ಶಾರುಖ್ ಖಾನ್‌ಗೆ ಕಾಡುತ್ತಿದೆಯಾ ಸೋಲಿನ ಭಯ ? 'ಕಿಂಗ್' ಚಿತ್ರದ ನಿರ್ದೇಶಕ ಏಕಾಏಕಿ ಬದಲಾಗಿದ್ದೇಕೆ ?
ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಆರಕ್ಕೇರಿದವರು ಮೂರಕ್ಕಿಳಿಯಬಹುದು. ಮೂರಕ್ಕಿಳಿದವರು ಆರಕ್ಕೇರಬಹುದು.ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಶಾರುಖ್ ಖಾನ್ ಅತ್ಯುತ್ತಮ ಉದಾಹರಣೆ.
ಇಂಥಾ ಶಾರುಖ್ ಖಾನ್ ಕಳೆದ ವರ್ಷ ಮೈ ಕೊಡವಿ ಎದ್ದು ನಿಂತಿದ್ದರು. ಸತತ ಸೋಲುಗಳನ್ನು ಕಂಡು ಹೈರಾಣಾಗಿದ್ದ ಬಾಲಿವುಡ್‌ನ ಈ ಬಾದ್‌ಷಾ ಒಂದೇ ವರ್ಷದಲ್ಲಿ ಮೂರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದರು. ಆದರೆ.. ಶಾರುಖ್ ಖಾನ್‌ಗೆ ಈಗ ಇನ್ನೊಮ್ಮೆ ಸೋಲಿನ ಭಯ ಕಾಡುತ್ತಿದೆ. ಹೀಗೊಂದು ಚರ್ಚೆ ಈಗ ಬಾಲಿವುಡ್‌ನಲ್ಲಿ ಶುರುವಾಗಿದೆ. ಇದಕ್ಕೆ ಕಾರಣ ಶಾರುಖ್ ಖಾನ್ ತೆಗೆದುಕೊಂಡಿರುವ ಅದೊಂದು ನಿರ್ಧಾರ.

ಹೌದು, ಅಸಲಿಗೆ ಶಾರುಖ್ ಖಾನ್ ಕಿಂಗ್ ಎಂಬ ಚಿತ್ರದಲ್ಲಿ ಆಕ್ಟ್ ಮಾಡಲಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಮಗಳು ಸುಹಾನ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೇ ಮೊದಲ ಬಾರಿ ತಂದೆಯ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಅಭಿಷೇಕ್ ಬಚ್ಚನ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇಂತಹ ಕಿಂಗ್ ಚಿತ್ರವನ್ನು ಈ ಹಿಂದೆ ನಡೆದ ಮಾತುಕಥೆಯಂತೆ ಸುಜೋಯ್ ಘೋಷ್ ನಿರ್ದೇಶಿಸಬೇಕಿತ್ತು. ಆದರೆ ಈಗ ಏಕಾಏಕಿ ಸುಜೋಯ್ ಘೋಷ್ ಮನೆ ದಾರಿಯನ್ನು ಹಿಡಿದಿದ್ಧಾರೆ. ಸುಜೋಯ್ ಘೋಶ್ ಬದಲು ಸಿದ್ಧಾರ್ಥ್ ಆನಂದ್ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಈಗ ಹಲವಾರು ಪ್ರಶ್ನೆಗಳನ್ನು ಬಾಲಿವುಡ್‌ನಲ್ಲಿ ಹುಟ್ಟುಹಾಕಿದೆ. ಶಾರುಖ್ ಖಾನ್ ಅವರ ಇಮೇಜ್‌ನ ಸಂಭಾಳಿಸುವ ಸಾಮರ್ಥ್ಯ ಇರದ ಕಾರಣ ಸುಜೋಯ್ ಘೋಷ್ ಖುದ್ದು ಚಿತ್ರದಿಂದ ಹೊರ ನಡೆದರಾ ಅಥವಾ ಸೋಲಿನ ಭಯದಿಂದ ಖುದ್ದು ಶಾರುಖ್ ಖಾನ್ ಅವರೇ ಸುಜೋಯ್ ಘೋಷ್ ಅವರನ್ನು ಮನೆಗೆ ಕಳುಹಿಸಿದರಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.
ಯಾಕೆಂದರೆ ಹೃತಿಕ್ ರೋಶನ್ ಅಭಿನಯದ ಬ್ಯಾಂಗ್ ಬ್ಯಾಂಗ್ ಹೊರತುಪಡಿಸಿದರೆ ಸುಜೋಯ್ ಘೋಷ್ ಸಾಹಸ ಪ್ರಧಾನ ಚಿತ್ರಗಳನ್ನು ಮಾಡಿಲ್ಲ. ಬದಲಿಗೆ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಕಥೆಯಾಧಾರಿತ ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಶಾರುಖ್ ಖಾನ್ ಹಿಂದೆ ನಿರ್ಮಾಣ ಮಾಡಿದ್ದ 'ಬದ್ಲಾ' ಕೂಡ ಒಂದು. ಇನ್ನು ಕಿಂಗ್ ಆಕ್ಷನ್ ಚಿತ್ರ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಕಾರಣಕ್ಕೆ ಸುಜೋಯ್ ಅವರ ಸಾಮರ್ಥ್ಯದ ಮೇಲೆ ಶಾರುಖ್ ಖಾನ್ ಅವರಿಗೆ ನಂಬಿಕೆ ಇಲ್ಲ, ಹೀಗಾಗಿಯೇ ಅವರ ಬದಲು ತಮ್ಮ ಪಠಾಣ್ ಚಿತ್ರವನ್ನು ನಿರ್ದೇಶಿಸಿ ತಮ್ಮನ್ನು ಗೆಲ್ಲಿಸಿದ್ದ ಸಿದ್ಧಾರ್ಥ್ ಆನಂದ್ ಅವರಿಗೆ ಕಿಂಗ್ ಜವಾಬ್ಧಾರಿಗಳನ್ನು ಶಾರುಖ್ ಖಾನ್ ನೀಡಿದ್ದಾರೆ ಎಂಬ ಸುದ್ದಿ ಸದ್ಯ ಗುಲ್ಲಾಗಿದೆ.
ಇನ್ನುಳಿದಂತೆ 2025ರ ಮಾರ್ಚ್‌ನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇನ್ನು, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಬೆಳ್ಳಿಪರದೆಯ ಮೇಲೆ ನೋಡಿರದ ಸಾಹಸ ಸನ್ನಿವೇಶಗಳು ಕಿಂಗ್ ಚಿತ್ರದಲ್ಲಿರಲಿವೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಚಿತ್ರದ ಚಿತ್ರೀಕರಣ 07 ತಿಂಗಳು ನಡೆಯಲಿದ್ದು 2026ರ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಿಂಗ್ ಚಿತ್ರ ಶಾರುಖ್ ಖಾನ್ ವೃತ್ತಿ ಬದುಕಿನ ಬಹುದೊಡ್ಡ ಮೈಲಿಗಲ್ಲಾಗಲಿದೆ ಎನ್ನುವ ಭವಿಷ್ಯವಾಣಿ ಕೂಡ ಕೇಳಿ ಬರುತ್ತಿದೆ.


Click it and Unblock the Notifications











