ತೂ ಕೆಲವರ ಪ್ರಕಾರ ಬಾಯ್ಕಾಟ್ ಟ್ರೆಂಡ್‌ನ ಭಯ ತಾಪ್ಸಿ ಅವರಿಂದ ಈ ಮಾತು ಆಡಿಸಿದೆ. ಸತ್ಯ ತಾಪ್ಸಿ ಅವರಿಗೆ ಗೊತ್ತಾದರೂ ಈ ವಿಡಿಯೋ ಚರ್ಚೆಯನ್ನಂತೂ ಹುಟ್ಟುಹಾಕಿರುವುದು ಸುಳ್ಳಲ್ಲ.


Click it and Unblock the Notifications











