ಹೊಸ ಹೀರೋ ಹವಾ ಕಂಡು ಹೆದರಿದ ಅಜಯ್ ದೇವಗನ್ ? ‘ಸನ್ ಆಫ್ ಸರ್ದಾರ್ 2' ಬಿಡುಗಡೆ ಮುಂದೂಡಿಕೆ..!
ಹೊಸ ಹೊಸ ಕನಸನ್ನೊತ್ತು ಚಿತ್ರವನ್ನು ರೂಪಿಸುವುದು ಎಷ್ಟು ಕಷ್ಟವೋ, ಅಷ್ಟೇ ಆ ಚಿತ್ರವನ್ನು ಪ್ರೇಕ್ಷಕರಿಗೆ ಸಮರ್ಥವಾಗಿ ತಲುಪಿಸುವುದು ಕೂಡ ಕಷ್ಟ. ಅದರಲ್ಲಿಯೂ ನಾಯಕ-ನಾಯಕಿಯರ ಮುಖ ಹೊಸದಾಗಿದ್ದರೆ ಮುಗಿದೇ ಹೋಯ್ತು. ಕಣ್ಮುಂದೆ ಹಲವಾರು ಸವಾಲುಗಳು ಕಾಣುತ್ತಾವೆ. ಬಿಡುಗಡೆಗೆ ಮುನ್ನ ಮತ್ತು ಬಿಡುಗಡೆಯ ನಂತರ ಹಲವು ಎಡರುತೊಡರುಗಳು ಎದುರಾಗುತ್ತಾವೆ. ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಭಾಷೆಯಲ್ಲಿ ಕೂಡ..
ಈ ಸವಾಲು ಇದ್ದೇ ಇರುತ್ತಾವೆ. ಈ ಸವಾಲುಗಳಿಗೆ ಸೆಡ್ಡು ಹೊಡೆದು ನಿಂತರೆ.. ಚಿತ್ರದ ಕಥೆಯಲ್ಲಿ ಧಮ್ ಇದ್ದರೆ .. ಹಿಡಿದು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವೇ ಇಲ್ಲ. ಪ್ರೇಕ್ಷಕರ ಅಲೆ ತಂತಾನೇ ಎದ್ದೇಳುತ್ತೆ. ಹೊಸ ಇತಿಹಾಸ ಕೂಡ ಸೃಷ್ಟಿಯಾಗುತ್ತೆ. ಇದಕ್ಕೆ ''ಸೈಯಾರ'' ಸದ್ಯದ ಉದಾಹರಣೆ.

ಹೌದು .. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ಹುಡುಗ ಅಹಾನ್ ಪಾಂಡೆ ಮತ್ತು ಹೊಸ ಹುಡುಗಿ ಅನೀತಾ ಪಡ್ಡಾ ಅಭಿನಯದ ''ಸೈಯಾರ'' ದಾಖಲೆಯನ್ನು ಬರೆಯುತ್ತಿದೆ. ಹಣದ ಮಳೆ ಬೀಳುತ್ತಿದೆ. ಹತ್ತು ಹಲವು ದಾಖಲೆಗಳು ಮುರಿದಿವೆ. ಹೊಸ ದಾಖಲೆಗಳು ನಿರ್ಮಾಣವಾಗಿವೆ.
ಸಹಜವಾಗಿ ಈ ಗೆಲುವು ಚಿತ್ರತಂಡದ ಜೊತೆ ಬಾಲಿವುಡ್‌ನ ಕೆಲವರ ಖುಷಿಯನ್ನು ಹೆಚ್ಚಿಸಿದೆ. ಇದರ ಜೊತೆಯಲ್ಲಿ ಹೊಸ ಹುಡುಗನ ಅಬ್ಬರ ಕಂಡು ಬಾಲಿವುಡ್ ಸೂಪರ್ ಸ್ಟಾರ್‌ಗಳಲ್ಲಿ ನಡುಕ ಕೂಡ ಶುರುವಾಗಿದೆ. ಇದಕ್ಕೆ ''ಸನ್ ಆಫ್ ಸರ್ದಾರ್ 2'' ಚಿತ್ರವನ್ನು ದಿಢೀರ್ ಎಂದು ಮುಂದೂಡಿರುವುದೇ ಸದ್ಯದ ಸಾಕ್ಷಿ.
ಹೌದು, ಅಸಲಿಗೆ ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಚಿತ್ರ ಇದೇ ಜುಲೈ 25ರಂದು ಬಿಡುಗಡೆಯಾಗಬೇಕಿತ್ತು. ಅದಕ್ಕೆ ಬೇಕಾದ ತಯಾರಿಯನ್ನು ಕೂಡ ಮಾಡಿಕೊಂಡಿದ್ದ ಚಿತ್ರತಂಡ ಚಿತ್ರದ ಪ್ರಚಾರವನ್ನು ಕೂಡ ಮಾಡಿತ್ತು.
ಆದರೆ ಈಗ ಏಕಾಏಕಿ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಜುಲೈ 25ರ ಬದಲು ಆಗಸ್ಟ್ 1ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚಿತ್ರತಂಡದ ಈ ನಡೆ ಸದ್ಯ ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಚರ್ಚೆ ಶುರುವಾಗಿದೆ.

''ಸೈಯಾರ'' ಚಿತ್ರದ ಅಬ್ಬರ.. ಹೊಸ ಹೀರೋನ ಹವಾ ಕಂಡು ಅಜಯ್ ದೇವಗನ್ ಹೆದರಿದಂತೆ ಇದೆ ಎಂದೇ ಹಲವರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಚಿತ್ರತಂಡ ಕೂಡ ಚಿತ್ರವನ್ನು ಮುಂದೂಡುತ್ತಿರುವುದಕ್ಕೆ ಕಾರಣವನ್ನು ಹೇಳಿಲ್ಲ. ''ಸೈಯಾರ'' ಎಂಬ ಅಭಿಪ್ರಾಯ ವ್ಯಕ್ತವಾಗಲು ಇದು ಕೂಡ ಪ್ರಮುಖವಾದ ಕಾರಣ. ''ಸೈಯಾರ'' ಅಲೆಯ ನಡುವೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಭಾವಿಸಿಯೇ ''ಸನ್ ಆಫ್ ಸರ್ದಾರ್ 2''ಗೆ ನಿರ್ಮಾಪಕರು ಆಗಿರುವ ಅಜಯ್ ದೇವಗನ್ ತಮ್ಮ ಚಿತ್ರವನ್ನು ಒಂದು ವಾರ ಮುಂದೂಡಿದ್ಧಾರೆ ಎನ್ನುವ ಥಿಯರಿಯನ್ನು ಸದ್ಯ ಹಲವರು ಮಂಡಿಸುತ್ತಿದ್ದಾರೆ.
ಜುಲೈ 25ರಿಂದ ಆಗಸ್ಟ್ 1ಕ್ಕೆ ಮುಂದೂಡಲಾಗಿರುವ ''ಸನ್ ಆಫ್ ಸರ್ದಾರ್ 2'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಸಿದ್ದಾರ್ಥ್ ಚತುರ್ವೆದಿ ಮತ್ತು ತೃಪ್ತಿ ದಿಮ್ರಿ ಅಭಿನಯದ ''ಧಡಕ್ 2'' ಚಿತ್ರ ಸವಾಲು ಹಾಕಲಿದೆ. ಇನ್ನುಳಿದಂತೆ ''ಸನ್ ಆಫ್ ಸರ್ದಾರ್ 2'' ಚಿತ್ರದಲ್ಲಿ ಅಜಯ್ ದೇವಗನ್‌ಗೆ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ. ವಿಜಯ್ ಕುಮಾರ್ ಅರೋರಾ ನಿರ್ದೇಶನದ ಈ ಚಿತ್ರದಲ್ಲಿ ರವಿ ಕಿಶನ್.. ಖುಬ್ರಾ ಸೇಠ್.. ಚಂಕಿ ಪಾಂಡೆ.. ಶರತ್ ಸಕ್ಸೇನಾ.. ಸಂಜಯ್ ಮಿಶ್ರಾ..ಮುಕುಲ್ ದೇವ್.. ನೀರು ಬಾಜ್ವಾ.. ಹೀಗೆ ಬಹುದೊಡ್ಡ ತಾರಾಬಳಗವೇ ಇದೆ.


Click it and Unblock the Notifications










