ಮದುವೆಯಾದ ಎರಡು ವರ್ಷದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ ಇಲಿಯಾನ..!
ಉತ್ತರದಿಂದ.. ದಕ್ಷಿಣಕ್ಕೆ ವಲಸೆ ಬಂದು ಎರಡನೇ ಚಿತ್ರ ಪೋಕಿರಿಯಲ್ಲಿಯೇ ಪ್ರಚಂಡ ಗೆಲುವನ್ನ ಕಂಡವರು ಇಲಿಯಾನ ಡಿ ಕ್ರೂಸ್. ಅಲ್ಲಿಂದಾಚೆ.. ಇಲಿಯಾನ ನಲಿದ್ದಿದ್ದು.. ನುಲಿದ್ದಿದ್ದು.. ಇಲ್ಲಿಯೇ. ಮುನ್ನಾ.. ಜಲ್ಸಾ.. ಕಿಕ್.. ಶಕ್ತಿ.. ಜುಲಾಯಿ.. ಹೀಗೆ ಒಂದಾದ ಮೇಲೊಂದು ಸಿನಿಮಾದಲ್ಲಿ ಕಾಣಿಸಿಕೊಂಡ ಇಲಿಯಾನ, ಸದ್ಯ ಎರಡನೇ ಮಗುಗೆ ಜನ್ಮ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.
ಹೌದು, ಅಸಲಿಗೆ 2023ರಲ್ಲಿ ಇಲಿಯಾನ ಮದುವೆಯಾಗದೇ ತಾಯಿಯಾಗುತ್ತಿರುವ ಸಮಾಚಾರವನ್ನು ಹಂಚಿಕೊಂಡಿದ್ದರು. ಇಲಿಯಾನ ನೀಡಿದ ಈ ಸುದ್ದಿಯಿಂದ ಅವಕ್ಕಾಗಿದ್ದ ಎಲ್ಲರು ಇಲಿಯಾನ ಹೃದಯ ಗೆದ್ದ ಹುಡುಗ ಯಾರು ಎಂದು ಹುಡುಕಲು ಶುರು ಮಾಡಿದ್ದರು.

ಆಗ ಆ ವ್ಯಕ್ತಿಯ ಹೆಸರು ಮೈಕಲ್ ಡೋಲನ್ ಎಂಬ ವಿಚಾರ ಗೊತ್ತಾಗಿತ್ತು. ಇಲಿಯಾನಾ ಪ್ರೆಗ್ನೆನ್ಸಿ ಬಗ್ಗೆ ಹೇಳಿಕೊಳ್ಳುವ ನಾಲ್ಕು ವಾರಗಳ ಹಿಂದಷ್ಟೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಜಗಜ್ಜಾಹೀರಾಗಿತ್ತು. ಆ ನಂತರ 2023ರ ಆಗಸ್ಟ್‌ನಲ್ಲಿ ಗಂಡು ಮಗುಗೆ ಜನ್ಮ ನೀಡಿದ್ದ ಇಲಿಯಾನ ತಮ್ಮ ಮಗುಗೆ 'ಕೋವಾ ಫಿನಿಕ್ಸ್ ಡೋಲನ್' ಎಂದು ಹೆಸರಿಟ್ಟಿದ್ದರು.
ಇಂಥಾ ಇಲಿಯಾನ ಮೊದಲ ಮಗುಗೆ ಜನ್ಮ ನೀಡಿ ಇನ್ನು ಎರಡು ವರ್ಷವಾಗಿಲ್ಲ. ಆದರೆ ಅಷ್ಟರಲ್ಲಿಯೇ ಇಲಿಯಾನ ಮತ್ತೊಂದು ಗಂಡು ಮಗುಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಇಲಿಯಾನಾ "ಜೂನ್ 19, 2025 ರಂದು ಜನಿಸಿದ ನನ್ನ ಮಗನನ್ನು ನಿಮ್ಮೆಲ್ಲರಿಗೆ ಪರಿಚಯ ಮಾಡಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಮಗನಿಗೆ 'ಕೀನು ರಾಫೆ ಡೋಲನ್' ಎಂದು ನಾಮಕರಣ ಮಾಡಿರುವುದಾಗಿ ಕೂಡ ಹೇಳಿದ್ದಾರೆ.
ಸದ್ಯ ಅನೇಕರು ಇಲಿಯಾನ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಸೇರಿ ಚಿತ್ರರಂಗದ ಅನೇಕರು ಇಲಿಯಾನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಂದ್ಹಾಗೇ ಕೀನು ಎಂದರೆ thebump.com ಪ್ರಕಾರ ತಂಪಾದ ಗಾಳಿಯೆಂದು ಅರ್ಥ. ತಮ್ಮ ಎರಡನೇ ಮಗ ತಂಪಾದ ಗಾಳಿಯಂತೆ ಮುದ ನೀಡಲಿ ಎನ್ನುವ ಉದ್ದೇಶದಿಂದ ಇಲಿಯಾನ ಈ ಹೆಸರು ಇಟ್ಟಿದ್ದಾರೆ ಎಂದು ಸದ್ಯ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ಇಲಿಯಾನಾ ಆಗಾಗ ಚಿಕ್ಕದೊಂದು ಸುಳಿವನ್ನು ನೀಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಇಲಿಯಾನ ತಮ್ಮ ಮನೆಗೆ ಎರಡನೇ ಮಗು ಬರುತ್ತಿರುವ ವಿಚಾರವನ್ನು ಪರೋಕ್ಷವಾಗಿ ಹಂಚಿಕೊಂಡಿದ್ದರು. ಹೊಸ ವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದರು. ಈಗ ತಾವು ಎರಡನೇ ಬಾರಿ ಮಗುಗೆ ಜನ್ಮ ನೀಡಿದ್ದಾರೆ. ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಇಲಿಯಾನಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ಮನೆ ಗಂಡ ಮಗು ಎಂದು ತಮ್ಮ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ.ದೋ ಔರ್ ದೋ ಪ್ಯಾರ್ ಚಿತ್ರವೇ ಕೊನೆ. ಆ ನಂತರ ಮತ್ತೆ ಇಲಿಯಾನಾ ಮತ್ತೆ ಬಣ್ಣ ಹಚ್ಚಿಲ್ಲ. ಇನ್ನು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಇಲಿಯಾನಾ ಕಾಣಿಸಿಕೊಂಡು ಅನೇಕ ವರ್ಷಗಳೇ ಆಗಿವೆ. ಈ ಕುರಿತು ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದ ಇಲಿಯಾನಾ ದಕ್ಷಿಣ ಭಾರತೀಯ ಚಿತ್ರರಂಗದಿಂದ ನಾನು ದೂರವಾಗಿಲ್ಲ ಅವರೇ ನನ್ನನ್ನೂ ದೂರ ಮಾಡಿದ್ದಾರೆ ಎಂದು ಹೇಳಿದ್ದರು.
ರಣ್ಭೀರ್ ಕಪೂರ್ ಅಭಿನಯದ, ಅನುರಾಗ್ ಬಸು ನಿರ್ದೇಶನದ ಬರ್ಫಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ತೆರಳಿದ ಸಮಯದಲ್ಲಿ ಇನ್ಮುಂದೆ ಇಲಿಯಾನ, ತೆಲುಗು-ತಮಿಳು ಸಿನಿಮಾಗಳನ್ನ ಮಾಡುವುದಿಲ್ಲ ಎಂದು ಅನೇಕರು ಹುಯಿಲೆಬ್ಬಿಸಿದರು. ಹರಡಲಾದ ಈ ಸುದ್ದಿಯನ್ನೇ ಬಹುತೇಕರು ನಿಜಾ ಎಂದುಕೊಂಡರು. ನನ್ನನ್ನೂ ತಮ್ಮ ಚಿತ್ರಕ್ಕೆ ಸಂಪರ್ಕ ಮಾಡುವುದನ್ನು ಕೂಡ ಅಲ್ಲಿನ ನಿರ್ಮಾಪಕರು ಮತ್ತು ನಿರ್ದೇಶಕರು ನಿಲ್ಲಿಸಿದರು ಎಂದು ಇಲಿಯಾನ ಹೇಳಿದ್ದರು. ಹೀಗೆ ಚಿತ್ರರಂಗದಿಂದ ದೂರವಾಗಿರುವ ಇಲಿಯಾನಾ ಸದ್ಯ ಎರಡನೇ ಬಾರಿ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ.


Click it and Unblock the Notifications











