14 ವರ್ಷದ ದಾಂಪತ್ಯಕ್ಕೆ ಗುಡ್‌ಬೈ ಹೇಳಿದ್ದೇಕೆ 'ಸೂರ್ಯವಂಶ'ದ 'ಪದ್ಮಾ' ? ವರ್ಷದ ನಂತರ ಕಾರಣ ಹೇಳಿದ ಇಶಾ ಕೊಪ್ಪಿಕರ್..!
ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು.
ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮವಾಗಿವೆ ಮತ್ತು ಅದನ್ನು ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಇರುವ ಇಶಾ ಕೊಪ್ಪಿಕರ್ ತಮ್ಮ ಹದಿನಾಲ್ಕು ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಡಲು ಕಾರಣ ಏನು ಅನ್ನುವುದನ್ನು ಈಗ ಹೇಳಿದ್ದಾರೆ.

ಹೌದು. ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಆ ನಂತರ ಸೂರ್ಯವಂಶ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದು, ಕರುನಾಡಿನೆಲ್ಲೆಡೆ 'ಪದ್ಮಾ' ಎಂದೇ ಫೇಮಸ್ ಆದ ಇಶಾ ಕೊಪ್ಪಿಕರ್ ತಮ್ಮ ವ್ಯೆಯಕ್ತಿನ ಬದುಕಿನ ಕುರಿತು ಕೆಲ ವಿಚಾರ ಹಂಚಿಕೊಂಡಿದ್ದಾರೆ. 14 ವರ್ಷ ಟಿಮ್ಮಿ ನಾರಂಗ್ ಜೊತೆ ಸಂಸಾರ ನಡೆಸಿ ದೂರವಾಗಿದ್ದೇಕೆ ಎಂದು ಕಾರಣ ಸಮೇತ ವಿವರಿಸಿದ್ದಾರೆ.
ಬಾಂಬೆ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಶಾ ಕೊಪ್ಪಿಕರ್ ನಮ್ಮ ನಡುವೆ ನಿಜಕ್ಕೂ ಸಮಸ್ಯೆ ಆಗಿದ್ದೇನು ಎಂದು ಹೇಳುವುದು ಕಷ್ಟ. ಯಾಕೆಂದರೆ ಮೊದಲು ದೂರವಾಗುವ ನಿರ್ಧಾರವನ್ನು ಅವರೇ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ. ಹೀಗೆ ಒಂದು ದಿನ ನನ್ನ ಬಳಿ ಬಂದ ಟಿಮ್ಮಿ ನಮ್ಮ ನಡುವೆ ಸರಿ ಹೋಗುತ್ತಿಲ್ಲ ಡಿವೋರ್ಸ್ ಪಡೆಯುವುದು ಉತ್ತಮವೆಂದು ಹೇಳಿದರು. ಅದಕ್ಕೆ ನಾನು ಆಯ್ತು ಸರಿ ಎಂದೆ ಎಂದು ಹೇಳಿರುವ ಇಶಾ ಕೊಪ್ಪಿಕರ್, ವಿಚ್ಛೇದನ ಪಡೆಯುವುದು ನನಗೆ ಸುಲಭವಾಗಿರಲಿಲ್ಲ ಯಾಕೆಂದರೆ ಅದು ನನ್ನ ಮೌಲ್ಯಕ್ಕೆ ವಿರುದ್ಧವಾಗಿತ್ತು. ಆದರೂ ಬೇರೆಯಾಗಬೇಕಾಯ್ತು. ಯಾಕೆಂದರೆ.. ನನಗೆ ಆಧ್ಯಾತ್ಮದತ್ತ ಒಲವು ಜಾಸ್ತಿ. ದಿನ ಜಗಳವಾಡುವುದರಲ್ಲಿ ಅರ್ಥ ಇಲ್ಲ ಎಂದು ನನಗೆ ಅನ್ಸಿತ್ತು ಹೀಗಾಗಿ ಆ ಸಂಬಂಧದಿಂದ ಹೊರ ಬಂದೆ ಎಂದು ಹೇಳಿದ್ದಾರೆ.
ಇನ್ನೂ ನಾವು ಇಬ್ಬರು ಬೇರೆಯಾಗುತ್ತಿರುವ ವಿಚಾರವನ್ನು ನಾನು ನನ್ನ ಮಗಳು ರಿಯಾನಗೆ ಸೂಕ್ಷ್ಮವಾಗಿ ಹೇಳಿ ಅರ್ಥ ಮಾಡಿಸಬೇಕೆಂದು ಅಂದುಕೊಂಡಿದ್ದೆ. ಆದರೆ ಆತ ತನ್ನ ಬೇಜವಾಬ್ಧಾರಿತನವನ್ನು ಪ್ರದರ್ಶಿಸಿದ. ಮಗಳಿಗೆ ಏಕಾಏಕಿ ನಾವು ದೂರವಾಗುತ್ತಿರುವ ವಿಚಾರವನ್ನು ಹೇಳಿದ ಇದರಿಂದ ಆಕೆ ಆಘಾತಕ್ಕೊಳಗಾದಳು ಎಂದಿರುವ ಇಶಾ ಆ ನಂತರ ತನ್ನ ತಪ್ಪಿನ ಅರಿವಾಗಿ ನನ್ನ ಮಾಜಿ ಗಂಡ ನನ್ನ ಬಳಿ ಬಂದು ಕ್ಷಮೆಯನ್ನು ಹೇಳಿದ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.
ಮುಂದುವರೆದು ಸದ್ಯ ಕೆಲಸದತ್ತ ಗಮನ ಕೊಡುತ್ತಿದ್ದೇನೆ, ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ ಎಂದಿರುವ ಇಶಾ, ಚಿತ್ರರಂಗದಿಂದ ನಾನು ಯಾವತ್ತು ದೂರವಾಗಿರಲಿಲ್ಲ. ಆದರೆ.. ಚಿತ್ರರಂಗ ನನ್ನನ್ನೂ ದೂರ ಮಾಡಿತ್ತು. ಯಾಕೆಂದರೆ ಮದುವೆಯಾದ ನಂತರ ಕೆಲಸದ ಅವಶ್ಯಕತೆ ಅವರಿಗೆ ಇರುವುದಿಲ್ಲ ಎನ್ನುವುದು ಚಿತ್ರರಂಗದ ಕಲ್ಪನೆ ಎಂದಿದ್ದಾರೆ. ಅದರಲ್ಲಿಯೂ ದೊಡ್ಡ ಇಂಡಸ್ಟ್ರಿಯಲಿಸ್ಟ್‌ನ ಮದುವೆಯಾದರೆ ಅವರಿಗ್ಯಾಕೆ ಕೆಲಸ ಬೇಕು ಎಂದು ಇಲ್ಲಿ ಅನೇಕರು ಆಲೋಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಸದ್ಯ ನಾನು ಕೆಲಸವನ್ನು ಹುಡುಕುತ್ತಾ ಅನೇಕರನ್ನು ಭೇಟಿಯಾಗುತ್ತಿದ್ದೇನೆ ಎಂದಿರುವ ಇಶಾ ಸದ್ಯಕ್ಕೆ ಚಿತ್ರರಂಗದಿಂದ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ, ಸದ್ಯದಲ್ಲಿಯೇ ಸಿಹಿ ಸುದ್ದಿಯನ್ನು ನೀಡುತ್ತೇನೆ ಎಂದು ಕೂಡ ಹೇಳಿದ್ದಾರೆ. ಅಂದ್ಹಾಗೇ ಇಶಾ ಕೊಪ್ಪಿಕರ್ ನವೆಂಬರ್ 2009ರಲ್ಲಿ ಟಿಮ್ಮಿ ನಾರಂಗ್ ಜೊತೆ ಮದುವೆಯಾಗಿದ್ದರು. ನವೆಂಬರ್ 2023ರಲ್ಲಿ ವಿಚ್ಛೇದನ ಪಡೆದರು.


Click it and Unblock the Notifications











