ಆಸ್ಕರ್‌ಗೆ ಹೋಗಿದ್ದ ಲಾಪತಾ ಲೇಡೀಸ್ ಚಿತ್ರ ಕದ್ದ ಮಾಲು, ಎಲ್ಲರ ಕಣ್ಣಿಗೆ ಮಣ್ಣೆರಚಿದ ಆಮಿರ್ ಖಾನ್ ಮಾಜಿ ಪತ್ನಿ..!
ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರಿಗೆ ಒಂದು ರೋಗ ಇದೆ. ಕೊರಿಯನ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ಚಿತ್ರವನ್ನು ಮಾಡಿ ಅದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುವುದು. ಇನ್ನು ಕೆಲವರಲ್ಲಿ ಎಷ್ಟು ಧೈರ್ಯ ಇರುತ್ತೆ ಅಂದರೆ ಕದ್ದು ಚಿತ್ರ ಮಾಡಿದ್ದು ಅಲ್ಲದೆ, ಆ ಚಿತ್ರವನ್ನು ಅನೇಕ ಪ್ರಶಸ್ತಿಗಳಿಗೆ ಕಳಿಸುತ್ತಾರೆ. ಚಿತ್ರೋತ್ಸವದ ಆಯ್ಕೆ ಸಮಿತಿ ಮುಂದೆ ಕಳಿಸುತ್ತಾರೆ. ಉದಾಹರಣೆಗೆ ಕಿರಣ್ ರಾವ್.
ಹೌದು, ಆಗಷ್ಟೇ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆಯಾಗುತ್ತಾರೆ. ಹೀಗೆ ಕಾಣೆಯಾದ ಹುಡುಗಿಯರನ್ನು ಹುಡುಕುವ ಕೆಲಸಕ್ಕೆ ಗಂಡಂದಿರು ಮುಂದಾಗುತ್ತಾರೆ. ಹೆಂಡತಿಯನ್ನು ಕಳೆದುಕೊಂಡವನು ಎಂಬ ಅವಮಾನ ಒಂದು ಕಡೆಯಾದರೆ, ಕಳೆದು ಹೋದ ಹೆಂಡತಿಯ ಪರಿಸ್ಥತಿ ಹೇಗಿದೆಯೋ ಎಂಬ ಚಿಂತೆ ಮತ್ತೊಂದು ಕಡೆ. ಆ ನಂತರದ ರೋಚಕ ಪ್ರಯಾಣದ ಕಥೆಯೇ ಲಾಪತಾ ಲೇಡೀಸ್.

ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಚಿತ್ರ ತೆರೆಗೆ ಬಂದಾಗ ಸಾಕಷ್ಟು ಸದ್ದು ಮಾಡಿತ್ತು. ಎಲ್ಲರ ಹೃದಯವನ್ನು ಗೆದ್ದಿತ್ತು. ಇಷ್ಟೇ ಅಲ್ಲ 29 ಚಿತ್ರಗಳಲ್ಲಿ ಅಳೆದು ತೂಗಿ ಈ ಚಿತ್ರವನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಆಸ್ಕರ್‌ಗೆ ಕೂಡ ಕಳಿಸಿತ್ತು. ಇಂಥಾ ಲಾಪತಾ ಲೇಡೀಸ್ ಕದ್ದ ಮಾಲು ಎನ್ನುವುದು ಈಗ ಜಗಜ್ಜಾಹೀರಾಗಿದೆ.
ಹೌದು, ಅಸಲಿಗೆ 2019ರಲ್ಲಿ ಅರೇಬಿಕ್ ಭಾಷೆಯಲ್ಲಿ 'ಬುರ್ಖಾ ಸಿಟಿ' ಎಂಬ ಕಿರುಚಿತ್ರ ಬಂದಿತ್ತು. 19 ನಿಮಿಷಗಳ ಈ ಕಿರುಚಿತ್ರದಲ್ಲಿ ಬುರ್ಖಾ ಧರಿಸಿದ ಮಹಿಳೆ ಕಾಣೆಯಾಗುತ್ತಾಳೆ. ಬೇರೆ ಮಹಿಳೆಯನ್ನು ನಾಯಕ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಸತ್ಯ ಗೊತ್ತಾದ ನಂತರ ಹುಡುಕಾಟದ ಪ್ರಯಾಣ ಶುರುವಾಗುತ್ತೆ.
ಇನ್ನು ಲಾಪತಾ ಲೇಡೀಸ್ ತೆರೆಗೆ ಬಂದಾಗ ನಾಯಕ-ನಾಯಕಿಯ ಪಾತ್ರಗಳ ಜೊತೆಯಲ್ಲಿ ರವಿಕಿಶನ್ ಅವರ ಪಾತ್ರ ಗಮನ ಸೆಳೆದಿತ್ತು. ಇವರದ್ದು ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ರವಿಕಿಶನ್ ಅವರ ಪಾತ್ರವನ್ನೇ ಹೋಲುವಂತಹ ಪೊಲೀಸ್ ಪಾತ್ರ ಬುರ್ಖಾ ಸಿಟಿಯಲ್ಲಿ ಕೂಡ ಇದೆ. ಇನ್ನು ಬುರ್ಖಾ ಸಿಟಿ 2019ರಲ್ಲಿ ಬಿಡುಗಡೆಯಾಗಿತ್ತು. ಲಾಪತಾ ಲೇಡೀಸ್ ಮಾರ್ಚ್ 1 2024ರಲ್ಲಿ ರಿಲೀಸ್ ಆಗಿತ್ತು.
ಎರಡು ಕಥೆಯ ಆಶಯ ಒಂದೇ. ಸಮಾಜದಲ್ಲಿ ಇದ್ದರೂ ಇಲ್ಲದಂತೆ ಕೆಲವು ಮಹಿಳೆಯರ ಅಸ್ತಿತ್ವ ಕಾಣೆಯಾಗಿರುತ್ತದೆ. ಅವರ ಇಷ್ಟ ಕಷ್ಟ ಅವರ ಭವಿಷ್ಯ ಕಾಣೆಯಾಗಿರುತ್ತದೆ. ಮಹಿಳೆಯರ ಮೇಲೆ ಸಹಾನುಭೂತಿ ಗಂಡಸರ ಮನದೊಳಗೆ ಕಾಣೆಯಾಗಿರುತ್ತದೆ. ಹೀಗೆ ಕಾಣೆಯಾದ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಬುರ್ಖಾ ಸಿಟಿ ಮತ್ತು ಲಾಪತಾ ಲೇಡೀಸ್ ಚಿತ್ರದಲ್ಲಿ ಆಗಿದೆ. ಹೀಗಾಗಿಯೇ ಲಾಪತಾ ಲೇಡೀಸ್ ಚಿತ್ರ ಬುರ್ಖಾ ಸಿಟಿ ಕಿರುಚಿತ್ರದ ಯಥಾವತ್ತು ನಕಲು ಎನ್ನುವುದರಲ್ಲಿ ಡೌಟೇ ಇಲ್ಲ ಎನ್ನುವ ಅಭಿಪ್ರಾಯವನ್ನು ಈಗ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕೃತಿ ಚೌರ್ಯದಂತಹ ಕೆಲಸಕ್ಕೆ ಕಿರಣ್ ರಾವ್ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಅನೇಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಕಿರಣ್ ರಾವ್ ಈ ಕಥೆ ಕದ್ದ ಆರೋಪಕ್ಕೆ ಇನ್ನು ಪ್ರತಿಕ್ರಿಯೆ ನೀಡಿಲ್ಲ. ಆಮಿರ್ ಖಾನ್ ಕೂಡ ಮೌನ ಮುರಿದಿಲ್ಲ.ಮುಂಬರುವ ದಿನಗಳಲ್ಲಿ ಕಿರಣ್ ರಾವ್ ಇದಕ್ಕೆ ಉತ್ತರ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಅಂದ್ಹಾಗೇ ಚಿತ್ರಕ್ಕೆ ಆಮಿರ್ ಖಾನ್ ಬಂಡವಾಳ ಹೂಡಿದ್ದರು.


Click it and Unblock the Notifications











