ವೇಶ್ಯಾವೃತ್ತಿಯೂ ಕೂಡ ಸಮಾಜ ಸೇವೆ, ಮಹಿಳೆಯರು ಸುರಕ್ಷಿತವಾಗಿರಲು ಅವರೇ ಕಾರಣ ; ಚರ್ಚೆಗೀಡಾದ ಖ್ಯಾತ ನಟಿಯ ಹೇಳಿಕೆ
ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ.
ಆದರೆ ಇದರ ನಡುವೆ ಪರಂಪರಾಗತವಾಗಿ ಬಂದ ಮೌಲ್ಯವೆಂಬಂತೆ ವೇಶ್ಯಾವೃತ್ತಿಯನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವ ಸಮುದಾಯ, ಪಂಗಡಗಳು ನಮ್ಮ ದೇಶದಲ್ಲಿವೆ. ವೇಶ್ಯಾವೃತ್ತಿಯಿಂದಲೇ ಮನೆಯವರೆಲ್ಲರ ಹೊಟ್ಟೆ ಹೊರೆಯುವ, ಅವರ ಅಗತ್ಯಗಳನ್ನು ಪೂರೈಸುವ ಹೆಣ್ಣುಮಕ್ಕಳ ಬದುಕು ನಿಜಕ್ಕೂ ಬರ್ಬರ.

ನಾಗರಿಕ ಜಗತ್ತು ಇದನ್ನು ಸಮಾಜಕ್ಕೆ ಅಂಟಿದ ಶಾಪ ಎಂದು ಕರೆದು ದೂರ ಇಡಲು ಪ್ರಯತ್ನಿಸಿದರೂ, ಇದೇ ಸಮಾಜದ ಒಳಗಿನ ಹಸಿವು ಮತ್ತು ಬೇಡಿಕೆಗಳು ಈ ಕರಾಳ ವ್ಯವಸ್ಥೆಯನ್ನು ಎಂದಿಗೂ ಜೀವಂತವಾಗಿಟ್ಟಿವೆ. ಇದು ಶೋಷಣೆ, ಮೌನ ಮತ್ತು ತಾರತಮ್ಯದ ಒಂದು ನಿರಂತರ ಚಕ್ರವಾಗಿ ಮಾರ್ಪಟ್ಟಿದ್ದು ಸದ್ಯ ಇದೇ ವೇಶ್ಯಾವೃತ್ತಿಯನ್ನು ಅನುಪ್ರಿಯಾ ಗೋಯೆಂಕಾ ಸಮಾಜ ಸೇವೆಗೆ ಹೋಲಿಸಿದ್ದಾರೆ. ಈ ಮೂಲಕ ಚರ್ಚೆಗೆ ಮುನ್ನುಡಿಯನ್ನು ಬರೆದಿದ್ದಾರೆ.
ಹೌದು, ಮಂಚು ಮನೋಜ್ ಅಭಿನಯದ ತೆಲುಗು ಚಿತ್ರ ''ಪೊಟುಗಾಡು'' ಮೂಲಕ ಚಿತ್ರರಂಗಕ್ಕೆ ಬಂದವರು ಅನುಪ್ರಿಯಾ ಗೋಯೆಂಕಾ. ಆ ನಂತರ ಹಿಂದಿಯಲ್ಲಿಯೇ ಬ್ಯುಸಿಯಾದ ಉತ್ತರ ಪ್ರದೇಶದ ಈ ಚೆಲುವೆ ಜಾನ್ ಅಬ್ರಾಹಿಂ ಮತ್ತು ವರುಣ್ ಧವನ್ ಅಭಿನಯದ ''ಡಿಶೂಂ'' ಚಿತ್ರದಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ''ಟೈಗರ್ ಜಿಂದಾ ಹೈ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ''ಪದ್ಮಾವತ್'' ಮತ್ತು ''ವಾರ್'' ಅನುಪ್ರಿಯಾ ಅಭಿನಯದ ಇನ್ನೆರಡು ಪ್ರಮುಖ ಚಿತ್ರಗಳು.
ಸದ್ಯ ಅನುಪ್ರಿಯಾ ಗೋಯೆಂಕಾ ಅವರಿಗೆ ವೆಬ್ ಲೋಕದಲ್ಲಿ ಉತ್ತಮವಾದ ಪಾತ್ರಗಳು ಸಿಗುತ್ತಿವೆ. ''ಅಭಯ್'', ''ಕ್ರಿಮಿನಲ್ ಜಸ್ಟಿಸ್'' , ''ಅಸುರ್'', ''ಆಶ್ರಮ್'' ಹೀಗೆ ಅನೇಕ ವೆಬ್ ಸರಣಿಗಳನ್ನು ಅನುಪ್ರಿಯಾ ಮಾಡಿದ್ದಾರೆ. ತಮ್ಮದೇ ವಿಶಿಷ್ಟ ಸ್ಥಾನ ಮಾನ ಕೂಡ ಸಂಪಾದಿಸಿದ್ದಾರೆ. ಇಂಥಾ ಅನುಪ್ರಿಯಾ ಗೋಯೆಂಕಾ ಸದ್ಯ ವೇಶ್ಯೆಯರು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ''ಫಿಲ್ಮಿಗ್ಯಾನ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅನುಪ್ರಿಯಾ ಗೋಯೆಂಕಾ, ''ನಮ್ಮ ದೇಶದಲ್ಲಿ ಜೀವನೋಪಾಯಕ್ಕೆ ಹಲವರು ವಲಸೆ ಹೋಗುತ್ತಾರೆ. ಹೆಂಡತಿ ಮತ್ತು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಆರು ತಿಂಗಳಿಂದ ಒಂದು ವರ್ಷದವರೆಗೆ ಗುರುತು ಪರಿಚಯ ಇರದ ಊರುಗಳಲ್ಲಿ ವಾಸ ಮಾಡುತ್ತಾರೆ, ಇಂತಹ ಕಠಿಣ ಸಂದರ್ಭದಲ್ಲಿ ಅವರಿಗೆ ಕೇವಲ ದೈಹಿಕ ಮತ್ತು ಮಾನಸಿಕ ಸಾಂಗತ್ಯದ ತೀವೃ ಅಗತ್ಯ ಇರುತ್ತೆ. ಆಗ ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಅವರ ಅಗತ್ಯವನ್ನು ಪೂರೈಸುವ ಮೂಲಕ, ಸಮಾಜದ ಒಂದು ದೊಡ್ಡ ವರ್ಗ ಮಾನಸಿಕವಾಗಿ ಕುಸಿಯದಂತೆ ತಡೆಯುತ್ತಾರೆ'' ಎಂದಿದ್ಧಾರೆ.

ಮುಂದುವರೆದು ವೇಶ್ಯಾವೃತ್ತಿ ನಮ್ಮ ಸಮಾಜಕ್ಕೆ ಸುರಕ್ಷಾ ಕವಚ ಇದ್ದಂತೆ ಎಂದು ವಾದ ಮಾಡಿರುವ ಅನುಪ್ರಿಯಾ ಗೋಯೆಂಕಾ, "ಇಂತಹ ಸೇವೆಗಳು ಇರುವುದರಿಂದಲೇ ಉಳಿದ ಮಹಿಳೆಯರು ರಸ್ತೆಗಳಲ್ಲಿ ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿದೆ" ಎಂದು ಹೇಳಿದ್ದಾರೆ.ಅನುಪ್ರಿಯಾ ಪ್ರಕಾರ, ಈ ವ್ಯವಸ್ಥೆ ಸಮಾಜದಲ್ಲಿ ಉಂಟಾಗುವ ವಿಕೃತ ಒತ್ತಡವನ್ನು ತಡೆದು, ಇತರ ಹೆಣ್ಣುಮಕ್ಕಳನ್ನು ಕಾಮುಕರಿಂದ ರಕ್ಷಿಸುವಲ್ಲಿ ಪರೋಕ್ಷವಾಗಿ ಸಹಕಾರಿಯಾಗಿದೆ.
ಸದ್ಯ ಅನುಪ್ರಿಯಾ ಗೋಯೆಂಕಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಹಲವರು ಅನುಪ್ರಿಯಾ ಅವರ ಈ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರೆ, ಇನ್ನೂ ಕೆಲವರು ವೇಶ್ಯಾವೃತ್ತಿಯನ್ನು ಯಾರು ಬೇಕಂತಲೇ ಆಯ್ಕೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ಮಾನವ ಕಳ್ಳಸಾಗಣೆ, ತೀವ್ರ ಬಡತನ ಮತ್ತು ಬಲವಂತಕ್ಕೆ ಬಲಿಯಾಗಿ ಈ ಕಡೆ ಬರುತ್ತಾರೆ ಎಂದು ಅನುಪ್ರಿಯಾಗೆ ನೆನಪಿಸುತ್ತಿದ್ಧಾರೆ. ಶೋಷಣೆಯ ಬದುಕನ್ನು 'ಸಮಾಜ ಸೇವೆ' ಎಂದು ಕರೆಯುವುದು ತಪ್ಪು ಎಂದು ಅನುಪ್ರಿಯಾ ವಿರುದ್ಧ ಆಕ್ರೋಶವನ್ನು ಖುಡ ಹೊರ ಹಾಕುತ್ತಿದ್ಧಾರೆ.
ಅಂದ್ಹಾಗೇ ಪ್ರಖ್ಯಾತ ಲೇಖಕ ಸಾದತ್ ಹಸನ್ ಮಂಟೋ ಅವರ ''ಹಟಕ್'' ಎಂಬ ಸಣ್ಣ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ಅನುಪ್ರಿಯಾ ಗೋಯೆಂಕಾ ಅಭಿನಯಿಸಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರದರ್ಶನಗೊಂಡಿದ್ದು ಚಿತ್ರದಲ್ಲಿ ''ಸೌಗಂಧಿ'' ಎಂಬ ವೇಶ್ಯೆಯ ಪಾತ್ರದಲ್ಲಿ ಅನುಪ್ರಿಯಾ ಅಭಿನಯಿಸಿದ್ದಾರೆ. ಈ ಪಾತ್ರದ ಆಳಕ್ಕೆ ಇಳಿದಾಗ ತಮ್ಮ ಆಲೋಚನಾ ಶೈಲಿಯೇ ಸಂಪೂರ್ಣವಾಗಿ ಬದಲಾಯಿತು ಎಂದು ಅನುಪ್ರಿಯಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications