For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಖಾನ್‌ಗಳ ಜಮಾನ ಮುಗಿಯಿತೇ?

  |

  ಬಾಲಿವುಡ್ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ನಿಧಾನವಾಗಿ ನೇಪಥ್ಯಕ್ಕೆ ಸರಿದಿದ್ದರು. ಆಂಗ್ರಿ ಯಂಗ್ ಮ್ಯಾನ್ ಅಮಿತಾಬಚ್ಚನ್ ಮಾಸ್ ಸಿನಿಮಾಗಳು ಮಾಡುವ ಸ್ಥಿತಿಯಲ್ಲಿದ್ದರು. ಬಾಲಿವುಡ್ ಎಂದರೆ ಅದೊಂದು ರಂಗುರಂಗಿನ ಪ್ರಪಂಚ ರೊಮ್ಯಾಂಟಿಕ್ ಹಾಡುಗಳು, ಪ್ರೇಮಕಥೆಗಳು ಹೀಗಾಗಿಯೇ ಬಾಲಿವುಡ್ ಗೆ ಬೇಕಾಗಿದ್ದ ಹೊಸ ರೋಮ್ಯಾಂಟಿಕ್ ಹೀರೋಗಳ ತಲಾಶೆ ನಡೆದಿತ್ತು. ಆಗಲೇ ಅಲ್ಲಿ ಕಂಡಿದ್ದು ಮೊದಲು ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ನಿಧಾನವಾಗಿ ಶಾರುಖ್ ಖಾನ್...ಅಕ್ಷರಶಃ ಬಾಲಿವುಡ್ ಎಂದರೆ ಈ ಮೂವರು ಖಾನ್ ಗಳು ಮಾತ್ರ ಎಂಬಂತೆ ಬೇರೂರಿದರು.

  ಸಲ್ಮಾನ್ ಖಾನ್ ಅಭಿನಯದ ಮೊದಲ ಚಿತ್ರ 'ಮೈನೆ ಪ್ಯಾರ್ ಕಿಯಾ' ರಾಜಶ್ರೀ ಬ್ಯಾನರ್ ನಲ್ಲಿ ಮೂಡಿ ಬಂದ ಈ ಚಿತ್ರ ಸಂಚಲನವನ್ನು ಉಂಟು ಮಾಡಿತ್ತು. ರಾತ್ರೋರಾತ್ರಿ ಸಲ್ಮಾನ್ ಖಾನ್ ಸ್ಟಾರ್ ನಟನಾದ.ಅದೇ ರೀತಿ ಅಮೀರ್ ಖಾನ್ ಕೂಡ 'ಕಯಾಮತ್ ಸೆ ಕಯಾಮತ್ ತಕ್' ಮೂಲಕ ಸ್ಟಾರ್ ನಟನಾದನು. ಹೀಗೆ ಎಂಬತ್ತರ ದಶಕದ ಕೊನೆಯಲ್ಲಿ ಇವರಿಬ್ಬರು ಹಿಂದಿ ಚಲನಚಿತ್ರರಂಗದಲ್ಲಿ ಪದಾರ್ಪಣೆ ಮಾಡಿ ಸ್ಟಾರ್ ಗಳಾದರು. ಆದರೆ ಇವರಿಬ್ಬರಿಗೂ ಮೂಲತಃ ಬಾಲಿವುಡ್ ಚಿತ್ರರಂಗದ ನಂಟು ಇತ್ತು. ಸಿನಿ ನೇಪಥ್ಯದ ಹಿನ್ನೆಲೆಯಲ್ಲಿ ಅವರ ಬಾಲಿವುಡ್ ಎಂಟ್ರಿ ಸುಲಭವಾಗಿತ್ತು. ಆದರೆ ಯಾವುದೇ ಸಿನಿಮಾ ನೇಪಥ್ಯದ ಹಿನ್ನೆಲೆ ಇಲ್ಲದೆ ಬಂದ ಶಾರುಖ್ ಖಾನ್ ಮಾತ್ರ ಇವರಿಬ್ಬರನ್ನು ಮೀರಿ ಬೆಳೆದರು.

  ಅಮೀರ್ ಖಾನ್ ಅಥವಾ ಸಲ್ಮಾನ್ ಖಾನ್ ಥರ ಯಾವುದೇ ಗಾಡ್ ಫಾದರ್ ಅಥವಾ ಸಿನಿ ಕುಟುಂಬದ ಹಿನ್ನೆಲೆ ಇಲ್ಲದೆ ಸ್ವಯಂ ತನ್ನ ಸಾಮರ್ಥ್ಯದ ಮೇಲೆ ತಾನು ಬೆಳೆದ ನಟ ಶಾರುಖ್. ದೆಹಲಿ ಮೂಲದ ಶಾರುಖ್ ಖಾನ್ ಆರಂಭದಲ್ಲಿ ನಾಟಕರಂಗದಲ್ಲಿ ಸಕ್ರಿಯರಾಗಿದ್ದರು, ಮುಂದೆ ದೂರದರ್ಶನದಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿ ಯಾಗಿದ್ದ 'ಸರ್ಕಸ್' ಮೂಲಕ ಜನರ ಗಮನ ಸೆಳೆದರು. ತೊಂಬತ್ತರ ದಶಕದ ಆರಂಭದಲ್ಲಿ ಬಂದ 'ದಿವಾನ' ಚಿತ್ರದಲ್ಲಿ ಎರಡನೇ ನಾಯಕನಟನಾಗಿ ಸಿನಿ ಪಾದಾರ್ಪಣೆ ಮಾಡಿದರು. ಮುಂದಿನ ವರ್ಷ ಬಿಡುಗಡೆಯಾದ 'ಡರ್', 'ಬಾಜಿಗರ್', ಚಿತ್ರಗಳ ಮೂಲಕ ಅಪಾರವಾದ ಜನಪ್ರಿಯತೆಯನ್ನು ಪಡೆದರು. ಇಲ್ಲಿಂದ ಮುಂದೆ ಅಂದರೆ 'ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದ ಮೋಸ್ಟ್ ಡಿಮ್ಯಾಂಡ್ ನಟನಾಗಿ ಬದಲಾದರು. ಮುಂದೆ ಬಂದ 'ದಿಲ್ ತೋ ಪಾಗಲ್ ಹಾಯ್", 'ಕುಚ್ಚು ಕುಚ್ಚು ಹೋತ ಹೈ' ಸಿನಿಮಾಗಳು ಶಾರುಖ್ ಖಾನ್ ಅವರನ್ನು ಬಾಲಿವುಡ್ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ರೂಪಿಸಿತು.

  90ರ ದಶಕ ಖಾನ್ ಗಳ ಸಾಮ್ರಾಜ್ಯ

  90ರ ದಶಕ ಖಾನ್ ಗಳ ಸಾಮ್ರಾಜ್ಯ

  ತೊಂಬತ್ತರ ದಶಕದ ಯಾವುದೇ ನಾಲ್ಕು ಸೂಪರ್ ಹಿಟ್ ಚಿತ್ರಗಳು ತೆಗೆದುಕೊಂಡರೆ ಅದರಲ್ಲಿ ಮೂರು ಚಿತ್ರಗಳು ಖಾನ್‌ಗಳದೆ ಆಗಿರುತ್ತದೆ. 'ಬಾಜಿಗರ್", 'ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ', 'ದಿಲ್ ತೋ ಪಾಗಲ್ ಹೈ', 'ಕುಚ್ ಕುಚ್ ಹೋತ ಹೈ','ಮೈನೆ ಪ್ಯಾರ್ ಕಿಯಾ' 'ಹಮ್ ಆಪ್ಕೆ ಹೈ ಕೌನ್','''ಹಮ್ ಸಾಥ್ ಸಾಥ್ ಹೇ', 'ಖಯಾಮತ್ ಸೆ ಖಯಾಮತ್ ತಕ್", 'ದಿಲ್' ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಕಣ್ಣಮುಂದೆ ಬರುತ್ತದೆ. ಇದೇ ಸಮಯದಲ್ಲಿ ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಕೂಡ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. ಅವರ ಚಿತ್ರಗಳು ಕೂಡ ತಕ್ಕಮಟ್ಟಿಗೆ ಯಶಸ್ಸು ಕಂಡರು ಖಾನ್ ಗಳ ಆರ್ಭಟ ಜೋರಾಗಿತ್ತು. ಬಾಲಿವುಡ್ ಅಂದರೆ ಖಾನ್ ಗಳು ಎನ್ನುವ ಸ್ಥಿತಿಯಲ್ಲಿ ಬಾಲಿವುಡ್ ಆ ಸಮಯದಲ್ಲಿತ್ತು.

  ಹೃತಿಕ್ ರೋಷನ್ ಎಂಬ ವಂಡರ್

  ಹೃತಿಕ್ ರೋಷನ್ ಎಂಬ ವಂಡರ್

  ಒಂದೆಡೆ ಖಾನ್‌ಗಳ ದರ್ಬಾರು ಇನ್ನೊಂದು ಕಡೆ ಬಾಲಿವುಡ್ ಮೇಲೆ ಅಂಡರ್ ವರ್ಲ್ಡ್ ಕರಿನೆರಳು. ಬಹುತೇಕ ಸಿನಿಮಾಗಳಿಗೆ ಫೈನಾನ್ಸ್ ಕೂಡ ಭೂಗತ ಜಗತ್ತು ಕಡೆಯಿಂದಲೇ ಬರುತ್ತಿತ್ತು ಮತ್ತು ಅವರ ಸಿನಿಮಾಗಳ ನಟ-ನಟಿಯರು ತಾಂತ್ರಿಕ ವರ್ಗದವರನ್ನು ಕೂಡ ನಿರ್ಣಯಸುತ್ತಿದ್ದರು. ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಶನ್ ಆಗಾಗಲೇ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿಯ 'ಕರಣ್ ಅರ್ಜುನ್' ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. 'ಕಹೋ ನಾ ಪ್ಯಾರ್ ಹೇ' ಚಿತ್ರವನ್ನು ನಿರ್ಮಿಸುವ ಆಲೋಚನೆ ಬಂದ ತಕ್ಷಣ ರಾಕೇಶ್ ರೋಷನ್, ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಕಥೆಯನ್ನು ವಿವರಿಸುತ್ತಾರೆ.

  ಒಂದೇ ಸಿನಿಮಾ ಇಂದ ಸೂಪರ್ ಸ್ಟಾರ್ ಆದ ಹೃತಿಕ್

  ಒಂದೇ ಸಿನಿಮಾ ಇಂದ ಸೂಪರ್ ಸ್ಟಾರ್ ಆದ ಹೃತಿಕ್

  ಆಗಿನ ಸಮಯದಲ್ಲಿ ಶಾರುಖ್ ಖಾನ್ ಕಾಲ್ಶೀಟ್ ಸಿಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಶಾರುಖ್ ಚಿತ್ರದಲ್ಲಿ ನಟಿಸಲು ನಿರಾಕರಿಸುತ್ತಾರೆ, ಆಗ ರಾಕೇಶ್ ರೋಷನ್ ತನ್ನ ಮಗ ಹೃತಿಕ್ ರೋಷನ್ ನನ್ನ ಚಿತ್ರಕ್ಕೆ ನಾಯಕನಟನಾಗಿ ಮಾಡುತ್ತಾರೆ. ಚಿತ್ರ ಬಾಲಿವುಡ್ ನಲ್ಲಿ ಹೊಸ ಇತಿಹಾಸವನ್ನು ಬರುತ್ತದೆ. ಮೊದಲ ಚಿತ್ರದ ಮೂಲಕವೇ ಸೂಪರ್ ಸ್ಟಾರ್ ಆದ ನಟ ಹೃತಿಕ್ ರೋಷನ್. ರಾಜೇಶ್ ಖನ್ನ ನಂತರ ಅಂತಹದೊಂದು ಸ್ಟಾರ್ ಡಮ್ ಹೃತಿಕ್ ರೋಷನ್ ಪಾಲಿಗೆ ಏರ್ಪಡುತ್ತದೆ. ಅಲ್ಲಿಗೆ ಖಾನ್ ಗಳು ಹೊರತಾದ ಹೊಸ ಸೂಪರ್ ಸ್ಟಾರ್ ಒಬ್ಬ ಉದಯಿಸಿದ. ಇದೇ ಸಮಯದಲ್ಲಿ ಸಿನಿಮಾದ ಗಳಿಕೆ ಕಂಡ ಭೂಗತ ಜಗತ್ತು ರಾಕೇಶ್ ರೋಷನ್ ಮೇಲೆ ಹಣಕ್ಕಾಗಿ ದಾಳಿ ಕೂಡ ಮಾಡುತ್ತದೆ. ಆದರೆ ಇದನ್ನು ರಾಕೇಶ್ ರೋಷನ್ ಧೈರ್ಯವಾಗಿ ಎದುರಿಸುತ್ತಾರೆ. ಮಗನನ್ನು ಸೂಪರ್ ಸ್ಟಾರ್ ಮಾಡಿದ ರಾಕೇಶ್ ರೋಷನ್ ಭೂಗತ ಜಗತ್ತಿನ ಮುಂದೆ ಕೂಡ ತಲೆ ತಗ್ಗಿಸದೆ ಧೈರ್ಯವಾಗಿ ಸಮಸ್ಯೆಯನ್ನು ಎದುರಿಸುತ್ತಾರೆ.ಇದು ಇತರ ಎಷ್ಟೋ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಭೂಗತ ಜಗತ್ತಿನ ವಿರುದ್ಧ ಹೋರಾಡುವ ಶಕ್ತಿಯನ್ನು ಸಹ ಕೊಡುತ್ತದೆ.

  ಬದಲಾದ ಖಾನ್ ಗಳ ಸಿನಿಮಾ ಆಯ್ಕೆ

  ಬದಲಾದ ಖಾನ್ ಗಳ ಸಿನಿಮಾ ಆಯ್ಕೆ

  ತೊಂಬತ್ತರ ದಶಕದಲ್ಲಿ ಸಂಪೂರ್ಣವಾಗಿ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಅಭಿನಯಿಸಿದ ಖಾನ್‌ಗಳು 2000 ನಂತರ ಹೊಸತನದ ಕಥೆಗಳ ಕಡೆಗೆ ಕೂಡ ಮುಖ ಮಾಡಿದರು. ಒಂದಡೆ ಹೃತಿಕ್ ರೋಷನ್ ಅಂತಹ ಹೊಸ ಸ್ಟಾರ್ ಉದಯಸಿದ್ದ, ಇನ್ನೊಂದೆಡೆ ಅಜಯ್ ದೇವಗನ್ ಆಕ್ಷನ್ ಚಿತ್ರಗಳ ಮೂಲಕ ಅಕ್ಷಯ್ ಕುಮಾರ್ ಕಾಮಿಡಿ ಚಿತ್ರಗಳ ಮೂಲಕ ಭಾರಿ ಯಶಸ್ಸನ್ನು ಕಾಣಲು ಆರಂಭಿಸಿದರು. ಇದೇ ಸಮಯದಲ್ಲಿ ಖಾನ್ ಗಳು ಕೂಡ ಹೊಸ ಸಿನಿಮಾಗಳ ಪ್ರಯತ್ನಕ್ಕೆ ಮುಂದಾದರು. 'ಸ್ವದೇಶ್', 'ಸರ್ಫಾರೋಷ್','ಲಗಾನ್', 'ಚಕ್ಕದೆ ಇಂಡಿಯಾ' ಇಂತಹ ಚಿತ್ರಗಳು ಕೂಡ ತೆರೆಗೆ ಬಂದಿತ್ತು. ಇದೇ ಸಮಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಸಲ್ಮಾನ್ ಖಾನ್ ಮಾತ್ರ ಸೌತ್ ಸಿನಿಮಾಗಳ ರಿಮೇಕ್ ಮೂಲಕ ಮತ್ತೆ ಸ್ಟಾರ್ ನಟರಾದರು 'ವಾಂಟೆಡ್,' 'ರೆಡಿ', 'ದಬಾಂಗ್', 'ಏಕ್ತಾ ಟೈಗರ್' ಮುಂತಾದ ಮಾಸ್ ಎಂಟರ್ಟೈನ್ಮೆಂಟ್ ಮೂಲಕ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡರು.

  ಹೊಸಬರ ಮುಂದೆ ಮಂಕಾದ ಖಾನ್‌ಗಳು

  ಹೊಸಬರ ಮುಂದೆ ಮಂಕಾದ ಖಾನ್‌ಗಳು

  2010 ನಂತರ ಡಿಜಿಟಲ್ ಯುಗ ಆರಂಭವಾಯಿತು. ದೇಶ-ವಿದೇಶದ ಎಲ್ಲಾತರದ ಸಿನಿಮಾಗಳು ಜನರಿಗೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಮೂಲಕ ನೋಡಲು ದೊರೆಯಿತು. ಆಗ ಬಾಲಿವುಡ್ ರಂಗದಲ್ಲಿನ ಏಕತಾನತೆ ಜನರನ್ನು ರಂಜಿಸಲು ವಿಫಲವಾಗಿ ಫುಲ್ ಮೀಲ್ಸ್ ಉಣಬಡಿಸುವ ಸೌತ್ ಇಂಡಿಯಾ ಸಿನಿಮಾಗಳನ್ನು ನೋಡಲು ಮತ್ತು ಹೆಚ್ಚು ಎಂಜಾಯ್ ಮಾಡಲು ಹಿಂದಿ ಬೆಲ್ಟ್‌ನ ಜನ ಆರಂಭಿಸಿದರು.

  ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಗಳ ಆಗಮನ

  ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಗಳ ಆಗಮನ

  ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಬಾಲಿವುಡ್ ಪಾಲಿಗೆ ಅಕ್ಷರಶಃ ದುಃಸ್ವಪ್ನದಂತೆ ಕಾಡಿತು. ಬಾಲಿವುಡ್ ಹೊರತಾದ ಹೊಸ ಹೀರೋ ಪ್ರಭಾಸ್ ಭಾರತೀಯ ಸಿನಿಮಾ ರಂಗದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ. ಶಾರುಖ್ ಖಾನ್ ಅಭಿನಯದ 'ಜೀರೋ' ಎದುರು 'ಕೆಜಿಎಫ್' ತೊಡೆ ತಟ್ಟಿ ಗೆದ್ದ ಮೇಲೆ ಯಶ್ ಬಾಲಿವುಡ್ ಮಂದಿಯ ನಿದ್ದೆಗೆಡಿಸಿದ. ಇನ್ನು ಇತ್ತೀಚೆಗೆ ಬಿಡುಗಡೆಗೊಂಡಿರುವ 'ಪುಷ್ಪ' ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಮರ್ಜ್ ಆಗಿದ್ದಾನೆ. ಇನ್ನು ಸರದಿ ಸಾಲಿನಲ್ಲಿ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ಟಿಆರ್ ಕೂಡ ಇದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ ಮೇಲೆ ಮತ್ತು ಅದರ ನೆಪೊಟಿಸಂ ಬಗ್ಗೆ ವ್ಯಾಪಕವಾದ ಆಕ್ರೋಶ ಹೊರ ಹೊಮ್ಮುತ್ತಲೇ ಇದೆ. ಇನ್ನು ಬದಲಾದ ಕಾಲಘಟ್ಟದಲ್ಲಿ 'ತಾನಾಜಿ', 'ಬಾಹುಬಲಿ', 'ಆದಿಪುರುಷ' ಅಂತಹ ಚಿತ್ರಗಳ ಹವಾ ಕೂಡ ಹೆಚ್ಚುತ್ತಿದೆ. ಇನ್ನೊಂದೆಡೆ ರಗಡ್ ಮಾಸ್ (ಕೆಜಿಎಫ್) ಚಿತ್ರಗಳು ಹಿಂದಿ ಜನರನ್ನು ಆಕರ್ಷಿಸುತ್ತಿದೆ. ಹೀಗಾಗಿಯೇ ಕಳೆದ ಐದು ವರ್ಷಗಳಿಂದ ಮೂರು ಖಾನ್ ಗಳಿಗೆ ಸರಿಯಾದ ಒಂದೇ ಒಂದು ದೊಡ್ಡ ಹಿಟ್ ಕೂಡ ಇಲ್ಲ.

  ಅಲ್ಲದೆ ಮೂವರ ವಯಸ್ಸು ಕೂಡ ಈಗ ಬರೋಬ್ಬರಿ 55 ದಾಟಿದೆ, ಹೀಗಾಗಿ ರೋಮ್ಯಾನ್ಸ್ ಚಿತ್ರಗಳನ್ನು ಮಾಡುವ ಸ್ಥಿತಿಯಲ್ಲಿ ಇಲ್ಲ. ಮಾಡಿದರೂ ಅಂತಹ ಚಿತ್ರಗಳನ್ನು ಜನ ಈಗ ನೋಡುವುದಿಲ್ಲ. ಇನ್ನೊಂದೆಡೆ ರಗಡ ಮಾಸ್ ಎಲಿಮೆಂಟ್ ಚಿತ್ರಗಳನ್ನು ಕೂಡ ಮಾಡಲು ಅವರ ವಯಸ್ಸ ಕೂಡ ಅಡ್ಡಿಯಾಗಿದೆ. ಈಗ ಎಲ್ಲೋ ಒಂದೆಡೆ ಬದಲಾಗುತ್ತಿರುವ ಜನರ ಅಭಿರುಚಿಗೆ ತಕ್ಕ ಚಿತ್ರಗಳಲ್ಲಿ ಅಭಿನಯಿಸುವುದು ಮೂವರು ಖಾನ್ ಗಳಿಗೂ ಕೂಡ ಕಷ್ಟಕರ ಅನಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಪ್ರಭಾಸ್ ಇಡೀ ಭಾರತೀಯ ಸಿನಿಮಾ ರಂಗದ ನಂಬರ್ ಒನ್ ನಟನಾಗಿ ಮಿಂಚುತ್ತಿದ್ದಾರೆ. ಯಶ್, ಅಲ್ಲು ಅರ್ಜುನ್ ಕೂಡ ಪೈಪೋಟಿಗೆ ಇಳಿದಿದ್ದಾರೆ. ಆದರೆ ಈ ಪೈಪೋಟಿಯಲ್ಲಿ ಕಳೆದು ಹೋಗುತ್ತಿರುವುದು ಮಾತ್ರ ಈ ಅಮೀರ್- ಸಲ್ಮಾನ್- ಶಾರುಖ್ ಖಾನ್‌ಗಳು.

  English summary
  Is it Khan's era is ending in Bollywood? In 90's Bollywood was mainly ruled by three Khan's. Nearly 3 decades only Khan's films dominated Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion