ಮಲಗಲು ಸಲ್ಮಾನ್ ಖಾನ್ ಕರೆದರೆ ಓಕೆ, ಇವನ್ಯಾರು ? ನಿರ್ದೇಶಕನ ವಿರುದ್ಧ ಕಿಡಿ ಕಾರಿದ ಕನ್ನಡ ಸಿನಿಮಾ ನಟಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.
ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೆಲವರು ಇಲ್ಲಿ ನೇರವಾಗಿಯೇ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ. ಚೂರು ಯಾಮಾರಿದರೂ ಕೂಡ ಸ್ಥಳ ಯಾವುದೇ ಇರಲಿ, ಅಲ್ಲಿಯೇ ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಸಂದೀಪಾ ವೀರ್ಕ್.
ಹೌದು, ಸಂದೀಪಾ ವಿರ್ಕ್.. ದೆಹಲಿಯ ಚೆಲುವೆ. ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸಂದೀಪಾ 'HybooCare' ಎಂಬ ಸೌಂದರ್ಯ ವರ್ಧಕ ಬ್ರ್ಯಾಂಡ್‌ನ ಸಂಸ್ಥಾಪಕರೂ ಹೌದು.
2015ರಲ್ಲಿ ಬಂದ ಪಂಜಾಬಿ ಚಿತ್ರ ''ಗನ್ & ಗೋಲ್'' ಮೂಲಕ ಚಿತ್ರರಂಗಕ್ಕೆ ಬಂದ ಸಂದೀಪಾ ''ದಿಲ್ ಸಾಲಾ ಸಂಕಿ'' ಚಿತ್ರದ ಮೂಲಕ ಬಾಲಿವುಡ್‌ನ ಪ್ರವೇಶ ಮಾಡಿದರು. ಧನ್ಯತ್ರಾ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಬಂದ ಸಂದೀಪಾ ಕನ್ನಡದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. 2022ರಲ್ಲಿ ತೆರೆಗೆ ಬಂದಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ''ಲೋಕಲ್ ಟ್ರೈನ್'' ಮತ್ತು 2023ರಲ್ಲಿ ಬಿಡುಗಡೆಯಾಗಿದ್ದ ಅಂಬಾಸಿಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಇವರ IMDb ಪ್ರೊಫೈಲ್ ಪ್ರಕಾರ 'ಹನಿ ಟ್ರ್ಯಾಪ್ ಸ್ಕ್ವಾಡ್' ಎಂಬ ವೆಬ್ ಸರಣಿಯಲ್ಲಿ ಕೂಡ ಸಂದೀಪಾ ಕಾಣಿಸಿಕೊಂಡಿದ್ದು ಅಜಿತ್ ಅಭಿನಯದ ಮಂಕಥಾ ಮತ್ತು ಮೋಹನ್ ಲಾಲ್ ಅಭಿನಯದ ಶಿಕ್ಕರ್ ಚಿತ್ರಗಳಲ್ಲಿ ಕೂಡ ಸಂದೀಪಾ ಅಭಿನಯಿಸಿದ್ದಾರೆ.

ಇಂಥಾ ಸಂದೀಪಾ ವೀರ್ಕ್ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಮಂಚಕ್ಕೆ ಸಲ್ಮಾನ್ ಖಾನ್ ಕರೆದರೆ ಅದಕ್ಕೆ ಒಂದು ಅರ್ಥ ಇರುತ್ತೆ, ಆದರೆ ಬದುಕಿನಲ್ಲಿ ಏನೆಂದರೆ ಏನೂ ಸಾಧನೆ ಮಾಡಿದವರು ಕರೆದರೆ ಹೇಗಿರಬೇಡ ಎಂದಿದ್ದಾರೆ.
ಈ ಕುರಿತು ''ಜ್ಯೋತ್ಸ್ನಾ ಬೇದಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂದೀಪಾ ವೀರ್ಕ್, ಪಂಜಾಬಿಯಲ್ಲಿ ನಾನೊಂದು ಚಿತ್ರ ಮಾಡುತ್ತಿದ್ದೆ, ದಿಲ್‌ಪ್ರೀತ್ ಧಿಲ್ಲೋನ್ ಆ ಚಿತ್ರದ ನಾಯಕ ಎಂದು ಹೇಳಿದ್ದಾರೆ.
ಅದಾಗಲೇ ಆ ಚಿತ್ರದ 7 ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು ಎಂದು ಹೇಳಿರುವ ಸಂದೀಪಾ ಅದೊಂದು ದಿನ ಚಿತ್ರದ ನಿರ್ದೇಶಕರು ನಡುರಾತ್ರಿ ನನ್ನ ರೂಮ್‌ನ ಬಾಗಿಲು ಬಡಿದರು ಎಂದು ಹೇಳಿದ್ದಾರೆ. ಒತ್ತಾಯಪೂರ್ವಕವಾಗಿ ಒಳಗಡೆ ಬಂದರು ಎಂದಿದ್ದಾರೆ.
ರೂಮ್ ಒಳಗಡೆ ಬಂದವರೇ ಸೀದಾ ನನ್ನ ಹಾಸಿಗೆಯ ಮೇಲೆ ಕುಂತು ನಾನು ಇವತ್ತು ಇಲ್ಲೇ ಮಲಗೋದು ಎಂದು ಅವರು ಹೇಳಿದರು ಎಂದು ಹೇಳಿರುವ ಸಂದೀಪಾ, ನನ್ನಿಂದ ಸಾಧ್ಯ ಇಲ್ಲ ಎಂದು ನಾನು ನೇರವಾಗಿಯೇ ಅವರಿಗೆ ಹೇಳಿದೆ ಎಂದಿದ್ದಾರೆ.

ಸಹಕಾರ-ಸಹಯೋಗ ನೀಡದಿದ್ದರೆ ಚಿತ್ರದಿಂದ ಕಿತ್ತೆಸೆಯುವುದಾಗಿ ಅವರು ಬೆದರಿಕೆ ಹಾಕಿದರು ಎಂದು ಹೇಳಿರುವ ಸಂದೀಪಾ 7 ದಿನ ಚಿತ್ರೀಕರಣ ನಡೆದಿತ್ತು ಈ ಹಿನ್ನೆಲೆ ತೆಗೆಯಲ್ಲ ಎನ್ನುವ ನಂಬಿಕೆ ನನಗೆ ಇತ್ತು, ಆ ನಂಬಿಕೆಯಲ್ಲಿಯೇ ನಾನು ಇಲ್ಲ ಎಂದು ಹೇಳಿದೆ ಎಂದಿದ್ದಾರೆ.
ಅಚ್ಚರಿ ಅಂದರೆ ಅವತ್ತು ನಾನು ಅವರ ಜೊತೆ ಮಲಗದ ಕಾರಣ ನಿಜವಾಗಿಯೂ ನನ್ನ ತಮ್ಮ ಚಿತ್ರದಿಂದ ಅವರು ಕಿತ್ತೆಸೆದರು ಎಂದು ಹೇಳಿರುವ ಸಂದೀಪಾ ವೀರ್ಕ್ ಆ ಸಿನಿಮಾ ಚಿತ್ರಮಂದಿರದಲ್ಲಿ ಓಡಲಿಲ್ಲ ಅನ್ನೋದು ಬೇರೆ ವಿಷಯ ಅಂದಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ಮತ್ತೊಂದು ಕಹಿ ಅನುಭವ ಹಂಚಿಕೊಂಡಿರುವ ಸಂದೀಪಾ ವೀರ್ಕ್, ಮತ್ತೊಬ್ಬ ನಿರ್ದೇಶಕರು ನಾನು ಉಳಿದುಕೊಂಡಿರುವ ಹೊಟೇಲ್‌ನಲ್ಲಿ ಬಂದು ರೂಮ್ ಮಾಡು ಆ ನಂತರ ಚಿತ್ರದ ಚಿತ್ರೀಕರಣದ ಬಗ್ಗೆ ಯೋಚನೆ ಮಾಡೋಣ ಎಂದು ಹೇಳಿದ್ದರು ಎಂದಿದ್ದಾರೆ. ನಾನು ಇಲ್ಲ ನಾನು ನನ್ನ ಹೊಟೇಲ್‌ನಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದರು ಕೂಡ ಆ ವ್ಯಕ್ತಿ ಕೇಳಲಿಲ್ಲ, ಬದಲಿಗೆ ಒತ್ತಾಯ ಮಾಡಿದ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಸಂದೀಪಾ ವೀರ್ಕ್, ನಿನ್ನಷ್ಟಕ್ಕೆ ನಿನ್ನನ್ನ ನೀನು ಸಲ್ಮಾನ್ ಖಾನ್ ಅಂತ ಅಂದುಕೊಂಡಿದ್ದೀಯಾ ಹೇಗೆ..? ಎಂದು ನಾನು ಕೇಳಿದೆ ಎಂದು ಹೇಳಿರುವ ಸಂದೀಪಾ, ಅಪ್ಪಿ ತಪ್ಪಿ ಸಲ್ಮಾನ್ ಖಾನ್ ಈ ತರಹದ ಮಾತುಗಳನ್ನಾಡಿದರೆ ಅದಕ್ಕೊಂದು ಅರ್ಥ ಇರುತ್ತೆ, ಯಾಕೆಂದರೆ ಅವರಿಗೊಂದು ಬೆಲೆ ಇದೆ ಎಂದಿದ್ದಾರೆ.
ಸಾಧನೆಯ ಶಿಖರಕ್ಕೇರಿದವರು ಇಂತಹ ಹುಂಬು ಧೈರ್ಯ ಮಾಡಿದರೆ ಅಥವಾ ಈ ತರಹದ ಮಾತುಗಳನ್ನಾಡಿದರೆ ಏನೋ ಮಾತನಾಡ್ತಿದ್ದಾರೆ ಅಂದುಕೊಳ್ಳಬಹುದು ಎಂದು ಹೇಳಿರುವ ಸಂದೀಪಾ ಜೀವನದಲ್ಲಿ ಏನೆಂದರೆ ಏನೂ ಸಾಧನೆ ಮಾಡದ ವ್ಯಕ್ತಿಯೊಬ್ಬ ಈ ತರಹದ ಮಾತಾಡಿದರೆ ಸಹಿಸಲು ಹೇಗೆ ಸಾಧ್ಯ ಎಂದಿದ್ದಾರೆ. ನಿರ್ದೇಶಕ ಅಥವಾ ನಿರ್ಮಾಪಕ ಆದ ಮಾತ್ರಕ್ಕೆ ಹೆಣ್ಣು ಮಕ್ಕಳ ಜೊತೆ ನೀವು ಹೇಗೆ ಬೇಕಾದರೂ ನಡೆದುಕೊಳ್ಳಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದ್ಹಾಗೇ ಕಳೆದ ವರ್ಷ ಸಂದೀಪಾ ವಿರ್ಕ್ ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪಿಟಿಐ ವರದಿಯ ಪ್ರಕಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ನಂಬಿಸಿ ಹೂಡಿಕೆದಾರರಿಂದ ಹಣ ಪಡೆದು ಅವರಿಗೆ ಪಂಗನಾಮವನ್ನು ಹಾಕಿದ್ದ ಸಂದೀಪಾ ಆ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದರು. ಇ-ಕಾಮರ್ಸ್ ವೇದಿಕೆಗಳಿಗೆ ಹಣ ವರ್ಗಾಯಿಸಿದ್ದರು.
ಹೀಗೆ ಜಾರಿ ನಿರ್ದೇಶನಾಲಯದ (ED)ದ ಬಲೆಗೆ ಬಿದ್ದ ಸಂದೀಪಾ ಆಗಲೇ ಹೇಳಿದಂತೆ ಕಳೆದ ವರ್ಷ ಆಗಸ್ಟ್ 14ರಂದು ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿಗೆ ಹೋಗಿದ್ದರು. ಹೆಚ್ಚು ಕಡಿಮೆ 4 ತಿಂಗಳು ಸೆರೆವಾಸ ಅನುಭವಿಸಿದ್ದರು.


Click it and Unblock the Notifications