ಹೊಸ ಐಶಾರಾಮಿ ಮನೆ ಖರೀದಿಸಿದ ಜಾನ್ಹವಿ ಕಪೂರ್: ಬೆಲೆ ಅಷ್ಟಿಷ್ಟಲ್ಲ
ದಿವಂಗತ ನಟಿ ಶ್ರೀದೇವಿಯ ಪುತ್ರಿ ಜಾನ್ಹವಿ ಕಪೂರ್ ತನ್ನ ವಾರಗೆಯ ಇತರ ಬಾಲಿವುಡ್ ನಟಿಯರಿಗಿಂತಲೂ ತುಸು ಭಿನ್ನ ಎಂಬುದನ್ನು ತಮ್ಮ ಸಿನಿಮಾ ಆಯ್ಕೆಯ ಮೂಲಕ ಸಾರುತ್ತಲೇ ಬಂದಿದ್ದಾರೆ.
ಬಾಲಿವುಡ್‌ನ ಯುವನಟಿಯರು, ಬಬ್ಲಿ ಗರ್ಲ್ ಪಾತ್ರ, ಸೆಕ್ಸಿ ಕ್ವೀನ್ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಜಾನ್ಹವಿ ಕಪೂರ್ ಮಾತ್ರ, 'ಗುಂಜನ್ ಸಕ್ಸೆನಾ', 'ಗುಡ್ ಲಕ್ ಜೆರ್ರಿ', 'ಮಿಲ್ಲಿ' ರೀತಿಯ ಮಹಿಳಾ ಪ್ರಧಾನ, ಡೀ ಗ್ಲಾಮರೈಸ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಸದಾ ಭಿನ್ನವಾದ ಪಾತ್ರಗಳನ್ನೇ ಅರಸಿ ಆಯ್ಕೆ ಮಾಡಿಕೊಳ್ಳುತ್ತಿರುವ ಜಾನ್ಹವಿ ಕಪೂರ್ ಇದೀಗ ಮಹಿಳಾ ಕ್ರಿಕೆಟರ್ ಒಬ್ಬರ ಜೀವನ ಕತೆ ಆಧರಿತ ಸಿನಿಮಾದಲ್ಲಿ ಬ್ಯಾಟ್ ಬೀಸಲಿದ್ದಾರೆ. ಎಲ್ಲರೂ ಹಿಡಿಯದ ದಾರಿ ಹಿಡಿದರೂ ಸಹ ಜಾನ್ಹವಿಯ ಬೇಡಿಕೆ ಕುಸಿದಿಲ್ಲ. ಬಾಲಿವುಡ್‌ನ ಹೆಚ್ಚು ಬೇಡಿಕೆಯ ಯುವನಟಿಯರಲ್ಲೊಬ್ಬರು ಜಾನ್ಹವಿ. ಬೇಡಿಕೆಯ ನಟಿ ಮಾತ್ರವಲ್ಲ, ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲೊಬ್ಬರೂ ಆಗಿರುವ ಇದೀಗ ಜಾನ್ಹವಿ ಐಶಾರಾಮಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ.

ದುಬಾರಿ ಮನೆ ಖರೀದಿಸಿದ ಜಾನ್ಹವಿ ಕಪೂರ್
ಕಪೂರ್ ಖಾಂದಾನದ ಕುಡಿ ಜಾನ್ಹವಿ ಕಪೂರ್, ದೇಶದಲ್ಲಿಯೇ ರಿಯಲ್ ಎಸ್ಟೇಟ್ ದರಗಳು ಅತಿ ಎತ್ತದಲ್ಲಿರುವ ಮುಂಬೈನ ಬಾಂದ್ರಾ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಡ್ಯೂಪ್ಲೆಕ್ಸ್ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಈ ಎರಡು ಅಂತಸ್ಥಿನ ಮನೆ ಖರೀದಿಗೆ ಜಾನ್ಹವಿ ತೆತ್ತಿರುವ ಬೆಲೆ ಬರೋಬ್ಬರಿ 65 ಕೋಟಿ ರುಪಾಯಿ! ಕಳೆದೆರಡು ವರ್ಷದಲ್ಲಿ ಜಾನ್ಹವಿ ಕಪೂರ್ ಖರೀದಿಸುತ್ತಿರುವ ಮೂರನೇ ದುಬಾರಿ ಮನೆ ಇದು!

2020 ರಲ್ಲಿ ಮನೆಯೊಂದನ್ನು ಖರೀದಿಸಿದ್ದರು
ರಿಯಲ್ ಎಸ್ಟೇಟ್ ಮೇಲೆ ಸತತವಾಗಿ ಬಂಡವಾಳ ಹೂಡುತ್ತಿರುವ ಜಾನ್ಹವಿ ಕಪೂರ್ 2020 ರ ಡಿಸೆಂಬರ್‌ನಲ್ಲಿ ಮುಂಬೈನ ಮತ್ತೊಂದು ದುಬಾರಿ ಏರಿಯಾ ಜುಹುವಿನಲ್ಲಿ 39 ಕೋಟಿ ನೀಡಿ ಮೂರಂತಸ್ತಿನ ಮನೆ ಖರೀದಿಸಿದ್ದರು. ಆ ನಂತರ ಆ ಮನೆಯನ್ನು ಬಾಲಿವುಡ್ ನಟ ರಾಜ್‌ಕುಮಾರ್ ರಾವ್‌ಗೆ 44 ಕೋಟಿ ರುಪಾಯಿಗೆ ಮಾರಾಟ ಮಾಡಿದರು.

8669 ಚದರ ಅಡಿ ವಿಸ್ತೀರ್ಣ
ಈಗ ಖರೀದಿ ಮಾಡಿರುವ ಡ್ಯೂಪ್ಲೆಕ್ಸ್ ಮನೆ ಬಾಂದ್ರಾದ ಪಾಲಿ ಹಿಲ್, ಯೂನಿಯನ್ ಪಾರ್ಕ್ ರಸ್ತೆಯಲ್ಲಿದೆ. ಈ ಮನೆ ಈ ಹಿಂದೆ ಕಿಂಟೂ ಬಜಾಜ್ ಎಂಬುವರ ಹೆಸರಿನಲ್ಲಿತ್ತು. ಒಟ್ಟು 8669 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಯ ಒಳಾಂಗಣವೇ 6421 ಚದರ ಅಡಿ ಇದೆ. ಈ ಬಂಗ್ಲೆಗೆ ಪ್ರತ್ಯೇಕ ಗಾರ್ಡನ್, ಈಜುಕೊಳ ಸಹ ಹಾಗೂ ಒಟ್ಟಿಗೆ ಐದು ಕಾರು ನಿಲ್ಲಿಸಬಹುದಾದಷ್ಟು ಸ್ಥಳಾವಕಾಶವುಳ್ಳ ದೊಡ್ಡ ಪಾರ್ಕಿಂಗ್ ಸ್ಥಳವಿದೆ. ಈ ಮನೆಯ ಖರೀದಿಯನ್ನು ಜಾನ್ಹವಿ ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಮಾಡಿದ್ದಾರೆ.

ಸೆಲೆಬ್ರಿಟಿಗಳಿಂದ ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡುತ್ತಿದ್ದಾರೆ
ಇತ್ತೀಚೆಗೆ ಸಾಕಷ್ಟು ಮಂದಿ ಬಾಲಿವುಡ್ ತಾರೆಯರು ನಾ ಮುಂದು-ತಾ ಮುಂದು ಎಂಬಂತೆ ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ದಕ್ಷಿಣ ಭಾರತದ ಕೆಲವು ನಟರೂ ಸಹ ಮುಂಬೈನಲ್ಲಿ ಮನೆಗಳನ್ನು ಖರೀದಿಸುತ್ತಿದ್ದಾರೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ರೇಣು ಚೋಪ್ರಾ, ನವಾಜುದ್ದೀನ್ ಸಿದ್ಧಿಕಿ, ಆಲಿಯಾ ಭಟ್, ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ಇನ್ನೂ ಹಲವರು ಇತ್ತೀಚೆಗೆ ಮುಂಬೈನಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ತೆಲುಗಿನ ರಾಮ್ ಚರಣ್ ತೇಜ ಸಹ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದಾರೆ.


Click it and Unblock the Notifications











