'ಟಾಕ್ಸಿಕ್' ಚಿತ್ರದಿಂದ ಹೊರ ಬಂದ್ರು ಕರೀನಾ ಕಪೂರ್!; ಅಷ್ಟಕ್ಟೂ ಏನಾಯ್ತು?
ರಾಕಿಂಗ್ ಸ್ಟಾರ್ ನಟನೆಯ 'ಟಾಕ್ಸಿಕ್' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ 'ಟಾಕ್ಸಿಕ್' ಚಿತ್ರದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಿಂದ ಬಂದಿದೆ.
ಕರೀನಾ ಕಪೂರ್ ಯಾವಾಗ ಚಿತ್ರಕ್ಕೆ ಆಯ್ಕೆ ಆದರು? ಯಾವಾಗ ಹೊರ ಬಂದರು? ಇನ್ನು ಸಿನಿಮಾ ಚಿತ್ರೀಕರಣ ಆರಂಭವಾಗದ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗಿರುವಾಗ ಕರೀನಾ ಚಿತ್ರದಿಂದ ಹೊರಬರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ಕರೀನಾ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. ಬಹಳ ಪವರ್‌ಫುಲ್ ಪಾತ್ರ ಅದು ಎನ್ನುವ ಚರ್ಚೆ ನಡೆದಿತ್ತು.

ಕರೀನಾ ಕಪೂರ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಆಕೆ ಒಂದು ಸೌತ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿರುವುದಾಗಿ ವರದಿ ಆಗಿತ್ತು. ಆದರೆ ಅದು 'ಟಾಕ್ಸಿಕ್' ಸಿನಿಮಾ ಎಂದು ಖಚಿತವಾಗಿರಲಿಲ್ಲ. ಸದ್ಯ ಡೇಟ್ಸ್ ಸಮಸ್ಯೆಯಿಂದ ಕರೀನಾ ಕಪೂರ್ ಚಿತ್ರದಿಂದ ಹೊರ ಬರುತ್ತಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಬಹಳ ದೊಡ್ಡ ಪಾತ್ರ. ಹಾಗಾಗಿ ಸಾಕಷ್ಟು ದಿನಗಳ ಕಾಲ್‌ಶೀಟ್ ಬೇಕಿತ್ತು. ಆದರೆ ಕರೀನಾ ಕಪೂರ್ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶ್ ಡೇಟ್ಸ್ ಜೊತೆಗೆ ಆಕೆಯ ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ. ಬಹಳ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದ್ದಾಗ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ" ಎಂದು ಹೇಳಲಾಗಿದೆ.
'ಟಾಕ್ಸಿಕ್' ಒಡಹುಟ್ಟಿದವರ ಕಥೆ. ಚಿತ್ರದಲ್ಲಿ ಯಶ್ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಇವರಿಬ್ಬರ ಪಾತ್ರಗಳ ನಡುವೆಯೇ ಕಥೆ ಸಾಗುತ್ತದೆ. ಹಾಗಾಗಿ ಸ್ಟಾರ್ ನಟಿಯನ್ನು ಆಯ್ಕೆ ಮಾಡಿದ್ದರು. ಇದೀಗ ಕರೀನಾ ಬದಲಿಗೆ ಮತ್ತೊಬ್ಬ ಸ್ಟಾರ್ ನಟಿಯ ಹುಡುಕಾಟ ನಡೆಯುತ್ತಿದೆ ಎಂದು ಚರ್ಚೆ ಆಗುತ್ತಿದೆ.

ಗೀತು ಮೋಹನ್ ದಾಸ್ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೈಟಲ್, ಡೈರೆಕ್ಟರ್, ಬ್ಯಾನರ್ ಹಾಗೂ ರಿಲೀಸ್ ಡೇಟ್ ಬಿಟ್ಟರೆ ಚಿತ್ರದ ಬಗ್ಗೆ ಮತ್ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಡ್ರಗ್ಸ್ ಮಾಫಿಯಾ ಸುತ್ತಾ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ.
ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಕೈರಾ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಟ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರಲಿದೆ.
ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಆದರೆ ಬೆಂಗಳೂರಿನಿಂದಲೇ ಚಿತ್ರೀಕರಣ ಆರಂಭವಾಗಲಿದೆ. ಇನ್ನು ಹಾಲಿವುಡ್ ಕಲಾವಿದರು, ತಂತ್ರಜ್ಞರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋ ಸಾಧ್ಯತೆಯಿದೆ.
'KGF-2' ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿದೆ. ಜೊತೆ ರಾಕಿಂಗ್ ಸ್ಟಾರ್ ಮೇಲೆ ಒತ್ತಡ ಕೂಡ ಇದೆ. ಬಾಲಿವುಡ್‌ನಲ್ಲಿ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಈ ಎರಡೂ ಸಿನಿಮಾಗಳು ಭಾರೀ ಕುತೂಹಲ ಮೂಡಿಸಿವೆ. ಶೀಘ್ರದಲ್ಲೇ 'ಟಾಕ್ಸಿಕ್' ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲಿದೆ.


Click it and Unblock the Notifications











