2ನೇ ಮಗುವಿಗೆ ಜನ್ಮ ನೀಡಿ ನಾಲ್ಕು ತಿಂಗಳ ಒಳಗೆ ಇಲಿಯಾನಾ 3ನೇ ಮಗುವಿಗೆ ತಾಯಿಯಾಗುತ್ತಿದ್ದಾರಾ?
ಇತ್ತೀಚೆಗೆ ಸಿನಿಮಾ ನಟಿಯರು ಒಬ್ಬರ ಹಿಂದೊಬ್ಬರು ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ. ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಪೋಷಕರಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇವರ ಅಭಿಮಾನಿಗಳು ಖುಷಿಯ ಅಲೆಯಲ್ಲಿ ತೇಲುತ್ತಿರುವಾಗಲೇ ಮತ್ತೊಬ್ಬ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಖುಷಿಯ ಜೊತೆ ಗೊಂದಲಕ್ಕೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಕೂಡ ಅಷ್ಟೇ ಬಲವಾಗಿದೆ.
ದಕ್ಷಿಣ ಭಾರತದ ಒಂದು ಕಾಲದ ಬಹುಬೇಡಿಕೆಯ ನಟಿ ಇಲಿಯಾನಾ ಡಿ'ಕ್ರೂಜ್ ಮತ್ತೊಮ್ಮೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಗೋವಾದ ಈ ಸುಂದರಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ತಮ್ಮ ಸೌಂದರ್ಯ ಹಾಗೂ ನಟನೆಯಿಂದ ಸಿನಿಪ್ರೇಮಿಗಳ ಮನಸ್ಸಿಗೆ ಖನ್ನ ಹಾಕಿದ್ದರು. ತೆಲುಗು ಚಿತ್ರರಂಗದಲ್ಲಿ ಹೆಚ್ಚು ಯಶಸ್ಸು ಗಳಿಸಿದ ಇಲಿಯಾನಾ 'ದೇವದಾಸ್' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಮೊದಲ ಸಿನಿಮಾ 'ದೇವದಾಸ್' ಇಲಿಯಾನಾಗೆ ಲಕ್ಕಿ ಅಂತ ಸಾಬೀತಾಗಿತ್ತು. ಗೋವಾ ಸುಂದರಿಯ ಗ್ಲಾಮರ್ ಲುಕ್‌ಗೆ ತೆಲುಗು ಮಂದಿ ಕರಗಿ ಹೋಗಿದ್ದರು. ಇಲ್ಲಿಂದ ಇಲಿಯಾನಾ ಒಂದರ ಹಿಂದೊಂದು ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡುತ್ತಾ ಮುನ್ನುಗಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಇಲಿಯಾನಾ ವೃತ್ತಿ ಬದುಕಿನ ಬರೀ ಸೋಲುಂಡಿದ್ದರು. ಹೀಗಾಗಿ ವೈವಾಹಿಕ ಜೀವನದ ಕಡೆ ಮುಖ ಮಾಡಿದ್ದರು. ಎರಡು ಮಗುವಿನ ತಾಯಿಯಾಗಿರುವ ಇಲಿಯಾನಾ ಗರ್ಭಿಣಿಯಾಗಿರುವ ವಿಡಿಯೋ ಅವರ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.
'ಪೋಕಿರಿ','ಮುನ್ನಾ','ಆಟ','ಜಲ್ಸಾ','ಕಿಕ್','ರಾಖಿ','ಜುಲಾಯಿ' ಅಂತಹ ಸಿನಿಮಾಗಳ ಮೂಲಕ ಇಲಿಯಾನಾ ಡಿ'ಕ್ರೂಸ್ ಜನಪ್ರಿಯತೆ ಗಳಿಸಿದ್ದರು. ಒಂದು ಕಾಲದಲ್ಲಿ ಇಲಿಯಾನಾ ದಕ್ಷಿಣ ಭಾರತದ ಪ್ರತಿಯೊಬ್ಬ ಯುವಕನ ಕನಸಿನ ಕನ್ಯೆಯಾಗಿದ್ದರು. ಆ ಮಟ್ಟಿಗೆ ಜನಪ್ರಿಯತೆ ಪಡೆದಿದ್ದರು. ಹಾಗೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ದಕ್ಷಿಣ ಭಾರತದ ನಿರ್ಮಾಪಕರು, ನಿರ್ದೇಶಕರು ಇವರ ಡೇಟ್ಸ್‌ಗಾಗಿ ಕ್ಯೂ ನಿಲ್ಲುತ್ತಿದ್ದ ಕಾಲವೂ ಇತ್ತು.
ಯಶಸ್ಸಿನ ಉತ್ತುಂಗದಲ್ಲಿದ್ದ ಇಲಿಯಾನಾ ನಿರ್ಮಾಪಕರ ಮುಂದೆ ಒಂದು ಕೋಟಿ ರೂಪಾಯಿ ಸಂಭಾವನೆ ಕೇಳಿ ಸುದ್ದಿಯಾಗಿದ್ದರು. ಸಿನಿಮಾಗಳು ಗೆಲ್ಲುತ್ತಿದ್ದಾಗ ಇಲಿಯಾನಾ ಡಿಮ್ಯಾಂಡ್ ಇಟ್ಟಿದ್ದೇನೋ ಸರಿ, ಆದರೆ, ನಂತರದ ದಿನಗಳಲ್ಲಿ ಸೋಲಿನ ಸುಳಿಗೆ ಸಿಲುಕಿದ್ದರು. ಹೀಗಾಗಿ ತೆಲುಗು, ತಮಿಳು ಚಿತ್ರರಂಗದಲ್ಲಿ ಇವರಿಗೆ ಬೇಡಿಕೆ ಕಮ್ಮಿಯಾಗಿತ್ತು. ಈ ಕಾರಣಕ್ಕೆ ಬಾಲಿವುಡ್ ಕಡೆಗೆ ಮುಖ ಮಾಡಿದ್ದರು. ಅಲ್ಲೂ ಕೆಲವು ಸಿನಿಮಾಗಳಷ್ಟೇ ಯಶಸ್ಸು ಗಳಿಸಿದವು.
ಈ ವೇಳೆ ಇಲಿಯಾನಾ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ಜೋಡಿ 2019ರಲ್ಲಿ ಬ್ರೇಕಪ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟರು. ಇನ್ನು ಆಂಡ್ರ್ಯೂ ನೀಬೋನ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡ ಬಳಿಕ ಮೈಕೆಲ್ ಡೋಲನ್ ಎಂಬುವವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಈ ವೇಳೆ ಗರ್ಭಿಣಿಯಾದ ನಟಿ 2023 ಆಗಸ್ಟ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮೊದಲ ಮಗುವಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ಕರೆದರು.
ಮೊದಲ ಮಗುವಿಗೆ ಜನ್ಮ ನೀಡಿದ ಇಲಿಯಾನಾ ಕೆಲವೇ ದಿನಗಳಲ್ಲಿ 2ನೇ ಮಗುವಿಗೆ ಗರ್ಭಿಣಿಯಾದರು. ಇದೇ ವರ್ಷ ಜೂನ್ 19ರಂದು 2ನೇ ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ಕೀನು ರಾಫೆ ಡೋಲನ್ ಎಂದು ಹೆಸರಿಡಲಾಗಿದೆ. 2ನೇ ಮಗುವಿಗೆ ಜನ್ಮ ನೀಡಿ ಇನ್ನೂ ನಾಲ್ಕು ತಿಂಗಳು ಕೂಡ ಆಗಿಲ್ಲ. ಅಷ್ಟರಲ್ಲೇ ಮೂರನೇ ಬಾರಿಗೆ ತಾಯಿಯಾಗುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಅದಕ್ಕೆ ಅವರೇ ಹಂಚಿಕೊಂಡ ಒಂದು ವಿಡಿಯೋ.
ಈ ವಿಡಿಯೋದಲ್ಲಿ ಇಲಿಯಾನಾ 'ಬೇಬಿ ಬಂಪ್'ನೊಂದಿಗೆ ಕಾಣಿಸಿಕೊಂಡಿದ್ದು, ಮೂರನೇ ಮಗುವಿಗೆ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಇಲಿಯಾನಾ ಗರ್ಭಿಣಿಯಲ್ಲ. ಇದು ಎರಡನೇ ಬಾರಿ ಗರ್ಭಿಣಿಯಾಗಿದ್ದಾಗ ಮಾಡಿದ ವಿಡಿಯೋ" ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇಲಿಯಾನಾಗೆ ಶುಭ ಕೋರುತ್ತಿದ್ದಾರೆ.


Click it and Unblock the Notifications











