ನ್ಯೂಸ್ ಚಾನೆಲ್‌ನಲ್ಲಿ ಕುಂತಿದ್ದೇ ಅಷ್ಟೇ, ಬಂದು ಹೊಡೆದರು, ಬಡಿದರು- ಕಣ್ಣೀರು ಹಾಕಿದ ಐಐಟಿ ಬಾಬಾ..!
ಕೆಲವರು ತುಂಬಾ ಓದಿರುತ್ತಾರೆ. ಮನೆಯವರ ಬಲವಂತಕ್ಕೆ ಯಾವುದ್ಯಾವುದೋ ಕೋರ್ಸ್ ಮಾಡಿರುತ್ತಾರೆ. ಆದರೆ ಇಂತಹವರಿಗೆ ನೌಕರಿ ಸೇರುವ ಯಾವ ಮನಸು ಇರುವುದಿಲ್ಲ. ಬದಲಿಗೆ ಆಧ್ಯಾತ್ಮ ಇವರನ್ನು ಸೆಳೆಯುತ್ತಿರುತ್ತೆ ಉದಾಹರಣೆಗೆ ಐಐಟಿ ಬಾಬಾ.
ಹೌದು, ಈ ವರ್ಷದ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಪಾಪ -ಕರ್ಮಗಳನ್ನು ಕಳೆದುಕೊಂಡವರ ಸಂಖ್ಯೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಯೋಗಿ ಸರ್ಕಾರಕ್ಕೆ ಗೊತ್ತಾದರೂ ಈ ಮಹಾಕುಂಭ ಮೇಳ ಅನೇಕರ ಅದೃಷ್ಟವನ್ನು ಬದಲಿಸಿದೆ. ಆ ಪೈಕಿ ಮೊನಾಲಿಸಾ ಒಬ್ಬರಾದರೆ ಮತ್ತೊಬ್ಬರು ಈ ಐಐಟಿ ಬಾಬಾ.

ಮುಂಬೈನ ಪ್ರತಿಷ್ಠಿತ ಕಾಲೇಜ್‌ನಲ್ಲಿ ತಾನು ಐಐಟಿ ಪದವಿಯನ್ನು ಪಡೆದಿರುವುದಾಗಿ ಹೇಳುವ ಈ ಬಾಬಾ ಅಲಿಯಾಸ್ ಅಭಯ್ ಸಿಂಗ್ ಎಂಬ ವ್ಯಕ್ತಿ ಕೆನಡಾದಲ್ಲಿ ಕೈ ತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಎಡಗಾಲಿನಲ್ಲಿ ಒದ್ದು ಬಂದಿದ್ದಾಗಿ ಹೇಳಿ ಹಿಂದೆ ಸುದ್ದಿಯಾಗಿದ್ದರು. ಮಹಾಕುಂಭ ಮೇಳದಲ್ಲಿ ಎಲ್ಲರೂ ಸ್ನಾನ ಮಾಡಲು ಎಲ್ಲರೂ ಕಾಯುತ್ತಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು.
ಇಷ್ಟೇ ಯಾಕೆ ತನ್ನಲ್ಲಿ ನಿಗೂಢವಾದ ಶಕ್ತಿ ಇದೆ ಎಂದು ಹೇಳಿ ನಂಬಿಸಿ ಭವಿಷ್ಯವನ್ನು ಹೇಳಲು ಶುರು ಮಾಡಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊನ್ನೆ ಮೊನ್ನೆಯಷ್ಟೇ ಇದೇ ಐಐಟಿ ಬಾಬಾ ಭವಿಷ್ಯವನ್ನು ನುಡಿದಿದ್ದರು. ತ್ರಿಕಾಲಜ್ಞಾನಿಯಂತೆ ಮಾತನಾಡಿ ಪಾಕಿಸ್ತಾನದ ವಿರುದ್ದ ಭಾರತ ಸೋಲುತ್ತೆ ಎಂದು ಕೂಡ ಹೇಳಿದ್ದರು.
ಇಂಥಾ ಐಐಟಿ ಬಾಬಾ ಮೇಲೆ ಸದ್ಯ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಜನ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಖುದ್ದು ಐಐಟಿ ಬಾಬಾ ಅಭಯ್ ಸಿಂಗ್ ಈ ವಿಚಾರವನ್ನು ಹಂಚಿಕೊಂಡಿದ್ಧಾರೆ. ಆರೋಪ ಮಾಡಿ ದೂರನ್ನು ಕೂಡ ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಖಾಸಗಿ ವಾಹಿನಿಯ ಚರ್ಚೆಯ ವೇಳೆ ಕೇಸರಿ ಶಾಲು ಧರಿಸಿದ್ದ ಗುಂಪೊಂದು ಸ್ಟುಡಿಯೋವನ್ನು ಪ್ರವೇಶಿಸಿ ಆ ನಂತರ ತಮ್ಮೊಂದಿಗೆ ಅನುಚಿತವಾಗಿ ವರ್ತಿಸುವುದಲ್ಲದೇ ಕೋಲಿನಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಸೆಕ್ಟರ್ 126ರಲ್ಲಿ ಪೊಲೀಸ್ ಔಟ್ ಫೋಸ್ಟ್ ಹೊರಗೆ ಪ್ರತಿಭಟನೆಯನ್ನು ಕೂಡ ಮಾಡಿದ್ದಾರೆ. ಪೊಲೀಸರು ಮನವೊಲಿಸಿದ ನಂತರ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕೂಡ ಮಾಹಿತಿಯನ್ನು ನೀಡಿದ್ದು ನೋಯ್ಡಾದಲ್ಲಿ ಖಾಸಗಿ ವಾಹಿನಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಐಐಟಿ ಬಾಬಾ ಆರೋಪವನ್ನು ಮಾಡಿದ್ದಾರೆ, ವೈರಲ್ ಆದ ವಿಡಿಯೋದಲ್ಲಿ ಚರ್ಚೆಗೆ ಹೋಗುವಾಗ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಾಬಾ ಆರೋಪಿಸಿದ್ದಾರೆ, ಈ ಕುರಿತು ತನಿಖೆ ನಡೆಯುತ್ತಿದ್ದು ಮೇಲ್ನೋಟಕ್ಕೆ ಯಾವುದೇ ಹಲ್ಲೆ ನಡೆದಿಲ್ಲ ಎನ್ನುವಂತೆ ಕಾಣುತ್ತಿದೆ ಎಂದಿದ್ದಾರೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ಧಾರೆ.
ಅಂದ್ಹಾಗೇ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಹರಿಯಾಣಾ ಮೂಲದ ವ್ಯಕ್ತಿ. ವರದಿಗಳ ಪ್ರಕಾರ 2014ರಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಒಳ್ಳೆಯ ಕೆಲಸಕ್ಕೆ ಇದ್ದ ಈ ವ್ಯಕ್ತಿ ಆ ನಂತರ ಕೆಲಸ ಬಿಟ್ಟು ಫೋಟೊಗ್ರಾಫಿಯ ಗೀಳು ಅಂಟಿಸಿಕೊಂಡರು. ಕ್ರಮೇಣ ಫೋಟೊಗ್ರಫಿಯನ್ನೇ ವೃತ್ತಿಯನ್ನಾಗಿ ತೆಗೆದುಕೊಂಡಿದ್ದರು.


Click it and Unblock the Notifications











