ಜನರ ಪ್ರಾಣದ ಜೊತೆ ಶಾರುಖ್ ಖಾನ್ ಪತ್ನಿಯ ಚೆಲ್ಲಾಟ ? ಗೌರಿಯ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ಕಲಬೆರಕೆ ಪನೀರ್ ಪತ್ತೆ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಬರುವವರಿಗೆ ಬದುಕಲು ತಮ್ಮಲ್ಲಿನ ಕಲೆಯೊಂದೇ ಆಸರೆಯಾಗಿತ್ತು. ಅವರ ಅಭಿನಯ ಸಾಮರ್ಥ್ಯವೇ ಆ ಕಾಲಕ್ಕೆ ಅವರಿಗೆ ಶಕ್ತಿಯಾಗಿತ್ತು. ಇನ್ನೂ ... ಆ ಕಾಲದಲ್ಲಿ ಕಲೆಯನ್ನೇ ನಂಬಿಕೊಂಡವರಿಗೆ ಅವಕಾಶ ಸಿಕ್ಕರೆ ಸಾಕಿತ್ತು, ಹಣದ ಮುಖವನ್ನು ಕೂಡ ಅನೇಕರು ನೋಡುತ್ತಿರಲಿಲ್ಲ. ಚೌಕಾಸಿಯನ್ನೂ ಕೂಡ ಮಾಡುತ್ತಿರಲಿಲ್ಲ.
ಕಲೆಯನ್ನು ಹೊರತು ಪಡಿಸಿ ಬೇರೆ ಮೂಲದಿಂದ ಹಣ ಗಳಿಸುವ ಉದ್ದೇಶ ಕೂಡ ಆ ಕಾಲದಲ್ಲಿ ಬಹುತೇಕರಿಗೆ ಇರುತ್ತಿರಲಿಲ್ಲ. ಹೀಗಾಗಿಯೇ ಅನೇಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಕಣ್ಣೀರಿನಲ್ಲಿ ಇಲ್ಲಿ ಕೈತೊಳೆದಿದ್ದಾರೆ. ಒಂದೊಪ್ಪತ್ತಿನ ಅನ್ನಕ್ಕೂ ಒದ್ದಾಡಿ ಪ್ರಾಣ ತ್ಯಜಿಸಿದವರು ಇದ್ದಾರೆ. ಇನ್ನೂ ಕೆಲವರು ತಮ್ಮ ಪ್ರಭಾವಳಿಯನ್ನು ತಲೆಗೇರಿಸಿಕೊಂಡು, ಯಾವ ಯಾವುದೋ ಶೋಕಿಗೆ ಬಿದ್ದು ದುಡಿದ ಹಣವನ್ನೆಲ್ಲ ಕರಗಿಸಿಕೊಂಡಿದ್ದಾರೆ. ಆ ಕಡೆ ದುಡ್ಡು ಖಾಲಿಯಾದ ನಂತರ ಈ ಕಡೆ ಅವಕಾಶ ಸಿಗದ ಹಿನ್ನೆಲೆ ಒದ್ದಾಡಿದವರು ಇದ್ದಾರೆ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಲೆಯನ್ನು ನಂಬಿದವರು ಅದರ ಜೊತೆ ಪರ್ಯಾಯ ಮಾರ್ಗವನ್ನು ಅನೇಕರು ಕಂಡುಕೊಳ್ಳುತ್ತಿದ್ದಾರೆ. ಚಿತ್ರರಂಗದ ಜೊತೆ ಬೇರೆ ಬೇರೆ ಉದ್ಯಮಕ್ಕಿಳಿದು ವ್ಯಾಪಾರವನ್ನೂ ಮಾಡುತ್ತಿದ್ದಾರೆ. ಮತ್ತೂ ಕೆಲವರು ದೇಶದ ತುಂಬಾ ಹೋಟೆಲ್‌ಗಳನ್ನು ಹೊಂದಿದ್ದಾರೆ. ಉದಾಹರಣೆಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್.
ಹೌದು, ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್ ಅವರ ಮುದ್ದಿನ ಹೆಂಡತಿ ಗೌರಿ ಖಾನ್, ಮುಂಬೈನಲ್ಲಿ ಟೋರಿ ಹೆಸರಿನಲ್ಲಿ ರೆಸ್ಟೋರೆಂಟ್ ತೆರೆದಿದ್ದಾರೆ. 2024ರಲ್ಲಿ ಉದ್ಘಾಟನೆಯಾದ ಈ ಐಶಾರಾಮಿ ರೆಸ್ಟೊರೆಂಟ್‌ನ ಒಳಾಂಗಣ ವಿನ್ಯಾಸವನ್ನು ಕೂಡ ಖುದ್ದು ಗೌರಿ ಅವರೇ ಮಾಡಿದ್ದಾರೆ. 500 ರೂಪಾಯಿಯಿಂದ ಹಿಡಿದು 5000 ರೂಪಾಯಿಯವರೆಗೆ ಇಲ್ಲಿ ಊಟಕ್ಕೆ ದರವನ್ನು ನಿಗದಿ ಮಾಡಲಾಗಿದೆ.
ಮುಂಬೈನ ಖಾರ್ ವೆಸ್ಟ್‌ನ ಪಾಲಿ ಹಿಲ್ ರೋಡ್‌ನಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ 30 ML ಟಕೀಲಾ ಕುಡಿಯಬೇಕು ಅಂದರೆ ಜೇಬಿನಲ್ಲಿ 7500 ರೂಪಾಯಿ ಹಣ ಇರಬೇಕು. ಮೆನು ನೋಡಿದರೆ ಸಾಕು ತಲೆ ತಿರುಗಿ ಬೀಳಬೇಕು. ಆದರೂ ಇಂತಹ ಐಶಾರಾಮಿ ರೆಸ್ಟೊರೆಂಟ್‌ಗೆ ದಿನನಿತ್ಯ ಹಲವಾರು ಜನ ಹೋಗುತ್ತಾರೆ. ದುಡ್ಡನ್ನು ನೀರಿನಂತೆ ಖರ್ಚು ಮಾಡಿ ಬರುತ್ತಾರೆ.
ಆದರೆ ಈಗ ಗೌರಿ ಖಾನ್ ಅವರ ಈ ಟೋರಿಯಲ್ಲಿ ಸಿಗುವ ತಿಂಡಿ-ಊಟ ಎಷ್ಟು ಆರೋಗ್ಯಕಾರಿ ಎನ್ನುವ ಪ್ರಶ್ನೆ ಎದ್ದಿದೆ. ಗೌರಿ ಖಾನ್ ಅವರ ಹೋಟೆಲ್‌ನಲ್ಲಿ ಕಲಬೆರಕೆಯ ಆಹಾರ ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಡಲಾಗಿದೆ.
ಹೌದು, ಯೂಟ್ಯೂಬ್ ಪ್ರಪಂಚದಲ್ಲಿ ಹೆಸರು, ಹಣ ಗಳಿಸಿರುವ ಯೂಟ್ಯೂಬರ್ ಸಾರ್ಥಕ್ ಸಚ್‌ದೇವ ಮೊನ್ನೆ ಮೊನ್ನೆ ರಿಯಾಲಿಟಿ ಚೆಕ್ ಮಾಡಿದ್ದಾರೆ. ಸ್ಟಾರ್‌ಗಳ ಒಡೆತನದ ರೆಸ್ಟೋರೆಂಟ್‌ಗಳಿಗೆ ತೆರಳಿ ಅಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದಾರೆ. ಆ ಪೈಕಿ ಗೌರಿಯ ಟೋರಿ ಕೂಡ ಒಂದು.
ಟೋರಿಯ ಒಳಗೆ ಹೋದ ಸಾರ್ಥಕ್ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾದ ಪನೀರ್‌ನ ಆರ್ಡರ್ ಮಾಡಿದ್ದಾರೆ. ಆ ನಂತರ ಪನೀರ್ ತುಂಡಿನ ಮೇಲೆ ಅಯೋಡಿನ್ ಟಿಂಚರ್‌ನ ಹನಿಗಳನ್ನು ಹಾಕಿದ್ದಾರೆ. ಆಗ ಪನ್ನೀರ್ ತುಂಡಿನ ಬಣ್ಣ ಬದಲಾಗಿದೆ. ಪನೀರ್ ನೀಲಿ ಬಣ್ಣಕ್ಕೆ ತಿರುಗಿದೆ.
ಎಲ್ಲರಿಗೆ ಗೊತ್ತಿರುವಂತೆ ಶುದ್ಧವಾದ ಪನೀರ್ ಯಾವಾಗಲೂ ತಿಳಿ ಬಿಳಿ ಬಣ್ಣ ಹೊಂದಿರುತ್ತದೆ. ಆದರೆ ಗೌರಿ ಖಾನ್ ಅವರ ಟೋರಿಯಲ್ಲಿ ಪನೀರ್ ನೀಲಿ ಬಣ್ಣಕ್ಕೆ ತಿರುಗಿದೆ. ಹೀಗಾಗಿಯೇ ಬೆಚ್ಚಿ ಬಿದ್ದ ಸಾರ್ಥಕ್ ನಂಬಲು ಸಾಧ್ಯವಾಗುತ್ತಿಲ್ಲ ಗೌರಿ ಖಾನ್ ಅವರ ಹೋಟೆಲ್‌ನಲ್ಲಿ ಕಲಬೆರಕೆಯ ಪನೀರ್ ಬಳಸಲಾಗುತ್ತಿದೆ ಎಂದು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಗೌರಿ ಖಾನ್ ತಂಡಲೇ ಕೂಡಲೇ ಡ್ಯಾಮೇಜ್ ಆದ ಇಮೇಜ್ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಸಾರ್ಥಕ್ ಸಚದೇವ್ ಅವರ ವಿಡಿಯೋ ಕೆಳಗೆ ಸ್ಪಷ್ಟನೆಯನ್ನು ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೋರಿ ತಂಡ ಸೋಯಾ ಆಧಾರಿತ ಪದಾರ್ಥಗಳನ್ನು ಹೊಂದಿರುವುದರಿಂದ ಪನೀರ್ ಬಣ್ಣ ಬದಲಾಗಿದೆ, ಅಯೋಡಿನ್ ಪರೀಕ್ಷೆ ಪನೀರ್ ಅಸಲಿ-ನಕಲಿ ಎಂದು ತಿಳಿಯುವುದಿಲ್ಲ ಎಂಬ ವಾದವನ್ನು ಮಂಡಿಸಿದೆ. ನಮ್ಮ ಖಾದ್ಯದಲ್ಲಿ ಫೈಬರ್ ಆಧಾರಿತ ಪದಾರ್ಥಗಳಿವೆ. ನಮ್ಮ ಪನೀರ್‌ನ ಶುದ್ಧತೆ ಮತ್ತು ನಮ್ಮ ಎಲ್ಲಾ ಪದಾರ್ಥಗಳ ಗುಣಮಟ್ಟಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕೂಡ ಟೋರಿ ತಂಡ ಹೇಳಿದೆ.
ಈ ಕುರಿತು ಹಿಂದೂಸ್ತಾನ್ ಟೈಮ್ಸ್‌ಗೆ ಸಂದರ್ಶನವನ್ನು ನೀಡಿರುವ ನೋಯ್ಡಾದ ಯಥಾರ್ಥ್ ಆಸ್ಪತ್ರೆಯ ಪೌಷ್ಠಿಕಾಂಶ ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ ಕಿರಣ್ ಸೋನಿ ಕೂಡ ಗೌರಿ ಖಾನ್ ತಂಡ ಮಂಡಿಸಿದ ವಾದವನ್ನು ಒಪ್ಪಿದ್ದಾರೆ. ಅಯೋಡಿನ್ ಟಿಂಚರ್ ಪರೀಕ್ಷೆಯಿಂದ ಪಿಷ್ಟವನ್ನು ಪತ್ತೆ ಹಚ್ಚಬಹುದಾದರೂ ಪನೀರ್ ನಕಲಿ ಎಂದು ಹೇಳಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಸಾರ್ಥಕ್ ಸಚದೇವ ಕೇವಲ ಗೌರಿ ಖಾನ್ ಅವರ ರೆಸ್ಟೋರೆಂಟ್‌ಗೆ ಮಾತ್ರ ತೆರಳಿಲ್ಲ. ಪರೀಕ್ಷೆಯನ್ನು ಮಾಡಿಲ್ಲ. ಬದಲಿಗೆ ವಿರಾಟ್ ಕೊಹ್ಲಿ ಒಡೆತನದ ಒನ್ 8 ರೆಸ್ಟೋರೆಂಟ್‌ಗೆ ಕೂಡ ತೆರಳಿದ್ದಾರೆ. ಆ ನಂತರ ಶಿಲ್ಪಾ ಶೆಟ್ಟಿ ಮಾಲೀಕತ್ವದ ಬಾಸ್ಟಿಯನ್ ಗಾರ್ಡನ್ ಗೆ ಕೂಡ ಹೋಗಿದ್ದಾರೆ. ಬಾಬಿ ಡಿಯೋಲ್ ಅವರ ಸಮ್‌ಪ್ಲೇಸ್ ಎಲ್ಸ್ ಗೆ ಕೂಡ ತೆರಳಿದ್ದಾರೆ.
ಈ ಮೂರು ರೆಸ್ಟೋರೆಂಟ್‌ಗಳಲ್ಲಿ ಕೂಡ ಪನೀರ್‌ನ ಗುಣಮಟ್ಟದ ಪರೀಕ್ಷೆಯನ್ನು ಮಾಡಿದ್ದಾರೆ. ಆದರೆ ಈ ಮೂರು ಕಡೆ ಪನೀರ್‌ನ ಬಣ್ಣ ಬದಲಾಗಿಲ್ಲ. ಅಯೋಡಿನ್ ಟಿಂಚರ್ ನ ಹನಿಗಳನ್ನು ಹಾಕಿದರು ಕೂಡ ತಿಳಿ ಬಿಳಿ ಬಣ್ಣದಲ್ಲಿಯೇ ಪನೀರ್ ಇರುವುದು ಕಂಡು ಬಂದಿದೆ.
ಹೀಗಾಗಿಯೇ ಇದೀಗ ಗೌರಿ ಖಾನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗ ಸಮರ ಸಾರಿದೆ. ಕಲಬೆರಕೆ ಆಹಾರವನ್ನು ಪೂರೈಸುವ ಮೂಲಕ ಗೌರಿ ಖಾನ್ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶವನ್ನು ಅನೇಕರು ಹೊರ ಹಾಕುತ್ತಿದ್ದಾರೆ. ಬೇರೆ ಸೆಲೆಬ್ರಿಟಿಗಳು ಕೂಡ ಹೋಟೆಲ್‌ಗಳನ್ನು ಹೊಂದಿದ್ದಾರೆ ಆದರೆ ಎಲ್ಲಿಯೂ ಕೂಡ ಪನ್ನೀರ್‌ನಲ್ಲಿ ರಾಸಾಯನಿಕ ಕಂಡು ಬಂದಿಲ್ಲ ಎನ್ನುತ್ತಿರುವ ಅನೇಕರು ಕಲಬೆರಕೆಯ ಪನ್ನೀರ್ ಆರೋಗ್ಯಕ್ಕೆ ಹಾನಿಕರ ಎನ್ನುವ ವಿಚಾರ ಈಗಾಗಲೇ ಅಧ್ಯಯನದಲ್ಲಿ ಬಹಿರಂಗವಾಗಿದೆ, ಪನ್ನೀರ್ ಕೊಬ್ಬಿನ ಪ್ರಮಾಣ ಹೆಚ್ಚಿಸುವುದಲ್ಲದೆ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹಿಂದೆ ಅನೇಕರು ಹೇಳಿದ ಉದಾಹರಣೆ ಕೂಡ ಇವೆ ಆದರೂ ಕೂಡ ಗೌರಿ ಖಾನ್ ತಮ್ಮ ಟೋರಿಯಲ್ಲಿ ಕಲಬೆರಕೆ ಪನ್ನೀರ್‌ನ ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ಕಿಡಿಯನ್ನು ಕಾರುತ್ತಿದ್ದಾರೆ.
ಸದ್ಯ ಸಾರ್ಥಕ್ ಸಚ್‌ದೇವ್ ಅವರ ಈ ರಿಯಾಲಿಟಿ ಚೆಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚರ್ಚೆಗೆ ಕೂಡ ನಾಂದಿ ಹಾಡಿದೆ. ಗೌರಿ ಖಾನ್ ಅವರ ತಲೆ ನೋವಿಗೆ ಕೂಡ ಈ ವಿಡಿಯೋ ಸದ್ಯಕ್ಕೆ ಕಾರಣವಾಗಿದೆ. ಈಗಾಗಲೇ ಟೋರಿ ರೆಸ್ಟೋರೆಂಟ್ ತಂಡ ಈ ಕುರಿತು ಸ್ಪಷ್ಟನೆಯನ್ನು ನೀಡಿದೆಯಾದರೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೌರಿ ಖಾನ್ ಮಾತನಾಡುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











