ಕನ್ನಡದ ಓರ್ವ ನಟ ಸೇರಿದಂತೆ ಸೌತ್‌ನ ಈ ನಾಲ್ವರು ನಟರ ಚಿತ್ರಗಳನ್ನು ನೋಡಿ ಕಲಿತಿದ್ದೇನೆ ಎಂದ ಶಾರುಖ್!
ಶಾರುಖ್ ಖಾನ್.. 2018ರಲ್ಲಿ ತೆರೆಕಂಡ ಜೀರೊ ಚಿತ್ರದ ಮೂಲಕ ಸೋಲುಂಡು ದೊಡ್ಡ ಗ್ಯಾಪ್ ತೆಗೆದುಕೊಂಡು ಈ ವರ್ಷ ಪಠಾಣ್ ಚಿತ್ರದ ಮೂಲಕ ದೊಡ್ಡ ಕಮ್‌ಬ್ಯಾಕ್ ಮಾಡಿದ ನಟ. ಜೀರೊ ಹೀನಾಯವಾಗಿ ಸೋತ ಬಳಿಕ ಶಾರುಖ್ ಖಾನ್ ಈಗಿರುವ ಮಾರುಕಟ್ಟೆಗೆ ಹಾಗೂ ಸಿನಿ ರಸಿಕರ ಅಭಿರುಚಿಗೆ ತಕ್ಕಂತಹ ಸಿನಿಮಾ ಮಾಡಬೇಕೆಂದು ಜಾಗರೂಕತೆಯಿಂದ ಕಥೆಗಳನ್ನು ಆರಿಸಿಕೊಳ್ಳುತ್ತಿರುವ ವಿಷಯ ತಿಳಿದಿರುವುದೇ.
ಈ ರೀತಿ ಜಾಗರೂಕತೆಯಿಂದ ಆಯ್ಕೆ ಮಾಡಿದ ಕಥೆಗಳಲ್ಲಿ ಪಠಾಣ್ ಸಹ ಒಂದು. ಪಠಾಣ್ 1000 ಕೋಟಿ ಕ್ಲಬ್ ಸೇರಿದ್ದು, ಶಾರುಖ್ ಖಾನ್ ಯೋಜನೆಯಂತೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ವರ್ಷ ಇಲ್ಲಿಯವರೆಗೂ ಬಿಡುಗಡೆಗೊಂಡಿರುವ ಚಿತ್ರಗಳ ಪೈಕಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಏಕೈಕ ಸಿನಿಮಾ ಎನಿಸಿಕೊಂಡಿದೆ.

ಹೀಗೆ ಸೋತು ಗೆದ್ದು ನಿಂತಿರುವ ಶಾರುಖ್ ಖಾನ್ ಸದ್ಯ ಜವಾನ್ ಎಂಬ ಮತ್ತೊಂದು ಚಿತ್ರದ ಜತೆ ಬಾಕ್ಸ್ ಆಫೀಸ್ ಉಡೀಸ್ ಮಾಡಲು ಕಾಯುತ್ತಿದ್ದಾರೆ. ಹೌದು, ಜವಾನ್ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಇದು ಮತ್ತೊಂದು ಸಾವಿರ ಕೋಟಿಯ ಚಿತ್ರವಾಗುವುದು ಖಚಿತ ಎನ್ನುತ್ತಿದ್ದಾರೆ.
ಇನ್ನು ಜವಾನ್ ಟ್ರೈಲರ್ ಬಿಡುಗಡೆಗೊಂಡು ಎಲ್ಲೆಡೆ ಟ್ರೆಂಡ್ ಆಗಿದ್ದು, ಇಂದು ( ಜುಲೈ 13 ) ಶಾರುಖ್ ಖಾನ್ ಟ್ವಿಟರ್‌ನಲ್ಲಿ ತನ್ನ ಅನುಯಾಯಿಗಳ ಜತೆ ಚರ್ಚೆ ನಡೆಸಿದ್ದಾರೆ. ಟ್ವಿಟಿಗರು ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು ಎಂದು ಟ್ವೀಟ್ ಹಂಚಿಕೊಂಡಿದ್ದ ಶಾರುಖ್ ಖಾನ್ ನೆಟ್ಟಿಗರು ಕೇಳಿದ ಭಿನ್ನ ವಿಭಿನ್ನ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಈ ಪೈಕಿ ನೆಟ್ಟಿಗನೋರ್ವ "ಜವಾನ್ ಚಿತ್ರದ ಪಾತ್ರದ ಸಿದ್ಧತೆ ನಡೆಸಿಕೊಳ್ಳುವ ಸಲುವಾಗಿ ನೀವು ತುಂಬಾ ಸಿನಿಮಾಗಳನ್ನು ನೋಡಿದ್ದೀರಾ?" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಶಾರುಖ್ ಖಾನ್ "ಅಟ್ಲಿ ನಿರ್ದೇಶನದ ಹಲವಾರು ಚಿತ್ರಗಳನ್ನು ನಾನು ನೋಡಿದ್ದೇನೆ. ವಿಜಯ್ ಸರ್, ಅಲ್ಲು ಅರ್ಜುನ್ ಜೀ, ರಜನಿ ಸರ್, ಯಶ್ ಹಾಗೂ ಇತರೆ ನಟರ ಚಿತ್ರಗಳನ್ನು ಈಗ ಜನರು ಇಷ್ಟಪಡುವ ರೀತಿಯ ಮುಖಭಾವವನ್ನು ಕಲಿತುಕೊಳ್ಳಲು ನೋಡಿದ್ದೇನೆ" ಎಂದು ಉತ್ತರಿಸಿದ್ದಾರೆ.
ಈ ಮೂಲಕ ದಕ್ಷಿಣದ ಸ್ಟಾರ್‌ಗಳಾದ ದಳಪತಿ ವಿಜಯ್, ಅಲ್ಲು ಅರ್ಜುನ್, ರಜನಿಕಾಂತ್ ಹಾಗೂ ಯಶ್ ಈ ನಾಲ್ವರ ಚಿತ್ರಗಳನ್ನು ನೋಡಿ ಕಲಿತಿರುವುದಾಗಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.


Click it and Unblock the Notifications











