ಅಭಿಮಾನ ಅಂದರೆ ಇದು, ಪಕ್ಕದಲ್ಲಿ ಪ್ರಿಯಾಂಕ ಚೋಪ್ರಾ ಇದ್ದರೂ ಅಭಿಮಾನಿ ಮಾಡಿದ್ದೇನು..?
ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು .. ಸೆಲ್ಪಿ ಕೇಳೋದು .. ಮಾತನಾಡಲು ಹವಣಿಸೋದು ಕಾಮನ್ನು. ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವುದು ಅನೇಕರಲ್ಲಿರುವ ಕಲ್ಪನೆ. ಹೀಗಿರುವಾಗ ಕನಸಿನಲ್ಲಿಯೂ ಕಾಡುವ ತನ್ನ ನೆಚ್ಚಿನ ನಾಯಕಿ ಪಕ್ಕ ಬಂದು ಕುಂತರೆ ಹೇಗಾಗಬೇಡ. ಸದ್ಯಕ್ಕೆ ಪ್ರಿಯಾಂಕ ಚೋಪ್ರಾ ಭಕ್ತನ ವಿಚಾರದಲ್ಲಿ ಇದೆ ಆಗಿದೆ.
ಹೌದು, ಹೇರ್ ಸ್ಟೈಲ್ ನಿಂದ ಹಾಕುವ ಡ್ರೆಸ್ ವರೆಗೆ ಟ್ರೋಲ್ ಆಗ್ತಾನೇ ಬಂದ ಪ್ರಿಯಾಂಕ ಚೋಪ್ರಾ, ಬಾಲಿವುಡ್ ಮತ್ತು ಭಾರತ ಎರಡನ್ನೂ ತೊರೆದು ವರ್ಷಗಳೇ ಆಗಿವೆ. ಇದಕ್ಕೆ ಇವರ ಗಂಡ ನಿಕ್ ಜೋನಾಸ್ ಒಂದು ಕಾರಣವಾದರೆ, ಹಾಲಿವುಡ್‌ನಲ್ಲಿ ಮಿಂಚುವ ಹುಚ್ಚು ಮತ್ತೊಂದು ಕಾರಣ. ಇಂಥಾ ಪ್ರಿಯಾಂಕ ಚೋಪ್ರಾ ಮೊನ್ನೆ ತಮ್ಮನ ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆಗೆ ಭಾರತಕ್ಕೆ ಬಂದಿದ್ದರು.

ಇದೇ ಸಮಯದಲ್ಲಿ ತಮ್ಮ ನಿರ್ಮಾಣದಡಿ ಸಿದ್ಧವಾದ ಮರಾಠಿಯ ಪಾನಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಪ್ರಿಯಾಂಕ, ಆ ನಂತರ ಅಲ್ಲಿ ಬಂದಿದ್ದ ಪಾಪರಾಜಿಗಳು ಹಾಗೂ ಕೆಲ ತಮ್ಮ ಅಭಿಮಾನಿಗಳ ಜೊತೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮುಂದಾದರು. ಅಭಿಮಾನಿಗಳ ನಡುವೆ ಬಂದು ಕುಂತರು. ಇದರಿಂದ ಪುಳಕಿತಗೊಂಡ ಪ್ರಿಯಾಂಕ ಅವರ ಅಭಿಮಾನಿಯೊಬ್ಬರು ಕ್ಯಾಮರಾ ಕಡೆ ನೋಡದೇ ಪ್ರಿಯಾಂಕ ಅವರನ್ನೇ ಮೂಕವಿಸ್ಮಿತರಾಗಿ ನೋಡುತ್ತಾ ಕುಂತಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಗೆ ಬಗೆಯ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೆಲವರು ಲಕ್ ಅಂದರೆ ಇದು ಎಂದರೆ, ಇನ್ನೂ ಕೆಲವರು ಇದು ಆ ವ್ಯಕ್ತಿಯ ಜೀವನದ ಮರೆಯಲಾಗದ ಘಳಿಗೆ ಎಂದಿದ್ದಾರೆ. ಮತ್ತೂ ಕೆಲವರು ಆ ಕಣ್ಣೋಟವನ್ನು ಪ್ರಿಯಾಂಕ ಚೋಪ್ರಾ ಕೂಡ ಗಮನಿಸಿರುತ್ತಾರೆ ಆದರೆ ನಿರ್ಲಕ್ಷ್ಯಿಸಿದ್ದಾರೆ ಎಂದಿದ್ದಾರೆ. ಮತ್ತೂ ಕೆಲವರು ಬಾಲಿವುಡ್ ಚಿತ್ರಗಳನ್ನು ಈ ದೃಶ್ಯ ನೆನಪಿಸುತ್ತಿದೆ ಎಂದಿದ್ದಾರೆ. ಕನಸಾ-ನನಸಾ ಎಂಬ ಗೊಂದಲ ಆತನಿಗೆ ಕಾಡುತ್ತಿರಬಹುದು ಎಂದಿದ್ಧಾರೆ.
ಇನ್ನೂ ಇದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಚಿಕ್ಕ ಬಾಲಕನನ್ನು ಪ್ರಿಯಾಂಕ ತಾವೇ ಖುದ್ದು ಕರೆದು ತಮ್ಮ ಮುಂದೆ ಕೂರಿಸಿಕೊಂಡು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಲಿವುಡ್ ನಾಯಕಿಯಾದರೂ ಕೂಡ ಪ್ರಿಯಾಂಕ ಚೋಪ್ರಾ ಕಾಲು ಇನ್ನೂ ನೆಲದ ಮೇಲೆ ಇದೆ ಅನ್ನುವುದಕ್ಕೆ ಈ ವಿಡಿಯೋಗಳು ಸಾಕ್ಷಿ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಅಂದ್ಹಾಗೇ ಪ್ರಿಯಾಂಕ ಈಗ ಕೇವಲ ನಾಯಕಿಯಲ್ಲ. ನಿರ್ಮಾಪಕಿ ಕೂಡ ಹೌದು. ಪ್ರಿಯಾಂಕ ನಿರ್ಮಾಣದಲ್ಲಿ ಈಗಾಗಲೇ ಭೋಜಪುರಿ, ಹಿಂದಿ, ನೇಪಾಲಿ, ಆಸಾಮಿ ಭಾಷೆಗಳಲ್ಲಿ ಚಿತ್ರಗಳು ಬಂದಿವೆ. ಮರಾಠಿಯಲ್ಲಿ ಪ್ರಿಯಾಂಕ ಚೋಪ್ರಾ ನಾಲ್ಕು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.ಆ ಪೈಕಿ 'ಪಾನಿ' ಚಿತ್ರ ಕೂಡ ಒಂದು. ಈ ಚಿತ್ರ ಅಕ್ಟೋಬರ್ 18ರಂದು ಬಿಡುಗಡೆಯಾಗಲಿದ್ದು, ಚಿತ್ರದ ಟ್ರೇಲರ್ ಸದ್ಯಕ್ಕೆ ಬಿಡುಗಡೆಯಾಗಿದೆ.


Click it and Unblock the Notifications











