For Quick Alerts
  ALLOW NOTIFICATIONS  
  For Daily Alerts

  ಗೋವಾ ಸಿನಿಮೋತ್ಸವದಲ್ಲಿ ಪುನೀತ್, ಸಂಚಾರಿ ವಿಜಯ್‌ಗೆ ಗೌರವ

  |

  ನಾಳೆ (ನವೆಂಬರ್ 2೦) ರಿಂದ ಆರಂಭವಾಗುವ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇತ್ತೀಚೆಗಷ್ಟೆ ನಮ್ಮನ್ನಗಲಿದ ನಟ ಪುನೀತ್ ರಾಜ್‌ಕುಮಾರ್ ಹಾಗೂ ಮರೆಯಾದ ಕನ್ನಡದ ಮತ್ತೊಬ್ಬ ಅತ್ಯುತ್ತಮ ನಟ ಸಂಚಾರಿ ವಿಜಯ್‌ ಅವರುಗಳಿಗೆ ಗೌರವ ಸಲ್ಲಿಸಲಾಗುತ್ತದೆ.

  52ನೇ ಅಂತಾರಾಷ್ಟ್ರೀಯ ಸಿನಿಮೋತ್ಸವವು ನಾಳೆ ಗೋವಾದಲ್ಲಿ ಆರಂಭವಾಗಲಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ಅಗಲಿದ ಶ್ರೇಷ್ಠ ಕಲಾವಿದರಿಂದ ಗೌರವ ಸೂಚಿಸುವ ಕಾರ್ಯ ಆಗಲಿದೆ. ದುರಾದೃಷ್ಟವಶಾತ್ ಈ ಬಾರಿ ಕನ್ನಡದ ಇಬ್ಬರು ಪ್ರತಿಭಾವಂತ ಯುವ ನಟರಿಗೂ ಗೌರವ ಸಲ್ಲಿಕೆ ಆಗುತ್ತಿದೆ. ಇದೇ ವರ್ಷದ ಜೂನ್ 25 ರಂದು ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ನಿಧನ ಹೊಂದಿದರು.

  ಮತ್ತೊಂದು ವಿಶೇಷತೆಯೆಂದರೆ ಸಂಚಾರಿ ವಿಜಯ್‌ಗೆ ಗೌರವ ಸಲ್ಲಿಸಲಾಗುತ್ತಿರುವ ಇದೇ ಅಂತರಾಷ್ಟ್ರೀಯ ಸಿನಿಮೋತ್ಸವದ ಪನೋರಮಾ ವಿಭಾಗದಲ್ಲಿ ಅವರ ನಟನೆಯ 'ತಲೆದಂಡ' ಹಾಗೂ 'ಆಕ್ಟ್ 1978' ಎರಡು ಸಿನಿಮಾಗಳು ಪ್ರದರ್ಶಿತವಾಗುತ್ತಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ನಟಿಸಿ, ಎನ್ ಲಕ್ಷ್ಮಿನಾರಾಯಣ್ ನಿರ್ದೇಶಿಸಿದ ಬೆಟ್ಟದ ಹೂವು ಪ್ರದರ್ಶನವಾಗುತ್ತಿದೆ. ಹಾಗೇ ಡಾ. ರಾಜ್‌ಕುಮಾರ್ ಅಭಿನಯಿಸಿದ್ದ ಸಂಧ್ಯರಾಗ ಚಿತ್ರ ಕೂಡ ಇದೇ ಚಲನ ಚಿತ್ರೋತ್ಸವದಲ್ಲಿ ಬಿಡುಗಡೆಯಾಗಲಿದೆ.

  ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಮಾತ್ರವೇ ಅಲ್ಲದೆ, ಭಾರತೀಯ ಸಿನಿಮಾ ಇತಿಹಾಸದಲ್ಲಿ ದಂತಕತೆ ಎನಿಸಿಕೊಂಡಿರುವ ನಟ ದಿಲೀಪ್ ಕುಮಾರ್ ಅವರಿಗೂ ಗೌರವ ಸಲ್ಲಿಸಲಾಗುತ್ತದೆ. ದಿಲೀಪ್ ಕುಮಾರ್ ಅವರು ವಯೋಸಹಜ ಅನಾರೋಗ್ಯದಿಂದ ಜುಲೈ 7 ರಂದು ನಿಧನ ಹೊಂದಿದರು.

  ಇವರೊಟ್ಟಿಗೆ ಪ್ರಖ್ಯಾತ ಸಿನಿಮಾಕರ್ಮಿಗಳಾದ ಬುದ್ಧದೇವ ದಾಸ್‌ಗುಪ್ತಾ, ಸುಮಿತ್ರಾ ಭಾವೆ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಸುರೇಖ ಸಿಕ್ರಿ ಅವರಿಗೂ ಗೌರವ ಸಲ್ಲಿಸಲಾಗುತ್ತದೆ. ಇವರೆಲ್ಲರ ಜೊತೆಗೆ ಜಗತ್ತಿನ ಮೊದಲ ಬಾಂಡ್ ಸಿನಿಮಾದಲ್ಲಿ ನಾಯಕ ಜೇಮ್ಸ್ ಬಾಂಡ್ ಆಗಿ ನಟಿಸಿದ ಸೀನ್ ಕಾನರಿಗೂ ಸಿನಿಮೋತ್ಸವದಲ್ಲಿ ಗೌರವ ಸಲ್ಲಿಕೆ ಆಗಲಿದೆ.

  ಗೌರವ ಸಲ್ಲಿಕೆಯ ಹೊರತಾಗಿ 2021ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ಶ್ರೀಮತಿ ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಶಿ ಅವರಿಗೆ ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಘೋಷಿಸಿದ್ದಾರೆ. ಹೇಮಾಮಾಲಿನಿ, ಜನಪ್ರಿಯ ನಟಿಯಾಗಿರುವ ಜೊತೆಗೆ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆಯೂ ಆಗಿದ್ದಾರೆ. ಇನ್ನು ಪ್ರಸೂನ್ ಜೋಶಿ ಹಾಲಿ ಸಿಬಿಎಫ್‌ಸಿ ಅಧ್ಯಕ್ಷರಾಗಿದ್ದಾರೆ. ಚಿತ್ರ ಸಾಹಿತಿ, ಗೀತ ರಚನೆಕಾರರಾಗಿಯೂ ಜನಪ್ರಿಯರು.

  ಇವರಿಬ್ಬರ ಜೊತೆಗೆ ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಆಸ್ಕರ್ ವಿಜೇತ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

  52ನೇ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವವು ನವೆಂಬರ್ 20 ರಂದು ಪ್ರಾರಂಭಗೊಂಡ ನವೆಂಬರ್ 28 ಕ್ಕೆ ಅಂತ್ಯವಗಲಿದೆ. ಉದ್ಘಾಟನಾ ಕಾರ್ಯಕ್ರಮವನ್ನು ಜನಪ್ರಿಯ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮತ್ತು ನಟ, ನಿರೂಪಕ ಮನೀಶ್ ಪೌಲ್ ನಿರೂಪಣೆ ಮಾಡಲಿದ್ದಾರೆ. ಹಲವು ಅಂತರಾಷ್ಟ್ರೀಯ ಸಿನಿಮಾಗಳು, ದೇಸಿ ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ. ಜೊತೆಗೆ ಸಿನಿಮಾ ಕರ್ಮಿಗಳ ಜೊತೆಗೆ ಸಂವಾದ ಕಾರ್ಯಕ್ರಮವೂ ಆಯೋಜಿತವಾಗಿದೆ. ಗೋವಾ ಸಿನಿಮೋತ್ಸವವು ಏಷ್ಯಾದ ಪ್ರತಿಷ್ಠಿತ ಹಾಗೂ ಭಾರತದ ಅತಿ ದೊಡ್ಡ ಸಿನಿಮೋತ್ಸವ ಎಂದು ಹೆಸರಾಗಿದೆ.

  English summary
  IFFI or Goa international film festival to honor late actor Puneeth Rajkumar, Sanchari Vijay, Dilip Kumar, filmmakers Sumitra Bhave, Buddhadeb Dasgupta, Surekha Sikri.
  Friday, November 19, 2021, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X