ತಮ್ಮ ಬಹುಕಾಲದ ಗೆಳೆಯನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಟಾಕ್ಸಿಕ್' ಚಿತ್ರದ ನಟಿ ?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇನ್ನು ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ...
ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ. ಚಿತ್ರರಂಗದಲ್ಲಿ ಕೂಡ ಇವರ ಸಂಖ್ಯೆ ಹೆಚ್ಚಿದೆ.ಆ ಪೈಕಿ ಪ್ರೀತಿಯ ಅಮಲೇರಿಸಿಕೊಂಡವರಲ್ಲಿ ಬಾಲಿವುಡ್‌ನ ಬೆಡಗಿ ಹುಮಾ ಖುರೇಷಿ ಕೂಡ ಒಬ್ಬರು. ಹೌದು ಹುಮಾ ಖುರೇಷಿ.. ಹಿಂದಿ ಚಿತ್ರರಂಗದ ''ಮಹಾರಾಣಿ''.

ಕಳೆದ 13 ವರ್ಷಗಳಿಂದ ಹತ್ತು ಹಲವು ಚಿತ್ರಗಳನ್ನು ಮಾಡಿರುವ ಹುಮಾ ಖುರೇಷಿ ಕೇವಲ ರೂಪವತಿ ಅಷ್ಟೇ ಅಲ್ಲ ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ''ಗ್ಯಾಂಗ್ಸ್ ಆಫ್ ವಾಸೇಪುರ್'', ''ಏಕ್ ಥಿ ಡಾಯನ್'', ''ಬದ್ಲಾಪುರ್''.. ಇದಕ್ಕೆ ಕೈಗನ್ನಡಿ.
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ'' ಕಾಲಾ'' ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಷಿ ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಯಶ್ ನಿರ್ಮಾಣ ಮಾಡಿ ಅಭಿನಯಿಸುತ್ತಿರುವ ''ಟಾಕ್ಸಿಕ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಎನ್ನುವ ಸುದ್ದಿ ಇದೆ.
ಸದ್ಯ ''ಜಾಲಿ ಎಲ್ ಎಲ್ ಬಿ 3'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ಹುಮಾ ಅಭಿನಯದ ''ಬಯಾನ್'' ಚಿತ್ರ ಮೊನ್ನೆಯಷ್ಟೇ ಟೊರೊಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ''ಪೂಜಾ ಮೇರಿ ಜಾನ್''.. ''ಗುಲಾಬಿ'' ಚಿತ್ರಗಳಲ್ಲಿ ಕೂಡ ಸದ್ಯ ಹುಮಾ ಅಭಿನಯಿಸುತ್ತಿದ್ದಾರೆ.
ಇಂಥಾ ಹುಮಾ ಖುರೀಷಿ ಸದ್ಯ ಸದ್ದಿಲ್ಲದೇ ತಮ್ಮ ಬಹುಕಾಲದ ಗೆಳೆಯ ರಚಿತ್ ಸಿಂಗ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇದಕ್ಕೆ ಪೂರಕವಾಗಿ ಹುಮಾ ಅವರ ಆಪ್ತ ಸ್ನೇಹಿತೆ ಅಕ್ಸಾ ಸಿಂಗ್ ರಚಿತ್ ಮತ್ತು ಹುಮಾ ಜೊತೆಯಲ್ಲಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆ ಈಗ ನಿಶ್ಚಿತಾರ್ಥದ ವದಂತಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ.

ಅಂದ್ಹಾಗೇ ಹುಮಾ ಖುರೇಷಿ ಹೃದಯ ಗೆದ್ದ ರಚಿತ್ ಸಿಂಗ್, ಫಿಟ್ನೆಸ್ ತರಬೇತುದಾರ. ಆಲಿಯಾ ಭಟ್, ರಣ್‌ವೀರ್ ಸಿಂಗ್ ಸೇರಿ ಹಲವು ತಾರೆಯರಿಗೆ ಜಿಮ್‌ನಲ್ಲಿ ಹೇಗೆ ಬೆವರಳಿಸಬೇಕು ಎನ್ನುವುದನ್ನು ಇವರು ಹೇಳಿ ಕೊಡುತ್ತಾರೆ. ಇಷ್ಟೇ ಅಲ್ಲದೇ ನಟನಾಗಿ ಕೂಡ ಚಿತ್ರರಂಗವನ್ನು ಪ್ರವೇಶಿಸಿರುವ ರಚಿತ್ ''ಕರ್ಮ ಕಾಲಿಂಗ್'' ಎಂಬ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.
ಇನ್ನೂ ಹುಮಾ ಮತ್ತು ರಚಿತ್ ಮೊದಲ ಬಾರಿ ಭೇಟಿಯಾಗಿದ್ದೆಲ್ಲಿ..? ಇಬ್ಬರ ನಡುವೆ ಪ್ರೇಮಾಂಕುರ ಆಗಿದ್ಹೇಗೆ..? ಎನ್ನುವುದಕ್ಕೆ ಉತ್ತರ ಇಲ್ಲವಾದರು 2024ರಲ್ಲಿ ಮಾರ್ಚ್ 2024 ರಲ್ಲಿ ಹಾಲಿವುಡ್ ಸಿಂಗರ್ ಎಡ್ ಶೀರನ್‌ಗಾಗಿ ಶಾರುಖ್ ಮತ್ತು ಗೌರಿ ಖಾನ್ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಇವರ ಆತ್ಮೀಯತೆ ಹಲವರಲ್ಲಿ ಅನುಮಾನವನ್ನು ಮೂಡಿಸಿತ್ತು. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಭಾಲ್ ಮದುವೆಯಲ್ಲಿ ಕೂಡ ಇಬ್ಬರು ಭಾಗವಹಿಸಿದ್ದರು.
ಇನ್ನುಳಿದಂತೆ ರಚಿತ್ ಸಿಂಗ್ ಅವರಿಗಿಂತ ಮೊದಲು ಹುಮಾ ಖುರೇಷಿ ಹೆಸರು ನಿರ್ಮಾಪಕ ಮುದಸರ್ ಅಜೀಜ್ ಜೊತೆ ಥಳುಕು ಹಾಕಿಕೊಂಡಿತ್ತು. ಆದರೆ 2022ರಲ್ಲಿ ಸಂಬಂಧ ಮುರಿದು ಬಿತ್ತು. ಸದ್ಯ ರಚಿತ್ ಸಿಂಗ್ ಅವರ ಜೊತೆ ಹುಮಾ ಖುರೇಷಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ ಎನ್ನುವ ಸುದ್ದಿ ಹಬ್ಬಿದೆ. ತಮ್ಮ ಈ ನಿಶ್ಚಿತಾರ್ಥದ ಸುದ್ದಿಯ ಕುರಿತು ಹುಮಾ ಪ್ರತಿಕ್ರಿಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











