ಕಂಗನಾಗೆ ತಮ್ಮದೇ ಪಕ್ಷದಿಂದ ಕಂಟಕ, 'ಎಮರ್ಜೆನ್ಸಿ' ಚಿತ್ರ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ವೋಟ್ ಬ್ಯಾಂಕ್ ರಾಜಕೀಯ..?
ರಾಜಕೀಯ ಕ್ಷೇತ್ರದಲ್ಲಿ ಕೂಡ ತನ್ನ ಎದುರಾಳಿಗಳನ್ನ 'ಮಂಡಿ'ಯೂರುವಂತೆ ಮಾಡಿದವರು ಕಂಗನಾ ರಣಾವತ್. ಎದ್ದು ಬಂದು ಎದೆಗೆ ಒದ್ದರೂ ಪರವಾಗಿಲ್ಲ ಇದ್ದದ್ದನ್ನ ಇದ್ದಂಗೆ ಹೇಳ್ತೀನಿ ಎನ್ನುವ ಈ ಗಟ್ಟಿಗಿತ್ತಿಗೆ ಸದ್ಯ ತಮ್ಮ ಎಮರ್ಜೆನ್ಸಿ ಚಿತ್ರವನ್ನು ಬಿಡುಗಡೆ ಮಾಡಿದರೆ ಸಾಕೆನಿಸಿದೆ.
ಹೀಗಾಗಿಯೇ ಶತಾಯು ಗತಾಯು ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಹಠದಲ್ಲಿ ಕೇಂದ್ರ ಸೆನ್ಸಾರ್ ಮಂಡಳಿ ವಿರುದ್ಧ ಹೈಕೋರ್ಟ್ ಮೆಟ್ಟಿಲು ಏರಿದ್ದ ಕಂಗನಾಗೆ ಈಗ ಚೂರು ನೆಮ್ಮದಿ ಸಿಕ್ಕಿದೆ. ಯಾಕೆಂದರೆ ಸೆಪ್ಟೆಂಬರ್ 25ರೊಳಗೆ ಬಿಡುಗಡೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಇದೇ ಸಮಯದಲ್ಲಿ ಕಂಗನಾಗೆ ತಮ್ಮದೇ ಪಕ್ಷ ಕಂಟಕವಾಗುತ್ತಿದೆಯಾ ಎನ್ನುವ ಅನುಮಾನ ಕೂಡ ಅನೇಕರನ್ನು ಕಾಡಲು ಶುರು ಮಾಡಿದೆ. ಅದಕ್ಕೆ ಕಾರಣ ನ್ಯಾಯಾಲಯದಲ್ಲಿ ನಡೆದ ವಾದ ಪ್ರತಿವಾದ.

ಹೌದು, ನ್ಯಾಯ ಮೂರ್ತಿಗಳಾದ ಬರ್ಗೆಸ್ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠದ ಎದುರು ಇಂದು ವಾದ ಮಂಡಿಸಿದ ಎಮರ್ಜೆನ್ಸಿ ಚಿತ್ರದ ನಿರ್ಮಾಪಕರ ಪರ ವಕೀಲ ವೆಂಕಟೇಶ್ ಧೋಂಡ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಉದ್ದೇಶಪೂರ್ವಕವಾಗಿಯೇ ಕೇಂದ್ರಿಯ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸರ್ಟಿಫಿಕೆಟ್ ನೀಡದೇ ಬಿಡುಗಡೆಯನ್ನು ವಿಳಂಬ ಮಾಡುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಹರಿಯಾಣಾದಲ್ಲಿ ಅಕ್ಟೋಬರ್ 5ರಂದು ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿಯುವರೆಗೆ ಚಿತ್ರ ಬಿಡುಗಡೆಯಾಗಂದತೆ ತಡೆಯಲು ಉದ್ದೇಶಪೂರ್ವಕವಾಗಿ ಪ್ರಮಾಣ ಪತ್ರವನ್ನು ಸಿಬಿಎಫ್‌ಸಿ [ ಸೆನ್ಸಾರ್ ಮಂಡಳಿ ] ತಡ ಮಾಡುತ್ತಿದೆ ಎಂದು ವಾದವನ್ನು ವಕೀಲರಾದ ವೆಂಕಟೇಶ್ ಧೋಂಡ್ ಮಾಡಿದ್ದಾರೆ.
ಮುಂದುವರೆದು ಎಮರ್ಜೆನ್ಸಿ ಚಿತ್ರದ ನಾಯಕಿ ಕಂ ನಿರ್ದೇಶಕಿಯಾಗಿರುವ ಕಂಗನಾ ರಣಾವತ್ ಈ ಚಿತ್ರದ ಸಹ ನಿರ್ಮಾಪಕಿ ಕೂಡ ಹೌದು. ಇಷ್ಟೇ ಅಲ್ಲ ಬಿಜೆಪಿ ಸಂಸದರು ಕೂಡ ಹೌದು. ಹೀಗಾಗಿ ತಮ್ಮ ಸದಸ್ಯರಿಂದ ಕೆಲವು ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡುವ ಚಿತ್ರ ಬಿಜೆಪಿಗರಿಗೆ ಈಗ ಬೇಕಿಲ್ಲ ಹೀಗಾಗಿ ಬಿಜೆಪಿ ಅಣತಿಯಂತೆ ಸೆನ್ಸಾರ್ ಮಂಡಳಿ ಕುಣಿಯುತ್ತಿದೆ. ಕಂಗನಾ ಅವರನ್ನು ಸತಾಯಿಸುತ್ತಿದೆ ಎಂದು ವಾದವನ್ನು ಕಂಗನಾ ವಕೀಲರು ಮಂಡಿಸಿದ್ದಾರೆ.
ಕಂಗನಾ ರಣಾವತ್ ಅವರ ವಕೀಲರ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬರ್ಗೆಸ್ ಕೊಲಬಾವಾಲಾ ಆಡಳಿತ ನಡೆಸುತ್ತಿರುವ ಯಾರಾದರೂ ತಮ್ಮದೇ ಸದಸ್ಯರಿಂದ ನಿರ್ಮಾಣವಾದ ಚಿತ್ರವನ್ನು ತಡೆಯಲು ಯಾಕೆ ಪ್ರಯತ್ನ ಮಾಡುತ್ತಾರೆ, ವಿರೋಧ ಪಕ್ಷದವರು ಅಧಿಕಾರದಲ್ಲಿದ್ದರೆ ನಿಮ್ಮ ಮಾತನ್ನು ಪರಿಗಣಿಸಬಹುದಿತ್ತು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ತಮ್ಮ ವಾದ ಮಂಡಿಸಿದ ವಕೀಲರು ಕೇಂದ್ರದ ಆಸೆಯಂತೆ ಇದೆಲ್ಲ ನಡೆಯುತ್ತಿದೆ. ಅವರು ತಮ್ಮ ಹಿತಾಸಕ್ತಿಗಳನ್ನು ನೋಡುತ್ತಿದ್ಧಾರೆ. ಹೀಗಾಗಿ ಚಿತ್ರವನ್ನು ಬಿಡುಗಡೆ ಮಾಡಲು ಅವರಿಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಎಮರ್ಜೆನ್ಸಿ ಚಿತ್ರದ ವಿರುದ್ಧ ಸಿಖ್ ಸಮುದಾಯದ ಎರಡು ಸಂಘಟನೆಗಳಾದ ಜಬಲ್‌ಪುರ್ ಸಿಖ್ ಸಂಗತ್ ಮತ್ತು ಗುರುಸಿಂಗ್ ಸಭಾ ಆಕ್ಷೇಪ ವ್ಯಕ್ತಪಡಿಸಿವೆ. ಚಿತ್ರದಲ್ಲಿನ ಕೆಲ ದೃಶ್ಯಗಳು ಸಿಖ್ ಸಮುದಾಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಹೀಗಾಗಿ ಕಂಗನಾ ರಣಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿವೆ. ಸಿನಿಮಾ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿವೆ.
ಒಟ್ನಲ್ಲಿ ಸದ್ಯಕ್ಕೆ ನಿರ್ಮಾಪಕರ ಪರ ವಕೀಲರು ಇಂದು ಚಿತ್ರದ ಬಿಡುಗಡೆಗೆ ಕಂಗನಾ ಅವರದ್ದೇ ಪಕ್ಷ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ವಾದ ಮಂಡಿಸಿದ್ಧಾರೆ. ಈ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಅವರನ್ನು ಒಂದು ವರ್ಗ ಸದ್ಯ ಟ್ರೋಲ್ ಮಾಡುತ್ತಿದೆ. ಇನ್ನೂ ಇತ್ತ ಸೆಪ್ಟೆಂಬರ್ 25ರೊಳಗೆ ತನ್ನ ನಿರ್ಧಾರ ತಿಳಿಸುವಂತೆ ಕೋರ್ಟ್ ಸಿಬಿಎಫ್‌ಸಿ ಗೆ ಆದೇಶ ನೀಡಿದ್ದು, ಸೆನ್ಸಾರ್ ಮಂಡಳಿಯ ಮುಂದಿನ ನಡೆಯ ಮೇಲೀಗ ಎಲ್ಲರ ಕಣ್ಣಿದೆ.


Click it and Unblock the Notifications









