ವಿಕ್ರಾಂತ್ ರೋಣ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ನಿಧನ.
ಶ್ರೀಲಂಕಾದಿಂದ 2009ರ ಆಸು-ಪಾಸಿನಲ್ಲಿ ಬಾಲಿವುಡ್ಡಿಗೆ ವಲಸೆ ಬಂದವರು ಜಾಕ್ವೆಲಿನ್ ಫರ್ನಾಂಡೀಸ್. ಅದ್ಭುತ ನಟನೆಯ ಜತೆಗೆ ತನ್ನ ಅಂದ ಚೆಂದದಿಂದ ಪಡ್ಡೆಗಳ ಹೃದಯವನ್ನು ಕದ್ದಿರುವ ಜಾಕ್ವೆಲಿನ್ ಫರ್ನಾಂಡೀಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಇಂದು ನಿಧನರಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕಿಮ್ ಫರ್ನಾಂಡಿಸ್ ಕೊನೆಯುಸಿರೆಳೆದಿದ್ದು ಅವರ ನಿಧನದ ಸುದ್ದಿಯನ್ನು ಅವರ ಆಪ್ತ ವಲಯ ಖಚಿತ ಪಡಿಸಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಪ್ರಕಾರ ಮಾರ್ಚ್ 24ರಂದು ಜಾಕ್ವೆಲಿನ್ ಅವರ ತಾಯಿ ಕಿಮ್ ಪಾರ್ಶ್ವವಾಯುಗೆ ತುತ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಇಂದು ಕಿಮ್ ಫರ್ನಾಂಡಿಸ್ ಇಹಲೋಕ ತ್ಯಜಿಸಿದ್ದಾರೆ.

ಇನ್ನು ತಮ್ಮ ತಾಯಿ ಆಸ್ಪತ್ರೆಗೆ ದಾಖಲಾದ ದಿನದಿಂದ ಜಾಕ್ವೆಲಿನ್ ತಮ್ಮ ಕೆಲಸಗಳಿಂದ ಬ್ರೇಕ್ ಪಡೆದಿದ್ದರು. ಆಸ್ಪತ್ರೆಯಲ್ಲಿ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ತಾಯಿ ಎಲ್ರಾಯ್ ಫರ್ನಾಂಡಿಸ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪತ್ನಯ ಆರೈಕೆಯನ್ನು ಮಾಡುತ್ತಿದ್ದರು.
ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಜಾಕ್ವೆಲಿನ್ ತಾಯಿ ಅನಾರೋಗ್ಯದ ಹಿನ್ನೆಲೆ ಮಾರ್ಚ್ 26ರಂದು ಐಪಿಎಲ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಅವತ್ತು ಗುವಾಹಾಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಜಾಕ್ವೆಲಿನ್ ನೃತ್ಯ ಪ್ರದರ್ಶನ ನೀಡಬೇಕಿತ್ತು. ಆದರೆ ತಾಯಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಜಾಕ್ವೆಲಿನ್ ಕೊನೆಯ ಕ್ಷಣದಲ್ಲಿ ಈ ಕಾರ್ಯಕ್ರಮವನ್ನು ರದ್ದು ಮಾಡಿದ್ದರು.
ಇನ್ನು ತಮ್ಮ ತಾಯಿ ಕಿಮ್ ಅವರ ಬಗ್ಗೆ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಜಾಕ್ವೆಲಿನ್, ನನ್ನ ತಾಯಿಯೇ ನನ್ನ ಬಹುದೊಡ್ಡ ಶಕ್ತಿ ಎಂದು ಹೇಳಿದ್ದರು. ಅವರು ಯಾವಾಗಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ, ನಾನು ನನ್ನ ಹೆತ್ತವರಿಲ್ಲದೆ ಇಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದೇನೆ, ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿದ್ದರು. ನನ್ನದೇ ಬದುಕು ರೂಪಿಸಿಕೊಳ್ಳಲು ನನಗೆ ಅವಕಾಶವನ್ನು ನೀಡಿದ ನನ್ನ ತಂದೆ ಮತ್ತು ನನ್ನ ತಾಯಿಗೆ ನಾನು ಯಾವತ್ತು ಚಿರಋಣಿ ಎಂದು ಹೇಳಿದ್ದ ಜಾಕ್ವೆಲಿನ್ ನನ್ನ ನಿರ್ಧಾರಗಳು ಕೆಲವೊಮ್ಮೆ ತಪ್ಪಾದಾಗ ಕೂಡ ನನ್ನ ತಂದೆ ತಾಯಿ ನನಗೆ ಬೆಂಬಲ ನೀಡಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಎಂದು ಜಾಕ್ವೆಲಿನ್ ಹೇಳಿದ್ದರು.
ಈ ಹಿಂದೆ ಜಾಕ್ವೆಲಿನ್ ಅವರ ತಾಯಿ ಕಿಮ್ ಫರ್ನಾಂಡಿಸ್ ಬಹ್ರೇನ್‌ನ ಮನಾಮದಲ್ಲಿ ವಾಸ ಮಾಡುತ್ತಿದ್ದರು. 2022ರಲ್ಲಿ ಕೂಡ ಇದೇ ರೀತಿ ಆರೋಗ್ಯ ಸಮಸ್ಯೆಯಾದಾಗ ಜಾಕ್ವೆಲಿನ್ ತಮ್ಮ ಜೊತೆ ತಾಯಿಯನ್ನು ಕರೆದುಕೊಂಡು ಬಂದಿದ್ದರು. ಪತಿ ಎಲ್ರಾಯ್ ಫರ್ನಾಂಡಿಸ್, ಹಿರಿಯ ಮಗಳು ಜೆರಾಲ್ಡೈನ್ ವಾಕರ್, ಪುತ್ರರಾದ ವಾರೆನ್ ಫರ್ನಾಂಡಿಸ್ ಮತ್ತು ರಯಾನ್ ಫರ್ನಾಂಡಿಸ್ ಮತ್ತು ಕಿರಿಯ ಮಗಳು ಜಾಕ್ವೆಲಿನ್ ಅವರನ್ನು ಕಿಮ್ ಅಗಲಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿಯ ಸಾವಿಗೆ ಬಾಲಿವುಡ್‌ನ ಅನೇಕ ನಟ ನಟಿಯರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಅಭಿಮಾನಿಗಳು ಕೂಡ ಜಾಕ್ವೆಲಿನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಕಿಮ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ಧಾರೆ. ಕಿಮ್ ಫರ್ನಾಂಡಿಸ್ ಅವರ ಅಂತ್ಯಕ್ರಿಯೆಯ ಕುರಿತು ಮಾಹಿತಿ ಇನ್ನಷ್ಟೇ ಸಿಗಬೇಕಿದೆ.


Click it and Unblock the Notifications











