ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ
ಖ್ಯಾತ ಗಾಯಕ ಉದ್ದಿತ್ ನಾರಾಯಣ್ ಪುತ್ರ, ಪ್ರಸಿದ್ಧ ನಿರೂಪಕ ಆದಿತ್ಯ ನಾರಾಯಣ್ ಇಂದು (ಡಿಸೆಂಬರ್ 1) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿತ್ಯ ಬಹುಕಾಲದ ಗೆಳತಿ ಶ್ವೇತಾ ಅಗರ್ವಾಲ್ ಜೊತೆ ಇಂದು ಮುಂಬೈನಲ್ಲಿ ಸಪ್ತಪದಿ ತುಳಿದಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆದಿತ್ಯ, ಶ್ವೇತಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ಆದಿತ್ಯ ಶ್ವೇತವರ್ಣದ ಶೇರ್ವಾನಿಯಲ್ಲಿ ಮಿಂಚಿದ್ರೆ, ಶ್ವೇತಾ ಅಗರ್ವಾಲ್ ಬಿಳಿ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದಿತ್ಯ ದಂಪತಿಗೆ ಚಿತ್ರರಂಗ ಗಣ್ಯರು ಮತ್ತು ಸ್ನೇಹಿತರು ಶುಭಶಾಯ ಕೋರುತ್ತಿದ್ದಾರೆ.
ನಿನ್ನೆಯಿಂದ ಆದಿತ್ಯ ಮತ್ತು ಶ್ವೇತಾ ಮದುವೆ ಪೂರ್ವ ಶಾಸ್ತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಆದಿತ್ಯ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ಕೊರೊನಾ ಕಾರಣ ತೀರ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಇಂಗ್ಲಿಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ್ದ ಆದಿತ್ಯ, ಡಿಸೆಂಬರ್ 1ರಂದು ಮದುವೆ. ಕೊರೊನಾ ವೈರಸ್ ಪರಿಣಾಮ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮದುವೆಗೆ 50 ಕ್ಕು ಹೆಚ್ಚು ಮಂದಿ ಭಾಗಿಯಾಗುವ ಹಾಗಿಲ್ಲ. 50ಕ್ಕೂ ಹೆಚ್ಚು ಜನಕ್ಕೆ ಅನುಮತಿ ಇಲ್ಲ' ಎಂದು ಹೇಳಿದ್ದಾರೆ.

ಇಂಡಿಯನ್ ಐಡಲ್ ನ ನಿರೂಪಕ ಆದಿತ್ಯ ಮತ್ತು ಶ್ವೇತಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ವಿಕ್ರಮ್ ಭಟ್ ಅವರ ಶಾಪಿಟ್ ಚಿತ್ರದ ಸಮಯದಿಂದ ಪ್ರಾರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿ ಇದೀಗ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಹಸೆಮಣೆ ಏರುತ್ತಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಅನೇಕ ಬಾರಿ ಸದ್ದು ಮಾಡಿದ್ದರು, ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಕೊನೆಯದಾಗಿ ಕಳೆದ ತಿಂಗಳು ಇಬ್ಬರು ಮದುವೆ ಆಗುತ್ತಿರುವುದಾಗಿ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.


Click it and Unblock the Notifications











