ಡಾರ್ಲಿಂಗ್ ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ ಪಡುಕೋಣೆ?
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸದ್ಯ 'ಪ್ರಭಾಸ್ 20' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಜೊತೆಗೆ ಪ್ರಭಾಸ್ ಮತ್ತೊಂದು ಮೆಗಾ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ. 2018ರಲ್ಲಿ ರಿಲೀಸ್ ಆದ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ ಎನ್ನುವ ವಿಷಯ ಈಗಾಗಲೆ ಬಹಿರಂಗವಾಗಿದೆ.
ಇದರ ಬೆನ್ನಲ್ಲೆ ಈಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಹೌದು, ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಪ್ರಭಾಸ್ ಗೆ ನಾಯಕಿಯಾಗಲಿದ್ದಾರೆ ಎಂದು ಹೇಳಾಗುತ್ತಿದೆ. ಈಗಾಗಲೆ ಚಿತ್ರತಂಡ ದೀಪಿಕಾ ಜೊತೆ ಮಾತುಕತೆ ನಡೆಸಿದ್ದಾರಂತೆ.
ಆದರೆ ದೀಪಿಕಾ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಹಾನಟಿ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರಿಗೆ ಆಫರ್ ಮಾಡಲಾಗಿತ್ತಂತೆ. ಆದರೆ ಕೊನೆಯದಾಗಿ ಕೀರ್ತಿ ಸುರೇಶ್ ಚಿತ್ರಕ್ಕೆ ಆಯ್ಕೆಯಾದರು. ಮತ್ತೀಗ ನಿರ್ದೇಶಕ ನಾಗ್ ಅಶ್ವಿನ್ ಚಿತ್ರಕ್ಕೆ ದೀಪಿಕಾ ಹೆಸರು ಕೇಳಿ ಬರುತ್ತಿದೆ.

ಅಂದ್ಹಾಗೆ ದೀಪಿಕಾ ಇನ್ನು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚಿರುವ ದೀಪಿಕಾ ಈಗ ಪ್ರಭಾಸ್ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಕಥೆ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದರೆ ದೀಪಿಕಾ ತೆಲುಗು ಚಿತ್ರರಂಗದಲ್ಲಿಯೂ ಮಿಂಚಲಿದ್ದಾರೆ.
ದೀಪಿಕಾ ಸದ್ಯ 83 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ದೀಪಿಕಾ ಕೊನೆಯದಾಗಿ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ದೀಪಿಕಾ ಯಾವುದು ಸಿನಿಮಾವನ್ನು ಅನೌನ್ಸ್ ಮಾಡಿಲ್ಲ, ಹಾಗಾಗಿ ಪ್ರಭಾಸ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











