ಬಂಗಾಳದ ಉಪಮುಖ್ಯಮಂತ್ರಿಯಾಗ್ತಾರಾ 'ಮಹಾಭಾರತ'ದ ದ್ರೌಪದಿ?
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ.
ಇಷ್ಟೇ ಅಲ್ಲ ವಿಜಯ್ ಐತಿಹಾಸಿಕ ಸಾಧನೆ ಕೂಡ ಕಣ್ಮುಂದೆಯೇ ಇದೆ. ಹೀಗೆ ಹಲವಾರು ಜನ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ಧಾರೆ. ಗೆದ್ದಿದ್ದಾರೆ. ಬಿದ್ದಿದ್ದಾರೆ. ಆ ಪೈಕಿ ರೂಪಾ ಗಂಗೂಲಿ ಕೂಡ ಒಬ್ಬರು.

ಹೌದು, ರೂಪಾ ಗಂಗೂಲಿ.. ಬಿ.ಆರ್.ಚೋಪ್ರಾ ಅವರ ''ಮಹಾಭಾರತ''ದ ದ್ರೌಪದಿ. ''ಮಹಾಭಾರತ'' ಧಾರಾವಾಹಿಯ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ರೂಪಾ, ''ಏಕ್ ದಿನ್ ಅಚಾನಕ್''.. ''ಕಮಲಾ ಕಿ ಮೌತ್''.. ''ಇನ್ಸ್‌ಪೆಕ್ಟರ್ ಧನುಷ್''.. ''ಬರ್ಫಿ''.. ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಹಲವು ಬಂಗಾಳಿ ಸಿನಿಮಾಗಳನ್ನು ಕೂಡ ಮಾಡಿದ್ದಾರೆ.
ಇನ್ನೂ ರೂಪಾ ಗಂಗೂಲಿ ಕೇವಲ ನಟಿ ಮಾತ್ರ ಅಲ್ಲ ರಾಜಕಾರಣಿ ಕೂಡ ಹೌದು. 2015ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ ರೂಪಾ ಗಂಗೂಲಿ 2016ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಅಂದರೆ 2016ರಲ್ಲಿ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಹೌರಾ ಉತ್ತರ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ತೃಣಮೂಲ ಕಾಂಗ್ರೆಸ್‌ನ ಲಕ್ಷ್ಮಿ ರತನ್ ಶುಕ್ಲಾ ವಿರುದ್ಧ 26,000 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು.
ವಿಶೇಷ ಅಂದರೆ ಅದೇ ವರ್ಷ ನವಜೋತ್ ಸಿಂಗ್ ಸಿಧು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯಸಭಾ ಸಂಸದರಾಗಿ ರೂಪಾ ಗಂಗೂಲಿ ನಾಮ ನಿರ್ದೇಶನಗೊಂಡರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ಭದ್ರ ಮಾಡುವಲ್ಲಿ ಕಳೆದೊಂದು ದಶಕದಿಂದ ಮಹತ್ತರ ಪಾತ್ರವನ್ನು ನಿರ್ವಹಿಸಿದವರಲ್ಲಿ ರೂಪಾ ಗಂಗೂಲಿ ಕೂಡ ಒಬ್ಬರು.
ಇಂಥಾ ರೂಪಾ ಗಂಗೂಲಿ ಮೊನ್ನೆ ಮುಕ್ತಾಯವಾದ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಸೋನಾರ್ ಪುರ್ ದಕ್ಷಿಣ ಕ್ಷೇತ್ರದಿಂದ ಸ್ಫರ್ಧಿಸಿದ್ದ ರೂಪಾ ಗಂಗೂಲಿ 1,28,970 ಮತಗಳನ್ನು ಪಡೆಯುವ ಮೂಲಕ ತಮ್ಮ ಟಿಎಂಸಿ ಅಭ್ಯರ್ಥಿ ಅರುಂಧತಿ ಮೈತ್ರಾ ಅವರನ್ನು 35,782 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಪರಮಿತಾ ದಾಸ್ ಗುಪ್ತಾ 16,784 ಮತಗಳನ್ನು ಮಾತ್ರ ಪಡೆದರೆ ಕಾಂಗ್ರೆಸ್‌ನ ಸುಬ್ರತಾ ದತ್ತಾಗೆ ಸಿಕ್ಕಿದ್ದು ಕೇವಲ 1,368 ಮತ ಮಾತ್ರ.

ಹೀಗೆ ಈ ಬಾರಿ ಬಿಜೆಪಿಯ ಗೆಲುವಿನಲ್ಲಿ ತಮ್ಮ ಕೊಡುಗೆಯನ್ನು ಕೂಡ ನೀಡಿರುವ ರೂಪಾ ಗಂಗೂಲಿ ಈ ಬಾರಿಯ ಪಶ್ಚಿಮ ಬಂಗಾಳದ ಉಪಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ಉಪಮುಖ್ಯಮಂತ್ರಿ ಹುದ್ದೆಗೆ ರೂಪಾ ಗಂಗೂಲಿ ಅವರ ಹೆಸರೇ ಮುಂಚೂಣಿಯಲ್ಲಿದೆ ಎನ್ನುವ ಮಾತು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಬಂಗಾಳದಲ್ಲಿ ಬಿಜೆಪಿಯ ಇಮೇಜ್‌ನ ಇನ್ನೂ ಹೆಚ್ಚು ಬಲ ಪಡಿಸಲು ಮತ್ತೂ ರೂಪಾ ಗಂಗೂಲಿ ಬಂಗಾಳದಲ್ಲಿ ಈ ಹಿಂದೆ ಮಾಡಿದ ಕೆಲಸ ಹಾಗೂ ಹೋರಾಟವನ್ನು ಗಮನಿಸಿ ಉಪಮುಖ್ಯಮಂತ್ರಿ ಹುದ್ದೆಗೆ ರೂಪಾ ಗಂಗೂಲಿ ಸೂಕ್ತ ಎನ್ನುವ ಅಭಿಪ್ರಾಯ ಕೂಡ ಬಿಜೆಪಿಯಲ್ಲಿ ವ್ಯಕ್ತವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹಾಗೊಂದು ವೇಳೆ ಈ ಮಾತು ಮತ್ತು ಲೆಕ್ಕಾಚಾರ ನಿಜಾ ಆಗಿದ್ದೇ ಆದಲ್ಲಿ ಮಹಾಭಾರತದ ದ್ರೌಪದಿ ರೂಪಾ ಗಂಗೂಲಿ ಪಶ್ಚಿಮ ಬಂಗಾಳದವರ ಪಾಲಿಗೆ ಹೊಸ ದೀದಿಯಾಗಲಿದ್ದಾರೆ. ಉಪಮುಖ್ಯಮಂತ್ರಿಯ ಗದ್ದುಗೆ ಏರಲಿದ್ದಾರೆ. ಇದೇ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಮಮತಾ ಬ್ಯಾನರ್ಜಿ ಅವರಿಗೆ ಅವರದ್ದೇ ತವರು ಕ್ಷೇತ್ರ ಭಬಾನಿಪುರದಲ್ಲಿ ಮಣ್ಣು ಮುಕ್ಕಿಸಿದ ಸುವೇಂದು ಅಧಿಕಾರಿ ಈ ಬಾರಿ ಬಂಗಾಳದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ.


Click it and Unblock the Notifications