ನಟಿ ಪೂನಂ ಪಾಂಡೆ ಜೀವಂತವಾಗಿದ್ದಾರಾ? ಆಕೆಯ ಸಾವಿನ ಸುದ್ದಿಗೂ ಕೇಂದ್ರ ಬಜೆಟ್ ಭಾಷಣಕ್ಕೂ ಇದ್ಯಾ ಲಿಂಕ್?
ಸಾವಿನ ವಿಚಾರದಲ್ಲಿ ತಮಾಷೆ ಮಾಡಬಾರದು ಅಂತಾರೆ. ನಿನ್ನೆಯಷ್ಟೆ(ಫೆಬ್ರವರಿ 2) ವಿವಾದಾತ್ಮಕ ನಟಿ ಪೂನಂ ಪಾಂಡೆ ನಿಧನರಾಗಿರುವುದು ಸುದ್ದಿ ಬಂದಿತ್ತು. ಬಹುತೇಕರು ಇದನ್ನು ನಂಬಿದ್ದಾರೆ. ಆಕೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಈಗೆ ಆಕೆ ಸತ್ತಿಲ್ಲ, ಇನ್ನು ಜೀವಂತವಾಗಿದ್ದಾರೆ, ಎನ್ನುವ ಊಹಾಪೋಹ ಶುರುವಾಗಿದೆ.
ಪೂನಂ ಸಾವಿನ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. "ನಮ್ಮ ಪ್ರೀತಿಯ ಪೂನಂನ ಕಳೆದುಕೊಂಡಿದ್ದೇವೆ" ಎಂದು ಬರೆಯಲಾಗಿತ್ತು. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. 3 ದಿನಗಳ ಹಿಂದೆ ಆರಾಮಾಗಿ ಓಡಾಡಿಕೊಂಡಿದ್ದ ನಟಿಗೆ ದಿಢೀರ್ ಏನಾಯ್ತು? ಎನ್ನುವ ಚರ್ಚೆ ಶುರುವಾಗಿತ್ತು. ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಭಾವಿಸಿದ್ದರು. ಆದರೆ ಪೂನಂ ಸಾವಿನ ಬಗ್ಗೆ ಆಕೆಯ ಮ್ಯಾನೇಜರ್ ಖಚಿತಪಡಿಸಿದ ಮೇಲೆ ಎಲ್ಲರೂ ನಿಜ ಎಂದು ಖಾತ್ರಿಪಡಿಸಿಕೊಂಡಿದ್ದರು.

ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಕೊನೆಯುಸಿರೆಳೆದಿದ್ದಾರೆ ಹೇಳಲಾಗಿತ್ತು. ರಾತ್ರಿ ವೇಳೆಗೆ ಪೂನಂ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆದಿದ್ದಾಗಿಯೂ ಆಕೆಯ ಮ್ಯಾನೇಜರ್ ಪಾರುಲ್ ಚಾವ್ಲಾ ತಿಳಿಸಿದ್ದರು. ಆದರೆ ಈಗ ಆಕೆ ಸತ್ತಿಲ್ಲ, ಪಬ್ಲಿಸಿಟಿಗಾಗಿ ಸಾವಿನ ನಾಟಕ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಬಿಟ್ಟಿ ಪಬ್ಲಿಸಿಟಿಯಿಂದಲೇ ಪೂನಂ ಹೆಚ್ಚು ಸುದ್ದಿಯಾಗಿದ್ದು. ಸಾವಿನ ಸುದ್ದಿ ಕೂಡ ಫೇಕ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
2011ರಲ್ಲಿ "ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ" ಎಂದು ಹೇಳಿ ಪೂನಂ ಪಾಂಡೆ ಸಂಚಲನ ಸೃಷ್ಟಿಸಿದ್ದಳು. ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿದ್ದಳು. ಯಾರಪ್ಪಾ ಈಕೆ ಎಂದು ನೆಟ್ಟಿಗರು ಗೂಗಲ್‌ನಲ್ಲಿ ಹುಡುಕಾಡಿದ್ದರು. 13 ವರ್ಷಗಳ ಬಳಿಕ ಮತ್ತೆ ಅದೇ ರೀತಿ ಪೂನಂ ಪಾಂಡೆ ಟ್ರೆಂಡ್ ಆಗುತ್ತಿದ್ದಾರೆ. ಅದು ಕೂಡ ಆಕೆಯ ಸಾವಿನ ಸುದ್ದಿಯಿಂದ. ಆದರೆ ಈಗ ಆಕೆ ಜೀವಂತವಾಗಿದ್ದಾಳೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಪೂನಂ ಸಾವಿನ ಸುದ್ದಿ ಕೇಳಿ ಎಲ್ಲರೂ ಸಂತಾಪ ಸೂಚಿಸಿದರೆ ಕೆಲವರು ಮಾತ್ರ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆಕೆ ನಿಜವಾಗಿಯೂ ಗರ್ಭಕಂಠ ಕ್ಯಾನ್ಸರ್‌ನಿಂದ ನಿಧನರಾದ್ರಾ? ಅಥವಾ ಬೇರೆ ಸಮಸ್ಯೆ ಇತ್ತಾ? ಈ ಬಗ್ಗೆ ಖಚಿತ ಮಾಹಿತಿ ಬೇಕು ಎನ್ನುತ್ತಿದ್ದಾರೆ. ಆದರೆ ಪೂನಂ ಸತ್ತಿದ್ದರೆ ಆಕೆಯ ಮೃತದೇಹ ಎಲ್ಲಿ? ಮ್ಯಾನೇಜರ್ ಅಂತ್ಯಕ್ರಿಯೆ ನಡೀತು ಎಂದು ಹೇಳಿದ್ದಾರೆ. ಅದಕ್ಕೆ ಆಧಾರ ಏನು? ಇನ್ನು ಆಕೆಯ ಕುಟುಂಬಸ್ಥರು ಎಲ್ಲಿದ್ದಾರೆ? ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಎಂದು ನೆಟ್ಟಿಗರು ಕೇಳುತ್ತಿದ್ದಾರೆ.
ಪೂನಂ ಪಾಂಡೆ ಶಾಕಿಂಗ್ ನ್ಯೂಸ್‌ಗಳನ್ನು ಕೊಟ್ಟು ಪದೇ ಪದೆ ಬಿಟ್ಟಿ ಪಬ್ಲಿಸಿಟಿ ಪಡೆಯುತ್ತಾರೆ. ಇದು ಕೂಡ ಅಂಥದ್ದೇ ಸುಳ್ಳು ಸುದ್ದಿನಾ? ಅಥವಾ ನಿಜವಾಗಿಯೂ ಆಕೆ 32ನೇ ವಯಸ್ಸಿಗೆ ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ರಾ? ಎನ್ನುವ ವಿಚಾರ ಚರ್ಚೆಗೆ ಬಂದಿದೆ.
ಕೆಲ ದಿನಗಳ ಹಿಂದೆ ಪೂನಂ ಪಾಂಡೆ ಬ್ರೈಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ್ದ ಆಕೆ "ನಿಮಗೆ ದೊಡ್ಡ ಸುದ್ದಿ ಕೊಡ್ತೀನಿ. ಎಲ್ಲರಿಗೂ ಶಾಕ್ ಆಗಲಿದೆ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡೋದು ಎಂದರೆ ನನಗೆ ಖುಷಿ." ಎಂದಿದ್ದರು. ಪೂನಂ ಹೇಳಿದ್ದ ಶಾಕಿಂಗ್ ನ್ಯೂಸ್ ಇದೇನಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದಾರೆ. ಈ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಘೋಷಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಪೂನಂ ಈ ನಾಟಕ ಆಡಿದ್ದರು ಎನ್ನುತ್ತಿದ್ದಾರೆ ನೆಟ್ಟಿಗರು. ಮರುದಿನ ಫೆಬ್ರವರಿ 2 ರಂದು ಪೂನಂ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿತ್ತು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ನಾಟಕ ಆಡಲಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅದೆಲ್ಲ ಏನೇ ಇದ್ದರೂ ಸಾವಿನ ವಿಚಾರದಲ್ಲಿ ಇಂತಹ ನಾಟಕ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಅಂದಹಾಗೆ ಪೂನಂ ಪಾಂಡೆ ಕನ್ನಡ ಚಿತ್ರವೊಂದರ ಹಾಡಿನಲ್ಲಿ ಕುಣಿದಿದ್ದರು. 'ಲವ್ ಈಸ್ ಪಾಯ್ಸನ್' ಎನ್ನುವ ಚಿತ್ರದಲ್ಲಿ ಮಾದಕವಾಗಿ ಹೆಜ್ಜೆ ಹಾಕಿದ್ದರು. ಆ ಸಮಯದಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಗೂ ಬಂದಿದ್ದರು.


Click it and Unblock the Notifications











