ನನ್ನ ತಾಯಿ ಶ್ರೀದೇವಿ ಮಾರ್ಗದರ್ಶನ ಇತ್ತು ; ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಮೌನ ಮುರಿದ ಜಾಹ್ನವಿ ಕಪೂರ್
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ. ಆದರೆ, ಎಲ್ಲರೂ ಕೂಡ ಈ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ.
ಬದಲಿಗೆ ತಮ್ಮದು ಸಹಜ ಸೌಂದರ್ಯ ಎಂದು ವಾದ ಮಾಡುತ್ತಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂದು ಯಾರಾದರೂ ಪ್ರಶ್ನೆ ಕೇಳಿದರೆ ಕೆರಳಿ ಕೆಂಡವಾಗುತ್ತಾರೆ. ಎಲ್ಲೋ ಅಲ್ಲೊಬ್ಬರು .. ಇಲ್ಲೊಬ್ಬರು .. ಮಾತ್ರ ಸತ್ಯ ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ ಜಾಹ್ನವಿ ಕಪೂರ್.

ಹೌದು, ಜಾಹ್ನವಿ ಕಪೂರ್.. ಅತಿಲೋಕ ಸುಂದರಿ ಶ್ರೀದೇವಿ ಅವರ ಮುದ್ದಿನ ಮಗಳು. ತಮ್ಮ ತಂದೆ ತಾಯಿಯ ನೆರಳಿನಾಚೆ ತಮ್ಮದೇ ಅಸ್ತಿತ್ವದ ಹುಡುಕಾಟದಲ್ಲಿರುವ ಜಾಹ್ನವಿ ಚಿತ್ರರಂಗಕ್ಕೆ ಬಂದು 7 ವರ್ಷಗಳಾಗಿವೆ.
ಆದರೆ ಈ 7 ವರ್ಷದಲ್ಲಿ ಇವರ ಯಾವ ಚಿತ್ರ ಕೂಡ ಹೇಳಿಕೊಳ್ಳುವ ಗೆಲ್ಲುವನ್ನು ಕಂಡಿಲ್ಲ. ಹಾಗಂಥ ಅವಕಾಶಗಳು ಕಡಿಮೆಯಾಗಿವೆ ಅಂತೇನು ಇಲ್ಲ. ಕರಣ್ ಜೋಹರ್ ಕೃಪೆಯಿಂದ ಇವರಿಗೆ ಹಲವು ಚಿತ್ರಗಳು ಸಿಗುತ್ತಲೇ ಇವೆ.
ಇಂಥಾ ಜಾಹ್ನವಿ ಕಪೂರ್ ರೈನೋಪ್ಲಾಸ್ಟಿ (ಮೂಗಿನ ಆಕಾರ ಬದಲಿಸುವುದು) ಸೇರಿ ಇನ್ನೂ ಕೆಲ ಸರ್ಜರಿಗೆ ಒಳಗಾಗಿದ್ದಾರೆ ಎನ್ನುವ ಅನುಮಾನ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಕಳೆದ ಕೆಲ ವರ್ಷಗಳಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಜಾಹ್ನವಿ ಕಪೂರ್ ತಮ್ಮ ತುಟಿಗಳನ್ನು ದಪ್ಪಗಾಗಿಸಲು ಲಿಪ್ ಫಿಲ್ಲರ್ ಶಸ್ತ್ರ ಚಿಕಿತ್ಸೆಯ ಮೊರೆ ಕೂಡಾ ಹೋಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಲೇ ಇರುತ್ತೆ.
ಇದೀಗ ಇದೇ ಅನುಮಾನವನ್ನು ಜಾಹ್ನವಿ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಅವರ ಸಮ್ಮುಖದಲ್ಲಿ ಕುಳಿತುಕೊಂಡು ಸತ್ಯ ಒಪ್ಪಿಕೊಂಡಿದ್ದಾರೆ.

ಈ ಕುರಿತು ''ಟೂ ಮಚ್ ವಿಥ್ ಕಾಜೋಲ್ & ಟ್ವಿಂಕಲ್'' ಕಾರ್ಯಕ್ರಮದಲ್ಲಿ ಮಾತನಾಡಿರುವ ಜಾಹ್ನವಿ ನನಗೆ ಮುಚ್ಚು ಮರೆ ಮಾಡಲು ಇಷ್ಟ ಇಲ್ಲ. ನಾನು ವಿಚಾರಗಳನ್ನು ಗುಟ್ಟಾಗಿ ಇಡುವುದೂ ಇಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಈಗೀಗ ಎಲ್ಲರನ್ನು ನಿರ್ಣಯಿಸುತ್ತೆ ಎಂದಿರುವ ಜಾಹ್ನವಿ ಕಪೂರ್ ಎಲ್ಲರೂ ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದಾಗ ನಾನು ಕೂಡ ಬಹುಬೇಗ ಪ್ರಭಾವಿತಳಾದೆ ಎಂದು ಹೇಳಿದ್ದಾರೆ.
ಮುಂದುವರೆದು ನಾನು ತೆಗೆದುಕೊಂಡ ನಿರ್ಧಾರದ ಹಿಂದೆ ಸಹಜವಾಗಿ ನನ್ನ ತಾಯಿ ಶ್ರೀದೇವಿಯ ಮಾರ್ಗದರ್ಶನ ಕೂಡ ಇತ್ತು ಎಂದು ಹೇಳಿರುವ ಜಾಹ್ನವಿ ನಾನು ತುಂಬಾ ಬುದ್ದಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಂಡೆ ಎಂದು ಹೇಳಿದ್ದಾರೆ. ಯುವತಿಯರು ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ನಾನು ಪ್ರೋತ್ಸಾಹ ನೀಡುತ್ತಿಲ್ಲ ಆ ಉದ್ದೇಶ ತಮಗೆ ಇಲ್ಲ ಎಂದು ಹೇಳಿದ್ಧಾರೆ.
ನೀವು ನೀವು ಆಗಿಯೇ ಇರಿ ಎಂಬ ಮಾತುಗಳಲ್ಲಿ ನಂಬಿಕೆ ಇಡುವಳು ನಾನು. ನೀವೇನೆ ಮಾಡಿದರೂ ಅದು ಮನಸಿಂದ ಮಾಡಿ ಎಂದು ಬುದ್ದಿ ಮಾತನ್ನು ಹೇಳಿರುವ ಜಾಹ್ನವಿ ಕಪೂರ್ ಇದೇ ವೇಳೆ ಬಫಲೋ-ಪ್ಲಾಸ್ಟಿ ಸರ್ಜರಿಯ ಕುರಿತು ತಮ್ಮ ವಿರುದ್ಧ ಕೇಳಿ ಬಂದ ಮಾತುಗಳ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಬಫಲೋ ಪಾಸ್ಟಿ ಸರ್ಜರಿಯ ವಿಚಾರವನ್ನು ತಳ್ಳಿ ಹಾಕಿರುವ ಜಾಹ್ನವಿ ಒಂದು ವೇಳೆ ಯಾರಾದರೂ ಯುವತಿ ವಿಡಿಯೋಗಳನ್ನು ನೋಡಿ ಬಫಲೋ ಪ್ಲಾಸ್ಟಿ ಸರ್ಜರಿ ಮಾಡಿಸಲು ಮುಂದಾದಾಗ ಅಲ್ಲೇನಾದರೂ ತಪ್ಪು ನಡೆದರೆ ಅದು ಜೀವಮಾನ ಇಡೀ ಕೊರಗುವಂತೆ ಮಾಡುತ್ತೆ. ಪಾರದರ್ಶಕತೆ ಮುಖ್ಯ ಎಂದು ಹೇಳಿದ್ದಾರೆ.
ಹೀಗೆ ಬಫಲೋ ಪ್ಲಾಸ್ಟಿ ಸರ್ಜರಿಯ ವಿಚಾರವನ್ನು ಅಲ್ಲಗೆಳೆದಿರುವ ಜಾಹ್ನವಿ ಇಡೀ ಸಂದರ್ಶನದಲ್ಲಿ ನೀವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಇಲ್ಲವಾ ಎನ್ನುವ ಪ್ರಶ್ನೆಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದ್ದಾರೆ. ತಾಯಿ ಶ್ರೀದೇವಿಯ ಮಾರ್ಗದರ್ಶನ ಇತ್ತು ಎಂದಿದ್ದಾರೆ. ಹೀಗಾಗಿ ಜಾಹ್ನವಿ ಅವರ ಈ ಸಂದರ್ಶನ ನೋಡಿದ ಹಲವರು ಜಾಹ್ನವಿ ಬಫಲೋ ಪ್ಲಾಸ್ಟಿ ಸರ್ಜರಿಗೆ ಒಳಗಾಗದೇ ಇದ್ದರೂ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದು ಸತ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ.


Click it and Unblock the Notifications











