ರ್‍ಯಾಪರ್ ಬಾದ್‌ಶಾ ಜೊತೆ ಗುಟ್ಟಾಗಿ ಮದುವೆಯಾದ ವಿಚಾರ ಒಪ್ಪಿಕೊಂಡ ನಟಿ ; ಯಾರು ಈ ಇಶಾ ರಿಖಿ?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ.
ಆ ಪೈಕಿ ತಮ್ಮ ಕುರಿತು ಕೆಲ ಸುದ್ದಿಗಳನ್ನು ಕಂಡು.. ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ಮತ್ತೂ ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿರುವ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಉದಾಹರಣೆಗೆ ಇಶಾ ರಿಖಿ.

ಹೌದು, ಇಶಾ ರಿಖಿ.. ಪಂಜಾಬ್‌ನ ಚೆಲುವೆ. ಕಲೆಯನ್ನೇ ನಂಬಿಕೊಂಡ ಇಶಾ 2012ರಲ್ಲಿ ಬಂದ ''ಜಾಟ್ ಆಂಡ್ ಜೂಲಿಯೆಟ್'' ಚಿತ್ರದಲ್ಲಿ ಚಿಕ್ಕದಾದ ಪಾತ್ರವನ್ನು ನಿರ್ವಹಿಸಿದ್ದರು. ''ಜಾಟ್ ಬಾಯ್ಸ್ ಪುತ್ತ ಜಟ್ಟನ್ ದೆ'' ಇವರ ಮೊದಲ ಸಿನಿಮಾ. ''ಹ್ಯಾಪಿ ಗೋ ಲಕ್ಕಿ'' , ''ಅರ್ದಾಸ್'', ''ವಾಟ್ ದ ಜಟ್ಟ್'', ಇವರ ಅಭಿನಯದ ಕೆಲ ಪ್ರಮುಖ ಚಿತ್ರಗಳು.
2018ರಲ್ಲಿ ''ನವಾಬ್ ಜಾದೆ'' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಇಶಾ, ಸದ್ದಿಲ್ಲದೇ ಬಾಲಿವುಡ್‌ನ ಖ್ಯಾತ ರ್‍ಯಾಪರ್ ಬಾದ್‌ಶಾ ಜೊತೆ ಮದುವೆಯಾಗಿದ್ಧಾರೆ ಎನ್ನುವ ಅನುಮಾನ ಹಲವರಲ್ಲಿತ್ತು. ಇದಕ್ಕೆ ಪೂರಕವಾಗಿ ಇವರ ಮದುವೆಯ ಫೋಟೊಗಳು ವೈರಲ್ ಕೂಡ ಆಗಿದ್ದವು.
ವಿಶೇಷ ಅಂದರೆ ಇಶಾ ರಿಖಿ ಅವರ ತಾಯಿ ಪೂನಂ ರಿಖಿ ಈ ಗುಪ್ತ್ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದರು. ಆದರೂ ಕೂಡ ಈ ಮದುವೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇತ್ತು. ಈ ಪ್ರಶ್ನೆಗೆ ಈಗ ಖುದ್ದು ಇಶಾ ರಿಖಿ ಉತ್ತರ ನೀಡಿದ್ದಾರೆ.
ಹೌದು, ಅಸಲಿಗೆ ಇಶಾ ರಿಖಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಈ ಸಮಯದಲ್ಲಿ ಹಲವರು ಇವರಿಗೆ ಕೇಳಿದ್ದು ಬಾದ್‌ಷಾ ಕುರಿತ ಪ್ರಶ್ನೆಯೇ. ಆ ಪೈಕಿ ಒಬ್ಬರು ಮದುವೆಯಾಗಿದ್ದರು ಕೂಡ ನೀವ್ಯಾಕೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಇನ್ನು ಫಾಲೋ ಮಾಡುತ್ತಿಲ್ಲ ಎಂದು ನೇರವಾಗಿಯೇ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರ ನೀಡಿರುವ ಇಶಾ ರಿಖಿ ಈ ಪ್ರಶ್ನೆಗಳು ನನಗೆ ತುಂಬಾನೇ ಎದುರಾಗುತ್ತಿವೆ. ಹೌದು, ನನಗೆ ಮದುವೆಯಾಗಿದೆ. ಇನ್ನು ನೀವೆಲ್ಲರೂ ಕೇಳುತ್ತಿರುವ ಮುಖ್ಯ ಪ್ರಶ್ನೆಗೆ ಬರುವುದಾದರೆ, ಇದಕ್ಕೆ ನನ್ನ ಪತಿಯೇ ಸರಿಯಾದ ವಿವರಣೆ ನೀಡಬೇಕು. ಪತಿದೇವ್ (ಬಾದ್‌ಶಾ), ಜನರಿಗೆ ಸಾಕಷ್ಟು ಪ್ರಶ್ನೆಗಳಿವೆ, ದಯವಿಟ್ಟು ಆದಷ್ಟು ಬೇಗ ಇದಕ್ಕೆ ಉತ್ತರಿಸಿ ಎಂದು ಹೇಳಿದ್ಧಾರೆ. ಬಾದ್‌ಷಾ ಅವರನ್ನೇ ಟ್ಯಾಗ್ ಮಾಡಿದ್ಧಾರೆ.
ಇನ್ನು ಇದೇ ವೇಳೆ ಮತ್ತೊಬ್ಬರು ಮದುವೆಯಾದರೂ ಕೂಡ ನಿಮ್ಮ ಪತಿ ಬಾದ್‌ಶಾ ಜೊತೆ ಒಂದೇ ಒಂದು ಫೋಟೋ ಕೂಡ ಏಕೆ ಪೋಸ್ಟ್ ಮಾಡಿಲ್ಲ? ನೀವು ಅವರ ಪತ್ನಿಯಾಗಿದ್ದರೂ ಒಂದೇ ಒಂದು ಚಿತ್ರವೂ ಇಲ್ವಲ್ಲಾ? ಎಂದು ಪ್ರಶ್ನೆ ಮಾಡಿದ್ಧಾರೆ. ಇದಕ್ಕೂ ಕೂಡ ಉತ್ತರ ನೀಡಿರುವ ಇಶಾ ತಮ್ಮ ಪತಿ ಬಾದ್‌ಷಾ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ಧಾರೆ.
ಅಂದ್ಹಾಗೇ ಬಾದ್‌ಷಾ ಈ ಮೊದಲು ಅಂದರೆ 2012ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿದ್ದರು. ಜಾಸ್ಮಿನ್ ಮೂಲತಃ ಲಂಡನ್ ಮೂಲದವರಾಗಿದ್ದು ಫೇಸ್ ಬುಕ್ ಇವರ ಸ್ನೇಹಕ್ಕೆ ವೇದಿಕೆಯಾಗಿತ್ತು.
ಇವರಿಬ್ಬರ ಪ್ರೇಮದ ಸಂಕೇತವಾಗಿ ಇವರಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ. ಹೆಚ್ಚು ಕಡಿಮೆ 6-8 ವರ್ಷ ಜೊತೆಯಲ್ಲಿದ್ದ ಇಬ್ಬರ ನಡುವೆ ಆ ನಂತರ ಬಿರುಕು ಮೂಡಲು ಶುರುವಾಯ್ತು. 2020ರಲ್ಲಿ ಇಬ್ಬರು ಅಧಿಕೃತವಾಗಿ ಬೇರೆಯಾದರು. ವಿಚ್ಚೇದನ ಪಡೆದರು.
ತೀರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದ ದಾಂಪತ್ಯ ಜೀವನ ಮುರಿದು ಬಿತ್ತು ಎಂದು ಬಾದ್‌ಷಾ ಹೇಳಿದ್ದರು. ಹೀಗೆ ಮೊದಲ ಪತ್ನಿಯಿಂದ ದೂರವಾದ ಬಾದ್‌ಷಾ ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮದೇ ''ಟಟೀರಿ'' ಹಾಡು ವಿವಾದಕ್ಕೀಡಾಗಿ ಸದ್ದು ಮಾಡುತ್ತಿರುವ ಸಮಯದಲ್ಲಿ ಸದ್ದು ಗದ್ದಲ ಮಾಡದೇ ಅತ್ಯಾಪ್ತರ ಸಮ್ಮುಖದಲ್ಲಿ ಇಶಾ ಜೊತೆ ಬಾದ್‌ಷಾ ಸಪ್ತಪದಿ ತುಳಿದಿದ್ದರು, ಈ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು. ತಮ್ಮ ಈ ಮದುವೆಯ ವಿಚಾರವನ್ನು ಈಗ ಇಶಾ ಜಗಜ್ಜಾಹೀರು ಮಾಡಿದ್ಧಾರೆ.


Click it and Unblock the Notifications