ನನಗೆ ಈ ನಾಯಕಿ ಬೇಕು ಎನ್ನುತ್ತಾರೆ ಬಾಲಿವುಡ್ ಸ್ಟಾರ್ಸ್, ಹಿಂದಿ ಚಿತ್ರರಂಗದ ಮತ್ತೊಂದು ಕಹಿ ಸತ್ಯ ಹೇಳಿದ ತಾಪ್ಸಿ ..!
ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು.
ಇಂಥಾ ತಾಪ್ಸಿ ಪನ್ನು ಸದ್ಯ ಬಾಲಿವುಡ್‌ನಲ್ಲಿನ ಭೇದ-ಭಾವದ ಕುರಿತು ಮಾತನಾಡಿದ್ದಾರೆ. ಸಂಭಾವನೆ ಮತ್ತು ನಾಯಕರ ದೃಷ್ಟಿಕೋನದ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತ್ಯಾಪ್ಸಿ ಪನ್ನು ದೊಡ್ಡ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡ ಮಾತ್ರಕ್ಕೆ ಸಂಭಾವನೆ ಕೂಡ ಹೆಚ್ಚೇ ಸಿಕ್ಕಿರುತ್ತೆ ಎಂದುಕೊಂಡಿದ್ದಾರೆ.

ಈ ಕುರಿತು ನನ್ನ ಬಳಿ ಅನೇಕರು ಪ್ರಶ್ನೆಯನ್ನು ಮಾಡುತ್ತಾರೆ. ಆದರೆ ವಾಸ್ತವದಲ್ಲಿ ನಮ್ಮಂತಹ ನಾಯಕಿಯರಿಗೆ ಸ್ಟಾರ್ ಗಳ ಚಿತ್ರದಲ್ಲಿ ತುಂಬಾ ಕಡಿಮೆ ಸಂಭಾವನೆ ಸಿಕ್ಕಿರುತ್ತೆ ಎಂದು ಹೇಳಿದ್ದಾರೆ. ಈ ಮೂಲಕ ಶಾರುಖ್ ಖಾನ್ ಅಭಿನಯದ ಡಂಕಿ ಮತ್ತು ವರುಣ್ ಧವನ್ ಅಭಿನಯದ ಜುಡ್ವಾ 2 ಚಿತ್ರಕ್ಕೆ ತಮಗೆ ಸಿಕ್ಕಿದ್ದು ಅತ್ಯಲ್ಪ ಹಣ ಮಾತ್ರ ಎನ್ನುವುದನ್ನು ತಾಪ್ಸಿ ಪನ್ನು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಹೀರೋ ಮತ್ತು ಹೀರೋಯಿನ್ ವಿಚಾರದಲ್ಲಿ ಇನ್ನೂ ತಾರತಮ್ಯ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಇನ್ನೂ.. ಸ್ಟಾರ್‌ಗಳಿರುವ ಚಿತ್ರಕ್ಕೆ ಬಹುತೇಕ ಬಾರಿ ನಿರ್ದೇಶಕರು ನಮ್ಮನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಆ ಚಿತ್ರದ ಸ್ಟಾರ್ ಹೀರೋ ತನಗೆ ಯಾವ ಹೀರೋಯಿನ್ ಬೇಕೆಂದು ನಿರ್ಧಾರ ಮಾಡುತ್ತಾರೆ, ಅವರೇ ತಮ್ಮ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿರುವ ತಾಪ್ಸಿ ಸದ್ಯ ಪ್ರಚಲಿತದಲ್ಲಿರುವ ನಾಯಕಿಯನ್ನು ಅಥವಾ ಎಲ್ಲರನ್ನೂ ಆಕರ್ಷಿಸುವ ಗುಣವನ್ನೊಂದಿರುವ ನಾಯಕಿಯನ್ನು ತಮ್ಮ ಚಿತ್ರಕ್ಕೆ ಸ್ಟಾರ್‌ಗಳು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅವರಿಗಿಂತ ಚೆನ್ನಾಗಿ ಅಭಿನಯಿಸುವ ನಾಯಕಿಯರನ್ನು ಅವರು ಸದಾ ಕಾಲ ದೂರವೇ ಇಡುತ್ತಾರೆ ಎಂದು ಹೇಳಿದ್ದಾರೆ. ಪ್ರೇಕ್ಷಕರಿಗೆ ಕೂಡ ಈ ವಿಚಾರ ಈಗೀಗ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.
ಅಪ್ಪಿ ತಪ್ಪಿ ನಮ್ಮನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು ನಮಗೆ ದೊಡ್ಡ ಸಹಾಯ ಮಾಡಿದವರಂತೆ ನಮ್ಮೆದುರು ಆ ಸ್ಟಾರ್‌ಗಳು ವರ್ತನೆ ಮಾಡುತ್ತಾರೆ ಎಂದು ತಮ್ಮ ಬೇಸರವನ್ನು ಹೊರ ಹಾಕಿರುವ ತಾಪ್ಸಿ ಪನ್ನು, ಅಲ್ಲೊಮ್ಮೆ ಇಲ್ಲೊಮ್ಮೆ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ನಿರ್ದೇಶಕರು ನಾಯಕರ ಮಾತನ್ನು ಕೇಳದೇ ಅವರ ಮಾತು ಮತ್ತು ಬೇಡಿಕೆಗಳಿಗೆ ಮಣೆ ಹಾಕದೇ ನಿಜಕ್ಕೂ ಆ ಪಾತ್ರಕ್ಕೆ ಸೂಕ್ತವಾದ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇನ್ನೂ ದೊಡ್ಡ ಚಿತ್ರಗಳಿಗೆ ಹೋಲಿಸಿದರೆ ಸಣ್ಣ ಸಣ್ಣ ಚಿತ್ರಗಳಿಗೆ ನನಗೆ ಸಂಭಾವನೆ ಚೆನ್ನಾಗಿ ಸಿಗುತ್ತೆ ಎಂದಿರುವ ತಾಪ್ಸಿ ಪನ್ನು ತಮ್ಮ ಹಸೀನ್ ದಿಲ್‌ರುಬಾ ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ನಾನು ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದಾಗ ಕೇಳಿದಷ್ಟು ಸಂಭಾವನೆಯನ್ನು ನನಗೆ ನಿರ್ಮಾಪಕರು ನೀಡುತ್ತಾರೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಬಾಲಿವುಡ್‌ನಲ್ಲಿ ಮೊದಲಿಂದ ಮಹಿಳಾ ಪ್ರಧಾನ ಚಿತ್ರಗಳನ್ನೇ ಹೆಚ್ಚೆಚ್ಚು ಮಾಡುತ್ತಿರುವ ತಾಪ್ಸಿ ಪನ್ನು ಈಗ ಹಸೀನ್ ದಿಲ್‌ರುಬಾ, ಫಿರ್ ಆಯಿ ಹಸೀನ್ ದಿಲ್‌ರುಬಾ ಸೇರಿ ಅನೇಕ ಕಥೆಗಳಿಗೆ ಕಥೆ ಬರೆದ ಲೇಖಕಿ ಕನ್ನಿಕಾ ದಿಲ್ಲೋನ್ ಜೊತೆ ಸೇರಿ ನಿರ್ಮಾಪಕಿಯಾಗಿದ್ದಾರೆ. ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಪೈಕಿ ಈ ಜೋಡಿಯ ಗಾಂಧಾರಿ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ತಾಪ್ಸಿ ನೀಡಿದ ಈ ಹೊಸ ಹೇಳಿಕೆಯ ಕುರಿತು ಸದ್ಯ ಬಾಲಿವುಡ್‌ನಲ್ಲಿ ಚರ್ಚೆ ಕೂಡ ಶುರುವಾಗಿದೆ.


Click it and Unblock the Notifications











