ಬಟ್ಟೆ ಬಿಚ್ಚಿಸಿದ್ರು, ಖಾಸಗಿ ಭಾಗ ಮುಟ್ಟಿದ್ರು ; 4 ತಿಂಗಳು ಜೈಲಿನಲ್ಲಿ ನರಕ-ಕಣ್ಣೀರಾದ ಕನ್ನಡ ಸಿನಿಮಾ ನಟಿ
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬಹು ಬೇಗ ದುಡ್ಡು ಮಾಡಿಬಿಡಬೇಕು, ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಶ್ರೀಮಂತರಾಗಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು.
ಹೀಗಾಗಿಯೇ ಹಣದಾಸೆಗೆ ಹಲವರು..ಅಡ್ಡದಾರಿಯನ್ನು ಹಿಡಿಯುತ್ತಾರೆ. ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ ಕರ್ಮಗಳನ್ನೆಲ್ಲಾ ಮಾಡುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ರಾಶಿ ರಾಶಿ ಉದಾಹರಣೆಗಳಿವೆ. ಆ ಪೈಕಿ ಸಂದೀಪಾ ವಿರ್ಕ್ ಅವರ ಬದುಕಿನ ಕಥನ ಕೂಡ ಒಂದು.

ಹೌದು, ಸಂದೀಪಾ ವಿರ್ಕ್.. ದೆಹಲಿಯ ಚೆಲುವೆ. ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸಂದೀಪಾ ''HybooCare'' ಎಂಬ ಸೌಂದರ್ಯ ವರ್ಧಕ ಬ್ರ್ಯಾಂಡ್‌ನ ಸಂಸ್ಥಾಪಕರೂ ಹೌದು.
2015ರಲ್ಲಿ ಬಂದ ಪಂಜಾಬಿ ಚಿತ್ರ ''ಗನ್ & ಗೋಲ್'' ಮೂಲಕ ಚಿತ್ರರಂಗಕ್ಕೆ ಬಂದ ಸಂದೀಪಾ ''ದಿಲ್ ಸಾಲಾ ಸಂಕಿ'' ಚಿತ್ರದ ಮೂಲಕ ಬಾಲಿವುಡ್‌ನ ಪ್ರವೇಶ ಮಾಡಿದರು. ''ಧನ್ಯತ್ರಾ'' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಬಂದ ಸಂದೀಪಾ ಕನ್ನಡದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. 2022ರಲ್ಲಿ ತೆರೆಗೆ ಬಂದಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ''ಲೋಕಲ್ ಟ್ರೈನ್'' ಮತ್ತು 2023ರಲ್ಲಿ ಬಿಡುಗಡೆಯಾಗಿದ್ದ ಅಂಬಾಸಿಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಇವರ IMDb ಪ್ರೊಫೈಲ್ ಪ್ರಕಾರ ''ಹನಿ ಟ್ರ್ಯಾಪ್ ಸ್ಕ್ವಾಡ್'' ಎಂಬ ವೆಬ್ ಸರಣಿಯಲ್ಲಿ ಕೂಡ ಸಂದೀಪಾ ಕಾಣಿಸಿಕೊಂಡಿದ್ದು ಅಜಿತ್ ಅಭಿನಯದ ಮಂಕಥಾ ಮತ್ತು ಮೋಹನ್ ಲಾಲ್ ಅಭಿನಯದ ''ಶಿಕ್ಕರ್'' ಚಿತ್ರಗಳಲ್ಲಿ ಕೂಡ ಸಂದೀಪಾ ಅಭಿನಯಿಸಿದ್ದಾರೆ.
ಇಂಥಾ ಸಂದೀಪಾ ವಿರ್ಕ್ ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪಿಟಿಐ ವರದಿಯ ಪ್ರಕಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ನಂಬಿಸಿ ಹೂಡಿಕೆದಾರರಿಂದ ಹಣ ಪಡೆದು ಅವರಿಗೆ ಪಂಗನಾಮವನ್ನು ಹಾಕಿದ್ದ ಸಂದೀಪಾ ಆ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದರು. ಇ-ಕಾಮರ್ಸ್ ವೇದಿಕೆಗಳಿಗೆ ಹಣ ವರ್ಗಾಯಿಸಿದ್ದರು.

ಹೀಗೆ ಜಾರಿ ನಿರ್ದೇಶನಾಲಯದ (ED)ದ ಬಲೆಗೆ ಬಿದ್ದ ಸಂದೀಪಾ ಆಗಲೇ ಹೇಳಿದಂತೆ ಕಳೆದ ವರ್ಷ ಆಗಸ್ಟ್ 14ರಂದು ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿಗೆ ಹೋಗಿದ್ದರು. ಹೆಚ್ಚು ಕಡಿಮೆ 4 ತಿಂಗಳು ಸೆರೆವಾಸ ಅನುಭವಿಸಿದ್ದರು. ಇದೀಗ ತಮ್ಮ ಈ ತಿಹಾರ್ ಜೈಲಿನ ಅನುಭವವನ್ನು ಸಂದೀಪಾ ಹಂಚಿಕೊಂಡಿದ್ದಾರೆ. ತಮಗಾದ ದೈಹಿಕ ಮತ್ತು ಮಾನಸಿಕ ಹಿಂಸೆ ನೆನೆದು ಕಣ್ಣೀರಾಗಿದ್ದಾರೆ.
ಈ ಕುರಿತು ''ಜ್ಯೋತ್ಸ್ನಾ ಬೇದಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂದೀಪಾ, ಯಾರಾದರೂ ಜೈಲಿಗೆ ಹೋದರೆ ಸಾಕು, ನಮ್ಮ ಸಮಾಜ ಅಪರಾಧಿ ಎಂದು ಪರಿಗಣಿಸುತ್ತೆ ಎಂದು ಹೇಳಿದ್ದಾರೆ.
ನನಗೆ ಹಲವರು ಜೈಲಿನಲ್ಲಿ ನಡೆದಿದ್ದನ್ನೆಲ್ಲಾ ಯಾಕೆ ಹೇಳ್ತಿದ್ದೀಯಾ..? ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿರುವ ಸಂದೀಪಾ, ಸತ್ಯವನ್ನು ಹೇಳಲು ಯಾರ ಅಪ್ಪಣೆ ಬೇಕಿಲ್ಲ ಎಂದು ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಅನುಭವಿಸಬಾರದ ಕಷ್ಟಗಳನ್ನೆಲ್ಲಾ ಅನುಭವಿಸಿದ್ದೇನೆ, ಇದಕ್ಕಿಂತ ಇನ್ಯಾವ ಕಷ್ಟ ಎದುರಾಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ಜೈಲಿನಲ್ಲಿ ತಪಸಾಣೆಯ ಹೆಸರಿನಲ್ಲಿ ಕೊಡಲಾಗುವ ದೈಹಿಕ ಹಿಂಸೆಯ ಕುರಿತು ಮಾತನಾಡಿರುವ ಸಂದೀಪಾ, ನನ್ನನ್ನೂ ನನ್ನ ಮನೆಯಲ್ಲಿ ಅರೆಸ್ಟ್ ಮಾಡಿದರು, ಆ ನಂತರ ಸೀದಾ ದೀನ್ ದಯಾಳ್ ಆಸ್ಪತ್ರೆಗೆ ಕರೆದೊಯ್ದುರು ಎಂದು ಹೇಳಿದ್ದಾರೆ.
ಅಲ್ಲಿ ಆಸ್ಪತ್ರೆಯಲ್ಲಿ ಗರ್ಭಧಾರಣೆ ಪರೀಕ್ಷೆಯನ್ನು ಕೂಡ ಮಾಡಿದರು ಎಂದು ಹೇಳಿರುವ ಸಂದೀಪಾ ರಾತ್ರಿಯ ಸಮಯದಲ್ಲಿ ಜೂನಿಯರ್ ವೈದ್ಯರು ಈ ಪರೀಕ್ಷೆಯನ್ನು ಮಾಡಿದ್ದರು ಎಂದು ಹೇಳಿದ್ದಾರೆ. ಇದರಿಂದ ನನಗೆ ಅತೀವ ಮುಜುಗರವಾಗಿತ್ತು ಎಂದಿದ್ದಾರೆ.
ಇನ್ನೂ ಜೈಲಿನಲ್ಲಿ ತಪಾಸಣೆಯ ಸಮಯದಲ್ಲಿ ದೊಡ್ಡ ಸ್ತನಗಳಿರುವ ಮಹಿಳೆಯರು ಅಲ್ಲಿನ ಮಹಿಳಾ ಸಿಬ್ಬಂದಿಗಳಿಂದಲೇ ತುಂಬಾ ಅವಮಾನ ಮತ್ತು ಹಿಂಸೆ ಅನುಭವಿಸಬೇಕಾಗುತ್ತೆ ಎಂದು ಹೇಳಿರುವ ಸಂದೀಪಾ ಸ್ತನದ ಕೆಳಭಾಗದಲ್ಲಿ ಏನಾದರೂ ಬಚ್ಚಿಡಲಾಗಿದೆಯೇ ಎಂದು ಪರಿಶೀಲಿಸುವ ನೆಪದಲ್ಲಿ ತುಂಬಾ ಕೆಟ್ಟದಾಗಿ ಮುಟ್ತಾರೆ, ಕೈ ಹಾಕ್ತಾರೆ ಎಂದು ಹೇಳಿದ್ದಾರೆ. ಅಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಮಾನವೀಯತೆ, ಸಂವೇದನೆ ಎನ್ನುವುದೇ ಇಲ್ಲ ಎಂದು ಹೇಳಿರುವ ಸಂದೀಪಾ ಕೆಲವರು ಮಾತ್ರ ಒಳ್ಳೆಯವರು ಇದ್ದಾರೆ, ಮಿಕ್ಕಂತೆ ಉಳಿದವರೆಲ್ಲಾ ರಕ್ತಪಿಪಾಸುಗಳು ಎಂದಿದ್ದಾರೆ.
ನಾನು ನಾಲ್ಕು-ನಾಲ್ಕೂವರೆ ತಿಂಗಳು ಜೈಲಿನಲ್ಲಿದ್ದೆ, ಈ ಸಮಯದಲ್ಲಿ ಬೇರೆ ಬೇರೆ ಹಂತದಲ್ಲಿ ಕಡಿಮೆ ಅಂದರೂ ಅಲ್ಲಿದ್ದ 27 ಜನ ನನ್ನ ಬೆ*ತ್ತಲೆ ದೇಹ ನೋಡಿದ್ದಾರೆ ಎಂದು ಹೇಳಿರುವ ಸಂದೀಪಾ ವಿರ್ಕ್, ನ್ಯಾಯಾಲಯದಲ್ಲಿ ವಿಚಾರಣೆ ಇರುವಾಗೆಲ್ಲಾ ಬಟ್ಟೆ ಬಿಚ್ಚಿಸುತ್ತಾರೆ ಎಂದು ಹೇಳಿದ್ಧಾರೆ. ನನ್ನ ಆತ್ಮಗೌರವವೇ ಅಲ್ಲಿ ಸತ್ತು ಹೋದಂತೆ ಆಗಿತ್ತು, ನ್ಯಾಯ ಸಿಗುವ ಮುನ್ನವೇ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ಯಾಕೆ ನಿರ್ಧರಿಸಲಾಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications