ಇನ್ನೇರಡೇ ಸಿನಿಮಾ, 37ರ ಹರೆಯದಲ್ಲಿ ಚಿತ್ರರಂಗಕ್ಕೆ ಏಕಾಏಕಿ ವಿದಾಯ ಹೇಳಿದ ಸ್ಟಾರ್...!
ಒಮ್ಮೊಮ್ಮೆ ಯಶಸ್ಸು ಹೇಗೆ ಸ್ವೀಕರಿಸಬೇಕೆನ್ನುವುದೇ ಗೊತ್ತಾಗುವುದಿಲ್ಲ. ಜಾತಕದಲ್ಲಿ ರಾಜಯೋಗ ಇದ್ದರೂ ಕೂಡ ಇಂತಹದ್ದೊಂದು ಕರ್ಮಕ್ಕಾಗಿ ರಾಜಯೋಗ ಬರಬೇಕಿತ್ತಾ ಎಂದು ನಮಗೆ ಅನಿಸುವ ರೀತಿಯಲ್ಲಿ ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡಿರುತ್ತೆ. ಇದಕ್ಕೆ ಬಾಲಿವುಡ್ ಸ್ಟಾರ್ ವಿಕ್ರಾಂತ್ ಮೆಸ್ಸಿ ಬದುಕು ಸದ್ಯದ ಉದಾಹರಣೆ.
ಹೌದು, 12th ಫೇಲ್ ಚಿತ್ರದ ಮೂಲಕ ಜನ ಮನ ಗೆದ್ದವರು ವಿಕ್ರಾಂತ್ ಮೆಸ್ಸಿ. ಸದ್ಯಕ್ಕೆ ಭಾರತದೆಲ್ಲೆಡೆ ತನ್ನ ಹೆಸರಿನ ಬಾವುಟವನ್ನ ಹಾರಿಸಿರುವ ವಿಕ್ರಾಂತ್ ಮೆಸ್ಸಿ, ಏಕಾಏಕಿ ಸ್ಟಾರ್ ಆದವರಲ್ಲ. ಬೆಳ್ಳಿ ತೆರೆಯತ್ತ ಮುಖ ಮಾಡುವ ಮುನ್ನ, ಕಿರುತೆರೆಯಲ್ಲಿ ಬೆವರನ್ನ ಸುರಿಸಿದವರು ವಿಕ್ರಾಂತ್ ಮೆಸ್ಸಿ. ವೀರ್', 'ಬಾಲಿಕಾ ವಧು', 'ಕಬೂಲ್ ಹೇ', ಯೇ ಹೈ ಆಶಿಕಿ, ಹೀಗೆ ಒಂದಾದ ಮೇಲೊಂದು ಧಾರಾವಾಹಿಗಳಿಗೆ ಬಣ್ಣ ಹಚ್ತಾನೇ ಬದುಕು ಕಟ್ಟಿಕೊಂಡ ವಿಕ್ರಾಂತ್ ಮೆಸ್ಸಿ ಗೆ ಕಿರುತೆರೆ ತೊರೆಯದಂತೆ ಆಮಿಷ ಒಡ್ಡಲಾಗಿತ್ತು. ಕಿರುತೆರಯಲ್ಲಿಯೇ ತಿಂಗ್ಳಿಗೆ 35 ಲಕ್ಷ ದುಡಿಯುವ ಸುವರ್ಣ ಅವಕಾಶ ಕೂಡ ವಿಕ್ರಾಂತ್ ಮೆಸ್ಸಿಗೆ ಇತ್ತು.

ಆದರೆ, ಅದಾಗಲೇ ಬದುಕು ನಡೆಸಲು ಒಂದಷ್ಟು ಹಣವನ್ನ ಸಂಪಾದಿಸಿದ್ದ ವಿಕ್ರಾಂತ್ ಮೆಸ್ಸಿ, ಬಂದಿದ್ದ ಈ ಅವಕಾಶವನ್ನ ಎಡಗಾಲಿನಲ್ಲಿ ಒದ್ದರು. ಯಾಕೆಂದರೆ ವಿಕ್ರಾಂತ್ ಮೆಸ್ಸಿ ಕನಸು ದೊಡ್ಡದಿತ್ತು. ಬೆಳ್ಳಿ ತೆರೆ ಆಕರ್ಷಿಸುತ್ತಿತ್ತು. ಚಿತ್ರದ ನಾಯಕನಾಗಬೇಕೆಂದು ಮನಸು ಹಾತೊರೆಯುತ್ತಿತ್ತು.ಈ ಕಾರಣಕ್ಕೆ ಸೀರಿಯಲ್ ಪ್ರಪಂಚಕ್ಕೆ ಸೀರಿಯಸ್ಸಾಗಿ ಗುಡ್ ಬೈ ಹೇಳಿದ ವಿಕ್ರಾಂತ್ ಮೆಸ್ಸಿ, ಈಗ ಕನಸೆಂಬ ಕುದುರೆಯಿಂದ ಕೆಳಗಿಳಿಯುವ ಮನಸು ಮಾಡಿದ್ದಾರೆ. ಬೆಳ್ಳಿ ತೆರೆಗೆ ವಿದಾಯ ಘೋಷಿಸಿದ್ದಾರೆ.
ತಮ್ಮ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ವಿಕ್ರಾಂತ್ ಮೆಸ್ಸಿ ಇನ್ನೆರಡೇ ಚಿತ್ರ 2025ರಲ್ಲಿ ನಮ್ಮ ಕೊನೆಯ ಭೇಟಿಯಾಗಲಿದೆ ಎಂದಿದ್ದಾರೆ.ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು ಎಂದಿರುವ ವಿಕ್ರಾಂತ್, ನಿಮ್ಮ ಅಪಾರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಆದರೆ ನಾನು ಮುಂದುವರಿಯುತ್ತಾ ಹೋದಂತೆ ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡೆ. ಮುಂಬರುವ 2025 ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ಕೊನೆಯ ಎರಡು ಸಿನಿಮಾಗಳು ಅನೇಕ ನೆನಪುಗಳು.. ಮತ್ತೊಮ್ಮೆ ಧನ್ಯವಾದಗಳು, ನಾನು ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ ಎಂದಿದ್ದಾರೆ. ಈ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದಾರೆ. ಆಘಾತವನ್ನು ನೀಡಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ವಿಕ್ರಾಂತ್ ಮೆಸ್ಸಿ ಅಭಿನಯದ 2002ರ ಗೋಧ್ರಾ ಘಟನೆಯನ್ನು ಆಧರಿಸಿದ ದಿ ಸಾಬರಮತಿ ರಿಪೋರ್ಟ್ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರದ ಬಿಡುಗಡೆಯ ಸಮಯದಲ್ಲಿ ಬೆದರಿಕೆ ಕರೆಗಳು ವಿಕ್ರಾಂತ್ ಮೆಸ್ಸಿಗೆ ಬಂದಿದ್ದವು. ಈ ಕುರಿತು ಆಗ ಮಾತನಾಡಿದ್ದ ವಿಕ್ರಾಂತ್ ನಿರಂತರವಾಗಿ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ನನ್ನ 09 ತಿಂಗಳ ಮಗುವನ್ನು ಬಿಡುತ್ತಿಲ್ಲ ಮಗುವನ್ನು ಕೂಡ ಕೊಲೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ನಾವು ಕಲಾವಿದರು ನಮಗೆ ಕಥೆ ಹೇಳುವುದಕ್ಕೆ ಮಾತ್ರ ಬರುತ್ತೆ ಆ ಕೆಲಸವನ್ನಷ್ಟೇ ನಾವು ಮಾಡುತ್ತಿದ್ದೇವೆ ಎಂದಿದ್ದರು.
ಆದರೆ ಈಗ ಚಿತ್ರರಂಗದಿಂದ ವಿಕ್ರಾಂತ್ ಮೆಸ್ಸಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇಷ್ಟದ ಕೆಲಸ ಬಿಡಲು ಮುಂದಾಗಿದ್ದಾರೆ. ಹೀಗಾಗಿ ದಿ ಸಾಬರಮತಿ ರಿಪೋರ್ಟ್ ಚಿತ್ರದ ಸುತ್ತ ಮುತ್ತ ಎದ್ದ ವಿವಾದ, ಬಂದ ಬೆದರಿಕೆಗಳಿಂದ ಬೇಸತ್ತು ವಿಕ್ರಾಂತ್ ಮೆಸ್ಸಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ, ಬದಲಿಸಿ ಎಂದು ಕೂಡ ಅನೇಕರು ಆಗ್ರಹಿಸುತ್ತಿದ್ದಾರೆ. ವಿಕ್ರಾಂತ್ ಮೆಸ್ಸಿ ಮನಸು ಬದಲಾಯಿಸುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











