ಮಗು ಕಳೆದುಕೊಂಡಷ್ಟೇ ನೋವಾಗುತ್ತೆ ; ಸೋಲು, ಹತಾಶೆ, ಖಿನ್ನತೆ - ಆಮಿರ್ ಖಾನ್ ದುಗುಡ, ದುಮ್ಮಾನ
ಬೆಳ್ಳಿತೆರೆಯಲ್ಲಿ ನಾವು ಕಣ್ತುಂಬಿಕೊಳ್ಳುವ ಒಂದು ಸಿನಿಮಾ ಆ ತಂಡದ ಪಾಲಿಗೆ ಮಗು ಇದ್ದಂತೆ. ಅದರ ಹುಟ್ಟು, ಬೆಳವಣಿಗೆ, ಬಿಡುಗಡೆ, ಎಲ್ಲವೂ ಹೆಚ್ಚು ಕಡಿಮೆ ಅದೇ ಪ್ರಕ್ರಿಯೆ. ಕಥೆಯ ರೂಪದಲ್ಲಿ ಗರ್ಭಕಟ್ಟಿ, ಹಂತ ಹಂತವಾಗಿ ವಿಕಸನಗೊಂಡು, ಹೊರಬಂದಿರುತ್ತದೆ. ಈ ಹಂತದಲ್ಲಿ ಹಲವು ಪ್ರತಿಭಾವಂತರು ತಮ್ಮ ತಮ್ಮ ಕೆಲಸ ಮಾಡಿರುತ್ತಾರೆ.ಹಗಲಿರುಳು ಎನ್ನದೇ ಬೆವರು ಸುರಿಸಿರುತ್ತಾರೆ. ಆದರೆ ಕೆಲ ಒಮ್ಮೆ ಇವರ ಈ ಪ್ರಯತ್ನಕ್ಕೆ ಬೆಲೆ ಸಿಗಲ್ಲ. ನಿರೀಕ್ಷೆಯನ್ನೇ ಮಾಡದ ಸೋಲು ಎದುರಾಗುತ್ತೆ. ಹೀಗೆ ಎದುರಾಗುವ ಈ ಸೋಲನ್ನು ಕೆಲವರು ತೀರಾ ಮನಸಿಗೆ ಹಚ್ಚಿಕೊಳ್ಳುತ್ತಾರೆ. ಉದಾಹರಣೆಗೆ ಆಮಿರ್ ಖಾನ್.
ಹೌದು, ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು.

ಇಂಥಾ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ಸದ್ಯ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ಧಾರೆ. ಒಂದೊಂದೆ ಮೆಟ್ಟಿಲನ್ನೇರುತ್ತಿದ್ದಾರೆ. ಆದರೆ ಇವರಿಗೆ ಆಮಿರ್ ಖಾನ್‌ಗೆ ಸಿಕ್ಕ ಜನ ಬೆಂಬಲ ಸಿಕ್ತಿಲ್ಲ. ಪ್ರತಿ ಬಾರಿಯೂ ಜುನೈದ್ ಎಡವುತ್ತಿದ್ದಾರೆ. ಇನ್ನೂ ಮಗನ ಸಿನಿಮಾ ಅಂದ ಮೇಲೆ ಆಮಿರ್ ಖಾನ್ ಸುಮ್ಮನೆ ಇರಲು ಹೇಗೆ ಸಾಧ್ಯ..? ಒಂದು ಕಡೆ ಮಗ ಎನ್ನುವ ಮಮತೆ. ಮತ್ತೊಂದು ಕಡೆ ನಿರ್ಮಾಪಕನ ಜವಾಬ್ಧಾರಿ.
ಈ ಹಿನ್ನೆಲೆ ಕಾಲಿಗೆ ಚಕ್ರ ಕಟ್ಕೊಂಡು ತಮ್ಮ ಮಗನ ಚಿತ್ರದ ಪ್ರತಿಯೊಂದು ವಿಚಾರದಲ್ಲಿ ಭಾಗಿ, ಆ ಚಿತ್ರದ ಪ್ರಚಾರವನ್ನು ಕೂಡ ಖುದ್ದು ಆಮಿರ್ ಖಾನ್ ಹಿಂದೆ ಮಾಡಿದ್ದಾರೆ. ಆದರೆ ಹೀಗೆ ಮಾಡಲಾದ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹುಣಸೆ ಹಣ್ಣು ತೊಳದಂತೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಪ್ಪತ್ತು ದಿನದ ಹಿಂದೆ ಬಿಡುಗಡೆಯಾದ ''ಏಕ್ ದಿನ್'' ಚಿತ್ರಕ್ಕೆ ಪ್ರೇಕ್ಷಕರು ಕ್ಯಾರೇ ಎನ್ನಲಿಲ್ಲ. ಆಮಿರ್ ಖಾನ್ ಮಗನ ಸಿನಿಮಾ ಎಂದು ನೋಡಲು ಕೂಡ ಹೋಗಲಿಲ್ಲ. ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ 5 ಕೋಟಿಯನ್ನು ಕೂಡ ಗಳಿಸಲಿಲ್ಲ ''ಏಕ್ ದಿನ್''. ಮಗನ ಚಿತ್ರಕ್ಕೆ ಸಿಕ್ಕ ಈ ಪ್ರತಿಕ್ರಿಯೆಯಿಂದ ಆಮಿರ್ ಖಾನ್ ತುಂಬಾನೇ ನಿರಾಸೆಗೊಂಡಿದ್ದಾರೆ. ಸೋಲಿನ ಆಘಾತದಿಂದ ಖಿನ್ನತೆಗೆ ಜಾರಿದ್ದಾಗಿಯೂ ಹೇಳಿದ್ಧಾರೆ.
ಈ ಕುರಿತು ''ಜೀ ಮ್ಯೂಸಿಕ್ ಕಂಪನಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಮಿರ್ ಖಾನ್, ನನ್ನ ಯಾವುದೇ ಸಿನಿಮಾ ಸೋತರು ಕೂಡ ನನಗೆ ಹೃದಯ ಒಡೆದಂತಾಗುತ್ತೆ ಎಂದು ಹೇಳಿದ್ದಾರೆ. ನಮ್ಮ ಪಾಲಿಗೆ ಚಿತ್ರ ಅನ್ನೋದು ನಮಗೆ ಮಗು ಇದ್ದಂತೆ, ಆ ಮಗುವನ್ನು ಪ್ರೇಕ್ಷಕರು ತಿರಸ್ಕರಿಸಿದರೆ ಅತಿಯಾದ ನೋವಾಗುತ್ತೆ ಎಂದು ಹೇಳಿರುವ ಆಮಿರ್ ಖಾನ್ ಈ ಸೋಲಿನ ದುಖ ಅನುಭವಿಸುವುದು ತುಂಬಾನೇ ಕಷ್ಟ ಎಂದು ಹೇಳಿದ್ದಾರೆ. ಮಗು ಕಳೆದುಕೊಂಡಾಗ ಆಗುವಷ್ಟೇ ನೋವು ನನಗೆ ಸಿನಿಮಾ ಸೋತಾಗ ಆಗುತ್ತೆ ಎಂದಿದ್ದಾರೆ.

ಸಿನಿಮಾ ಸೋತರೆ ಎರಡು-ಮೂರು ತಿಂಗಳು ನಾನು ಬೇಸರದಲ್ಲಿರುತ್ತೇನೆ, ಖಿನ್ನತೆಯ ಸ್ಥಿತಿಗೆ ಜಾರುತ್ತೇನೆ ಎಂದು ಹೇಳಿರುವ ಆಮಿರ್ ಖಾನ್, ಸಂಪೂರ್ಣವಾಗಿ ಅತ್ತು ನೋವನ್ನು ಹೊರ ಹಾಕಿದಾಗಲೇ ಮಾತ್ರ ನನಗೆ ಮುಂದಿನ ಕೆಲಸದತ್ತ ಗಮನ ಹರಿಸಲು ಸಾಧ್ಯವಾಗುತ್ತೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ''ವಿಕ್ಕಿ ಲಾಲ್ವಾನಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ''ಏಕ್ ದಿನ್'' ಚಿತ್ರದ ಸೋಲನ್ನು ಒಪ್ಪಿಕೊಂಡಿದ್ದ ಜುನೈದ್ ಖಾನ್, ನಾವು ಅಂದುಕೊಂಡಿದ್ದು ಒಂದು ಆಗಿದ್ದು ಮತ್ತೊಂದು ಎಂದು ಹೇಳಿದ್ದರು. ಈ ಸೋಲಿನಿಂದ ಚಿತ್ರಕ್ಕೆ ಹಣ ಹೂಡಿದ್ದ ತಮ್ಮ ತಂದೆ ಆಮಿರ್ ಖಾನ್ ತೀವ್ರವಾಗಿ ನೊಂದುಕೊಂಡಿದ್ದಾರೆ ಎಂದು ಕೂಡ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿದ್ದರು.
ಚಿತ್ರರಂಗದಲ್ಲಿ ಅವರಿಗೆ ಹಲವು ದಶಕಗಳ ಅನುಭವ ಇದೆ. ಆದರೂ ಕೂಡ ಚಿತ್ರ ಸೋತಾಗ ಸಹಜವಾಗಿ ಅವರಿಗೆ ನೋವಾಗುತ್ತೆ ಎಂದು ಹೇಳಿದ್ದ ಜುನೈದ್, ಸೋತರೂ ಕೂಡ ಅವರು ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ ಎಂದಿದ್ದರು.


Click it and Unblock the Notifications