ಸಲ್ಮಾನ್ ಖಾನ್ ಅತ್ಯಾಪ್ತ ನೃತ್ಯ ನಿರ್ದೇಶಕಿ ಮೇಲೆ ದುರುಳರ ಕಣ್ಣು ; ತೆರೆ ಹಿಂದೆ ಇದ್ದರೂ ತಪ್ಪದ ನರಕ ಯಾತನೆ
ಚಿತ್ರರಂಗದಲ್ಲಿ ಹಲವರದ್ದು ಮುಖವಾಡದ ಬದುಕು. ಕೆಲವರಿಗೆ ಇಲ್ಲಿ ಪ್ರಚಾರದ ಹುಚ್ಚಿದ್ದರೆ, ಇನ್ನುಳಿದ ಕೆಲವರಲ್ಲಿ ಮುಕ್ಕಾಲು ಪಾಲು ಜನಕ್ಕೆ ಹೆಣ್ಣಿನ ಮೇಲೆ ಮೋಹ. ಚಿತ್ರರಂಗದಲ್ಲಿ ಹೇಗಾದರೂ ಮಾಡಿ ಒಂದು ಅವಕಾಶ ಪಡೆಯಬೇಕು.. ಮಿಂಚಬೇಕು.. ಎಂದು ಕನಸು ಕಾಣುತ್ತಾರಲ್ವಾ.. ? ಇವರ ಈ ಕನಸೇ ಈ ಕಿರಾತಕರ ಬಂಡವಾಳ.
ಇದು ಕೇವಲ ಮಿನುಗುತಾರೆಯಾಗಬೇಕೆಂಬ ಚೆಲುವೆಯರ ಕಥೆ ಮಾತ್ರ ಅಲ್ಲ. ತೆರೆಯ ಹಿಂದೆ ದುಡಿಯಲು ಬರುವ ಹಲವು ಹೆಣ್ಣುಮಕ್ಕಳ ಬದುಕಿನ ವ್ಯಥೆಯೂ ಹೌದು. ಪ್ರತಿಭೆಗೆ ಮಣೆ ಹಾಕುವ ಬದಲು ತಮ್ಮ ಚಪಲಕ್ಕೆ ಇಲ್ಲಿ ಮಹಿಳಾ ತಂತ್ರಜ್ಞರಿಗೆ ಕೆಲವರು ಅವಕಾಶ ನೀಡುತ್ತಾರೆ. ಈ ಮೂಲಕ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಇದಕ್ಕೆ ಮತ್ತೊಂದು ಕೈಗನ್ನಡಿಯೇ ಶಬೀನಾ ಖಾನ್ ಜೀವನಾನುಭವ.

ಹೌದು, ಶಬೀನಾ ಖಾನ್.. ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿ. ಯಾವ ಗಾಡ್ ಫಾದರ್ ಸಹಾಯ ಇಲ್ಲದೆ, ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ತಮ್ಮ ವೃತ್ತಿ ಬದುಕು ಶುರು ಮಾಡಿದ ಶಬೀನಾ ಖಾನ್ ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಗರಡಿಯಲ್ಲಿ ಪಳಗಿದರು. ಡ್ಯಾನ್ಸ್‌ನ ಅ.ಆ.ಇ.ಈ ಕಲಿತರು.
ರಾಮ್ ಗೋಪಾಲ್ ವರ್ಮಾ ನಿರ್ಮಾಣದ ''ಮೈ ಮಾಧುರಿ ದೀಕ್ಷಿತ್ ಬನ್ನಾ ಚಾಹತಿ ಹೂಂ" ಸ್ವತಂತ್ರ ನೃತ್ಯ ನಿರ್ದೇಶಕಿಯಾಗಿ ಇವರು ಕೆಲಸ ಮಾಡಿದ ಮೊದಲ ಸಿನಿಮಾ.
''ವೆಲ್‌ಕಂ ಬ್ಯಾಕ್''.. ''ಖಾಲಿ-ಪೀಲಿ''.. ''ಖಾಮೋಶಿಯಾ''.. ''ಗದರ್ 2''.. ''ಲವ್ ಯಾತ್ರಿ''.. ಇವರ ಕೆಲ ಪ್ರಮುಖ ಸಿನಿಮಾಗಳು. ಇನ್ನು ತಮ್ಮ ತಮ್ಮ ಕೆಲಸದ ಮೂಲಕ ಸಲ್ಮಾನ್ ಖಾನ್ ಅವರ ಹೃದಯ ಗೆದ್ದವರು ಶಬೀನಾ ಖಾನ್. ಇದಕ್ಕೆ ಕೈಗನ್ನಡಿ ಎಂಬಂತೆ ಸಲ್ಮಾನ್ ಖಾನ್ ತಮ್ಮ ಪ್ರತಿ ಚಿತ್ರದಲ್ಲಿ ಇವರಿಗೆ ಕರೆದು ಅವಕಾಶ ನೀಡಿದ್ದಾರೆ.
ಇದಕ್ಕೆ ಪುರಾವೆ ಎಂಬಂತೆ ''ಪ್ರೇಮ್ ರತನ್ ಧನ್ ಪಾಯೋ''.. ''ದಬಾಂಗ್ 3''.. ''ರಾಧೆ''.. ''ಟ್ಯೂಬ್ ಲೈಟ್''.. ''ಜೈಹೋ''.. ''ಕಿಸಿ ಕಾ ಭಾಯ್ ಕಿಸಿ ಕಾ ಜಾನ್''.. ''ಮಾತೃಭೂಮಿ''.. ಚಿತ್ರಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಶಬೀನಾ ಖಾನ್.

ಇಂಥಾ ಶಬೀನಾ ಖಾನ್ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಈ ಕುರಿತು ''ಹಿಂದಿ ರಶ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಬೀನಾ ಖಾನ್, ನನಗೆ ವೈದ್ಯಳಾಗಬೇಕೆಂಬ ವಿಪರೀತ ಆಸೆ ಇತ್ತು. ಆದರೆ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ, ಜವಾಬ್ಧಾರಿ ಇತ್ತು, ಹೀಗಾಗಿ ಈ ಕಡೆ ಬಂದೆ ಎಂದು ಹೇಳಿದ್ದಾರೆ.
ಗಣೇಶ್ ಆಚಾರ್ಯ ಅವರ ಬಳಿ ನಾನು ಕೆಲಸಕ್ಕೆ ಸೇರಿಕೊಂಡಾಗ, ನಾನು ತುಂಬಾ ಚಿಕ್ಕವಳಾಗಿದ್ದೆ ಎಂದು ಹೇಳಿರುವ ಶಬೀನಾ, ಆ ವಯಸ್ಸಿನಲ್ಲಿಯೇ ನನಗೆ ಕೆಲವರು ಅಸಭ್ಯ ಆಫರ್ ಗಳನ್ನು ನೀಡಿದ್ದರು ಎಂದಿದ್ದಾರೆ. ಚೂರು ಯಾಮಾರಿದರೂ ನಾನು ನರಕಯಾತನೆ ಅನುಭವಿಸಬೇಕಿತ್ತು ಎಂದು ಹೇಳಿರವ ಶಬೀನಾ ಖಾನ್ ಅಸಭ್ಯ ಬೇಡಿಕೆಗಳನ್ನಿಡುವ ಮೂಲಕ ತಮ್ಮ ವಿಕೃತಿಯ ಪ್ರದರ್ಶನ ಮಾಡಿದ್ದರು ಎಂದು ಆ ಘಟನೆಗಳನ್ನು ನೆನಪು ಮಾಡಿಕೊಂಡಿದ್ಧಾರೆ.
ಹೀಗೆ ನನ್ನೆದುರು ಅಸಭ್ಯವಾದ ಬೇಡಿಕೆಯನ್ನಿಟ್ಟಾಗ ನಾನು ಆ ಕೆಲಸವನ್ನೇ ಬಿಟ್ಟು ಬಂದಿದ್ದೇನೆ ಎಂದು ಹೇಳಿರುವ ಶಬೀನಾ ಖಾನ್, ಹೊಟ್ಟೆ ಹಸಿವಿನಿಂದ ನರಳಿದರೂ ಕೂಡಪರವಾಗಿಲ್ಲ, ಆದರೆ ತಪ್ಪು ದಾರಿಯಲ್ಲಿ ಹೋಗಿ ಕೆಲಸ ಮಾಡಬೇಡ ಎಂಬ ನನ್ನ ತಾಯಿಯ ಮಾತನ್ನು ನಾನು ಪಾಲಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಸಲ್ಮಾನ್ ಖಾನ್ ಅವರನ್ನು ಬಾಯ್ತುಂಬ ಹೊಗಳಿರುವ ಶಬೀನಾ ಖಾನ್, ಸಲ್ಮಾನ್ ಖಾನ್ ಅವರೊಬ್ಬರೇ ಕಲಾವಿದರ ಕೆಲಸವನ್ನು ಸರಿಯಾಗಿ ಗುರುತಿಸುತ್ತಾರೆ ಎಂದು ಹೇಳಿದ್ದಾರೆ. ಅವರ ಚಿತ್ರಗಳಲ್ಲಿ ನನಗೆ ಕೊನೆ ಪಕ್ಷ ಒಂದು ಹಾಡಾದರೂ ಸಿಕ್ಕಿಯೇ ಸಿಗುತ್ತೆ, ನನಗೆ ಅವರು ಅವಕಾಶ ಕೊಡುತ್ತಾರೆ ಎಂದು ಹೇಳಿರುವ ಶಬೀನಾ ಖಾನ್ ಅವರ ಜೊತೆ ಕೆಲಸ ಮಾಡುವ ವೇಳೆ ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ನಮ್ಮಲ್ಲಿರುತ್ತೆ ಎಂದಿದ್ದಾರೆ.
ಆದಾಗ್ಯೂ ಸಲ್ಮಾನ್ ಖಾನ್ ಅವರ ''ಪ್ರೇಮ್ ರತನ್ ಧನ್ ಪಾಯೋ'' ಚಿತ್ರದ ನಂತರ ನಾನು 9 ತಿಂಗಳು ಕೆಲಸ ಇಲ್ಲದೇ ಖಾಲಿ ಕುಂತಿದ್ದೇ ಎಂದು ಹೇಳಿರುವ ಶಬೀನಾ ಖಾನ್, ಆ ಸಮಯದಲ್ಲಿ ನನ್ನ ಅವಕಾಶಗಳನ್ನೆಲ್ಲಾ ಕೆಲವರು ಕಿತ್ತುಕೊಂಡರು ಎಂದಿದ್ಧಾರೆ.
ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಮೇಲಿನ ಲೈಂ*ಗಿಕ ದೌರ್ಜನ್ಯದ ಆರೋಪದ ಕುರಿತು ಕೇಳಿದಾಗ, ನಾನು ಅವರೊಂದಿಗೆ ಕೆಲಸ ಮಾಡುವಾಗ ಅತೀ ಚಿಕ್ಕವಳಾಗಿದ್ದೆ. ಆ ವಿಷಯದ ಸತ್ಯಾಸತ್ಯತೆಯ ಬಗ್ಗೆ ನಾನು ಏನೂ ಹೇಳಲಾರೆ ಎಂದು ಹೇಳಿರುವ ಶಬೀನಾ ಖಾನ್, ಅವರು ನನ್ನ ಗುರುಗಳು, ಆದರೆ ಆರೋಪ ಮಾಡಿದವರನ್ನೂ ನಾನು ಗೌರವಿಸುತ್ತೇನೆ. ಅನ್ಯಾಯವಾದ ತಕ್ಷಣ ಧ್ವನಿ ಎತ್ತುವುದು ಸೂಕ್ತ, ತಡವಾದರೆ ಯಾವುದೇ ಪ್ರಯೋಜನವಿರುವುದಿಲ್ಲ ಎಂದು ಹೇಳಿದ್ಧಾರೆ. ಚಿತ್ರರಂಗದಲ್ಲಿ ಮಹಿಳೆಯಾಗಿ ನೃತ್ಯ ನಿರ್ದೇಶಕಿಯಾಗಿ ದುಡಿಯುವುದು ಸುಲಭವಲ್ಲ ಎಂದು ಕೂಡ ಇದೇ ಸಂದರ್ಶನದಲ್ಲಿ ಶಬೀನಾ ಭಾವುಕರಾಗಿದ್ಧಾರೆ.


Click it and Unblock the Notifications