ಜಾಹ್ನವಿಗೆ ಪ್ರಿಯಕರನ ಒಲವಿನ ಉಡುಗೊರೆ ; ನೆಕ್ಲೇಸ್ ಮೂಲಕ ಜಗಜ್ಜಾಹೀರಾದ ಪ್ರೇಮ..!
ಬಣ್ಣದ ಪ್ರಪಂಚದಲ್ಲಿ ಪ್ರೀತಿ-ಪ್ರೇಮ-ಪ್ರಣಯ ಹೊಸದಲ್ಲ. ವಿರಹ-ವೇದನೆ-ಕಣ್ಣೀರು ಹೊಸದಲ್ಲ. ಇಲ್ಲಿ ದಿನಕ್ಕೊಂದು ಸಂಬಂಧ ಹುಟ್ಟುಕೊಳ್ತಾವೆ. ದಿನಕ್ಕೊಂದು ಸಂಬಂಧ ಸಾಯ್ತಾವೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ಅಪವಾದ ಎಂಬಂತೆ ಇರುತ್ತಾರೆ. ಎಷ್ಟೇ ಎತ್ತರಕ್ಕೆ ಏರಿದರೂ ವರ್ಷಾನುವರ್ಷಗಳಿಂದ ಪ್ರೀತಿಯನ್ನ ಹೃದಯದಲ್ಲಿ ಕಾಪಿಟ್ಟುಕೊಂಡು ಬದುಕುತ್ತಾರೆ. ಉದಾಹರಣೆಗೆ ಜಾಹ್ನವಿ ಕಪೂರ್.
ಹೌದು, ಶ್ರೀದೇವಿಯ ಹಿರಿ ಮಗಳು ಜಾಹ್ನವಿ ಕಪೂರ್ ಪ್ರೀತಿಯ ಅಮಲನ್ನ ನೆತ್ತಿಗೇರಿಸಿಕೊಂಡಿದ್ದಾರೆ ಅನ್ನುವ ಅನುಮಾನ ಅನೇಕ ದಿನಗಳಿಂದ, ಅನೇಕರಲ್ಲಿತ್ತು. ಶಿಖರ್ ಜೊತೆ ಲವ್ ಎವರೆಸ್ಟ್ ಏರಿದ್ದಾರೆ ಎಂದು ಬಾಲಿವುಡ್ಡಿಗೆ ಬಾಲಿವುಡ್ಡೇ ಮಾತನಾಡಿಕೊಂಡಿತ್ತು. ಇನ್ನೂ.. ಜಾಹ್ನವಿ ಹೋದಲ್ಲಿ..ಬಂದಲ್ಲಿ.. ನೆರಳಿನಂತೆ ಹಿಂಬಾಲಿಸುತ್ತಿದ್ದವರು ಇದೇ ಶಿಖರ್. ಅದು ತಿರುಪತಿ ತಿಮ್ಮಪ್ಪನ ಸನ್ನಿಧಿ ಇರಲಿ.. ಅಂಬಾನಿ ಮಗನ ಮದುವೆ ಮುನ್ನ ನಡೆದ ಕಾರ್ಯಕ್ರಮಗಳಿರಲಿ.. ಜಾಹ್ನವಿ ಎಲ್ಲೋ.. ಶಿಖರ್ ಅಲ್ಲಿ ಇದ್ದೇ ಇರುತ್ತಿದ್ದರು.

ಆದರೆ.. ಇಷ್ಟೆಲ್ಲ ಆದರೂ ಕೂಡ ಜಾಹ್ನವಿ ಅಪ್ಪಿ-ತಪ್ಪಿಯೂ ಸಾರ್ವಜನಿಕವಾಗಿ ತಮ್ಮ ಪ್ರೇಮದ ಪುಸ್ತಕ ತೆರೆದು ಓದಿರಲಿಲ್ಲ. ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಜಾಹ್ನವಿ ಕಪೂರ್ -ಶಿಖರ್ ಜೊತೆ ತಮ್ಮ ಪವಿತ್ರ ಸಂಬಂಧವನ್ನ ಅಧಿಕೃತಗೊಳಿಸಿದ್ದಾರೆ. ಒಲವಿನ ಉಡುಗೊರೆಯನ್ನ ಧರಿಸಿ, ಯಾವುದೇ ಸಂಕೋಚ ಇಲ್ಲದೇ.. ಹಿಂಜರಿಕೆ ಇಲ್ಲದೇ.. ಕ್ಯಾಮರಾ ಕಣ್ಣಿಗೆ ಫೋಸ್ ಕೊಟ್ಟಿದ್ದಾರೆ.
ಹೌದು, ನಿನ್ನೆ ಮೈದಾನ್ ಚಿತ್ರದ ಪ್ರಿಮಿಯರ್ ನಲ್ಲಿ ಜಾಹ್ನವಿ ಭಾಗಿಯಾಗಿದ್ದರು. ಇದೇ ವೇಳೆ ಕ್ಯಾಮರಾದವರ ಮುಂದೆ ಹಾಜರಿಯನ್ನೂ ಹಾಕಿದರು. ಆದರೆ ಈ ಸಮಯದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ಜಾಹ್ನವಿ ಕೊರಳಿನಲ್ಲಿದ್ದ ನೆಕ್ಲೇಸ್. ಯಾಕೆಂದರೆ ಆ ನೆಕ್ಲೇಸ್ ನಲ್ಲಿ ಶಿಖು ಹೆಸರಿನ ಪೆಂಡೆಂಟ್ ಇತ್ತು. ನಿಮಗೆ ಗೊತ್ತಿರಲಿ.. ಜಾಹ್ನವಿಯ ಬಾಲ್ಯದ ಗೆಳೆಯನಾಗಿರುವ ಶಿಖರ್ ಪಹರಿಯಾ ಅವರನ್ನ ಜಾಹ್ನವಿ ಪ್ರೀತಿಯಿಂದ ಕರೆಯುವುದು ಶಿಖು ಎಂದೇ. ಇದಕ್ಕೆ ಸಾಕ್ಷಿ ಅನ್ನುವಂತೆ ಹಿಂದೊಮ್ಮೆ ಕರಣ್ ಜೋಹರ್ ನಡೆಸಿ ಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಪ್ಪ, ತಂಗಿ ಖುಷಿ ಮತ್ತು ಶಿಖುಗೆ ಸ್ಪೀಡ್ ಡಯಲ್‌ನಲ್ಲಿ ಕರೆ ಮಾಡ್ತೀನಿ ಎಂದು ಜಾಹ್ನವಿ ಹೇಳಿದ್ದರು.
ಜಾಹ್ನವಿ ಹೇಳಿದ್ದ ಇದೇ ಮಾತು ನಿನ್ನೆ ಜಾಹ್ನವಿಯ ಫೋಟೋ ಕ್ಲಿಕಿಸುವಾಗ ಅನೇಕರಿಗೆ ನೆನಪಾಗಿದೆ. ಫೋಟೋ ನೋಡಿದವರ ತಲೆಯಲ್ಲಿಯೂ ಕಾಫಿ ವಿತ್ ಕರಣ್ ಕಾರ್ಯಕ್ರಮದ ಎಪಿಸೋಡ್ ಮರು ಪ್ರಸಾರವಾಗಿದೆ. ಹೀಗಾಗಿಯೇ.. ಮೈದಾನ್ ಚಿತ್ರವನ್ನ ಮರೆತ ಅನೇಕರು, ಸಾಮಾಜಿಕ ಜಾಲತಾಣದಲ್ಲಿ ಈಗ ಜಾಹ್ನವಿ ಕಪೂರ್ ಹಾಗೂ ಶಿಖರ್ ಪ್ರೇಮ ಕಥೆಯನ್ನ ಸವಿಸ್ತಾರವಾಗಿ ಓದುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಹೊಸ ಬದುಕಿಗೆ ಕಾಲಿಡಲಿರುವ ಜೋಡಿಗೆ ಈಗಿಂದನೇ ಶುಭಾಶಯವನ್ನೂ ಕೋರುತ್ತಿದ್ದಾರೆ

ಒಟ್ನಲ್ಲಿ ಅನೇಕರ ತಲೆಯಲ್ಲಿದ್ದ ಅನುಮಾನವೊಂದನ್ನ ಜಾಹ್ನವಿ ಕಪೂರ್ ನಿನ್ನೆ ದೂರ ಮಾಡಿದ್ದಾರೆ. ಶಿಖರ್ ಜೊತೆ ತಮ್ಮ ಸಂಬಂಧವನ್ನ ನೆಕ್ಲೇಸ್ ಮೂಲಕ ಅಧಿಕೃತಗೊಳಿಸಿದ್ದಾರೆ. ಇನ್ನೇನ್ ಇದ್ದರೂ ಇಬ್ಬರ ಮದುವೆಗೆ ಬಾಲಿವುಡ್ ಸಜ್ಜಾಗಬೇಕು. ನೋ ಡೌಟ್.. ಇನ್ಮುಂದೆ ಜಾಹ್ನವಿ ಹೋದಲ್ಲಿ.. ಬಂದಲ್ಲಿ.. ಎಲ್ಲರ ಗಮನ ಅವರ ಕುತ್ತಿಗೆಯ ಮೇಲೆ ಇರಲಿದೆ.


Click it and Unblock the Notifications











