'ಕಾಕ್‌ಟೇಲ್ 2' ಸಂಭಾವನೆ ; ರಶ್ಮಿಕಾ ಮಂದಣ್ಣ ಮಾಲಾಮಾಲ್ ? ಶಾಹಿದ್ ಮತ್ತು ಕೃತಿಗೆ ಸಿಕ್ಕ ಹಣ ಎಷ್ಟು?
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ. ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.
ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಯನ್ನು ತಲುಪಿದ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಸದ್ಯ ಗಗನಕ್ಕೇರಿದ್ದು, ''ಕಾಕ್‌ಟೇಲ್ 2'' ಚಿತ್ರಕ್ಕೆ ಕಿರಿಕ್ ಚೆಲುವೆಗೆ ಒಳ್ಳೆಯ ಪೇಚೆಕ್ ನೀಡಲಾಗಿದೆ ಎಂಬ ಸುದ್ದಿ ಸದ್ಯ ಮಾಯಾನಗರಿ ಮುಂಬೈನಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಹೌದು, ''ಕಾಕ್‌ಟೇಲ್ 2'' .. ಇದೇ ಜೂನ್ 19ರಂದು ತೆರೆಗೆ ಬರುತ್ತಿರುವ ಸಿನಿಮಾ. 2012ರಲ್ಲಿ ಬಿಡುಗಡೆಯಾಗಿದ್ದ ''ಕಾಕ್‌ಟೇಲ್'' ಚಿತ್ರದ ಸಿಕ್ವೆಲ್ ಇದು. ಅಂದು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ''ಕಾಕ್‌ಟೇಲ್'' ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ರಶ್ಮಿಕಾ ಮಂದಣ್ಣ ಜೊತೆ ಕೃತಿ ಸನೋನ್, ಶಾಹಿದ್ ಕಪೂರ್ ಇದ್ದಾರೆ.
ಇನ್ನು ''ಕಾಕ್‌ಟೇಲ್ 2'' ಚಿತ್ರದಲ್ಲಿ ಹಿಂದೆಂದೂ ನಿರ್ವಹಿಸದ ಪಾತ್ರವನ್ನು ರಶ್ಮಿಕಾ ನಿರ್ವಹಿಸಿದ್ದಾರೆ ಎನ್ನುವ ಸುದ್ದಿ ಇದೆ. ಆ ಪಾತ್ರ ಬೇರೆ ಯಾವುದು ಅಲ್ಲ ಬದಲಿಗೆ ಸಲಿಂಗ ಕಾಮಿಯ ಪಾತ್ರ ಎನ್ನುವುದು ಕೂಡ ಈಗಾಗಲೇ ಗುಲ್ಲಾಗಿದೆ. ಒಂದು ವೇಳೆ ಈ ಮಾತು ನಿಜಾ ಆದರೆ, ಒಂದಿಷ್ಟು ಬೋಲ್ಡ್ ಸನ್ನಿವೇಶಗಳನ್ನು ನೀವು ಇಲ್ಲಿ ನಿರೀಕ್ಷೆ ಮಾಡಬಹುದು.
''ಕಾಕ್‌ಟೇಲ್ 2'' ಚಿತ್ರಕ್ಕೆ ರಶ್ಮಿಕಾ ಹಾಕಿರುವ ಈ ಶ್ರಮಕ್ಕೆ ಬಾಕ್ಸಾಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಫಲ ಸಿಗುತ್ತೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ''ಕಾಕ್‌ಟೇಲ್ 2'' ಚಿತ್ರದಲ್ಲಿ ಅಭಿನಯಿಸಲು ರಶ್ಮಿಕಾ ಮಂದಣ್ಣ ಭಾರೀ ಸಂಭಾವನೆ ಪಡೆದಿದ್ದಾರೆ. ಆದರೆ .. ಇವರ ಸಂಭಾವನೆ ಶಾಹಿದ್ ಕಪೂರ್ ಅವರಿಗಿಂತ ಕಡಿಮೆ ಇದೆ. ಚಿತ್ರದ ಮತ್ತೊಬ್ಬ ಕಥಾ ನಾಯಕಿ ಕೃತಿ ಸನೋನ್ ಅವರಷ್ಟೇ ರಶ್ಮಿಕಾ ಅವರಿಗೆ ಕೂಡ ಸಂಭಾವನೆ ನೀಡಲಾಗಿದೆ ಎಂದು ''ಏಷ್ಯಾನೆಟ್ ನ್ಯೂಸ್'' ವರದಿ ಮಾಡಿದೆ.
''ಏಷ್ಯಾನೆಟ್ ನ್ಯೂಸ್'' ವರದಿಯ ಪ್ರಕಾರ ಶಾಹಿದ್ ಕಪೂರ್ ಈ ಚಿತ್ರಕ್ಕೆ 35 ಕೋಟಿ ಸಂಭಾವನೆ ಪಡೆದಿದ್ದಾರೆ. ಬಾಲಿವುಡ್‌ನಲ್ಲಿನ ಇವರ ಮಾರ್ಕೆಟ್ ವ್ಯಾಲ್ಯೂ ಮತ್ತು ಇವರ ಹಿಂದಿನ ಚಿತ್ರಗಳಾದ ''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'' ಮತ್ತು ''ಓ ರೋಮಿಯೋ''ದ ಸಾಧಾರಣ ಗೆಲುವನ್ನು ಗಮನದಲ್ಲಿ ಇಟ್ಕೊಂಡು ಈ ಸಂಭಾವನೆ ನಿಗಧಿ ಮಾಡಲಾಗಿದೆ.

ಇನ್ನು ಇದೇ ''ಏಷ್ಯಾನೆಟ್ ನ್ಯೂಸ್'' ವರದಿಯ ಪ್ರಕಾರ, ನಾಯಕಿಯರ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಚಿತ್ರತಂಡ ಮಾಡಿಲ್ಲ. ಇಬ್ಬರಿಗೂ ಸಮಪಾಲನ್ನು ಚಿತ್ರತಂಡ ನೀಡಿದ್ದು ಕೃತಿ ಮತ್ತು ರಶ್ಮಿಕಾ 15 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಒಂದು ವೇಳೆ ಇದು ನಿಜವೇ ಆದಲ್ಲಿ, ಬಾಲಿವುಡ್‌ನಲ್ಲಿ ಈಗಾಗಲೇ ಭದ್ರವಾಗಿ ನೆಲೆಯೂರುವಲ್ಲಿ ಯಶಸ್ವಿಯಾಗಿರುವ ಕೃತಿ ಸನೋನ್ ಅವರಷ್ಟೇ ಬ್ಯ್ರಾಂಡ್ ವ್ಯಾಲ್ಯೂ ಮತ್ತು ಸ್ಟಾರ್ ಡಂ ರಶ್ಮಿಕಾ ಮಂದಣ್ಣ ಅವರಿಗೆ ಕೂಡ ಇದೆ ಎಂದರ್ಥ. ಕನ್ನಡ ಚಿತ್ರರಂಗದಿಂದ ವೃತ್ತಿ ಬದುಕು ಶುರು ಮಾಡಿ 10-15 ಕೋಟಿಯ ಕ್ಲಬ್‌ನಲ್ಲಿ ರಶ್ಮಿಕಾ ಇದ್ದಾರೆ ಎಂದರೆ ಅದು ಸಾಮಾನ್ಯ ವಿಷಯ ಖಂಡಿತ ಅಲ್ಲ. ಸತತ ಪರಿಶ್ರಮದ ಫಲ.
ಆದರೆ, ಚಿತ್ರರಂಗದ ಎಲ್ಲಾ ವಿಶ್ಲೇಷಕರು ಈ ₹15 ಕೋಟಿ ಮೊತ್ತವನ್ನು ಒಪ್ಪಿಕೊಳ್ಳುತ್ತಿಲ್ಲ. ಕೆಲವು ಪ್ರಮುಖ ಬಾಲಿವುಡ್ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಇದು ಕೇವಲ ಗಾಳಿಸುದ್ದಿ ಇರಬಹುದಷ್ಟೇ. ಇದಕ್ಕೆ ಕಾರಣವನ್ನು ಕೂಡ ನೀಡಿರುವ ಹಲವರು ರಶ್ಮಿಕಾ ಮಂದಣ್ಣ ಸಾಮಾನ್ಯವಾಗಿ ದಕ್ಷಿಣ ಭಾರತದ ಚಿತ್ರಗಳಿಗೆ ₹5 ರಿಂದ ₹6 ಕೋಟಿ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ ಒಮ್ಮೆಲೇ ₹15 ಕೋಟಿಗೆ ಜಂಪ್ ಆಗುವುದು ಕಷ್ಟ ಎನ್ನುವುದು ಇವರ ತರ್ಕ. ಆದಾಗ್ಯೂ, ರಶ್ಮಿಕಾ ಸಂಭಾವನೆಯಲ್ಲಿ ಏರಿಕೆಯಂತೂ ಆಗಿದ್ದು ನಿಜವಾದ ಸಂಭಾವನೆ ₹10 ಕೋಟಿಯ ಆಸುಪಾಸಿನಲ್ಲಿರಬಹುದು ಎಂಬ ಅಭಿಪ್ರಾಯವನ್ನು ಕೂಡ ಈ ಟ್ರೇಡ್ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಕಾಕ್‌ಟೇಲ್ 2 ಚಿತ್ರಕ್ಕೆ ರಶ್ಮಿಕಾ ಪಡೆದ ಸಂಭಾವನೆ ಹದಿನೈದು ಇರಲಿ ಅಥವಾ ಹತ್ತೇ ಇರಲಿ, ಬಾಲಿವುಡ್‌ನ ಹೈಯೆಸ್ಟ್ ಪೇಯ್ಡ್ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸೇರಿಕೊಂಡಿರುವುದು ಇವರ ಅಭಿಮಾನಿಗಳ ಸಂಭ್ರಮವನ್ನಂತೂ ಹೆಚ್ಚಿಸಿದೆ.


Click it and Unblock the Notifications