ಸಂತಸದ ವೇಳೆಯಲ್ಲೂ ಅಮ್ಮನಿಲ್ಲದ ನೋವನ್ನ ತೋಡಿಕೊಂಡ ಜಾಹ್ನವಿ
ಗೋವಾದಲ್ಲಿ ನಡೆಯುತ್ತಿರುವ 2018ನೇ ಸಾಲಿನ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತು ಆಕೆಯ ತಂದೆ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಒಟ್ಟಿಗೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಟಿ ಜಾಹ್ನವಿ ಕಪೂರ್ ತಮ್ಮ ತಾಯಿ ಶ್ರೀದೇವಿ ಬಗ್ಗೆ ಸ್ವತಃ ತಾವೇ ಬರೆದಿದ್ದ ಪದ್ಯವನ್ನ ಓದಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಶ್ರೀದೇವಿ ಪುತ್ರಿ ಬರೆದಿದ್ದ ಸಾಲುಗಳು ನೆರದಿದ್ದವರನ್ನ ಒಂದು ಕ್ಷಣ ಕಣ್ಣೀರು ಹಾಕುವಂತೆ ಮಾಡಿತು.
2018ನೇ ವರ್ಷ ನನಗೆ ಕಹಿ ಮತ್ತು ಸಿಹಿಯನ್ನ ಒಳಗೊಂಡಿದೆ. ಈ ವರ್ಷ ನನಗೆ ಕೆಲವು ಖುಷಿಯ ನೆನಪು ಮತ್ತು ಬೇಸರದ ನೆನಪುಗಳನ್ನ ನೀಡಿದೆ ಎಂದು ಜಾಹ್ನವಿ ಭಾವುಕರಾದರು. ಕಳೆದ ಏಪ್ರಿಲ್ ನಲ್ಲಿ ಶ್ರೀದೇವಿ ನಿಧನರಾಗಿದ್ದು ಮತ್ತು ಧಡಕ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಬಂದಿದ್ದ ವಿಚಾರವಾಗಿ ಜಾಹ್ನವಿ ಹೇಳಿಕೊಂಡರು. ಅಮ್ಮನ ಬಗ್ಗೆ ಜಾಹ್ನವಿ ಹೇಳಿದ ಮಾತುಗಳೇನು.? ಮುಂದೆ ಓದಿ...

ಅಮ್ಮನ ಸಾವು ಇನ್ನು ಕಾಡುತ್ತಿದೆ
'ತಾಯಿಯನ್ನ ಕಳೆದುಕೊಂಡಿದ್ದು ಎಂದು ಮರೆಯಲಾಗದ ನೋವು. ಈ ನೋವಿನಿಂದ ನಮ್ಮ ಕುಟುಂಬ ಎಂದು ಹೊರಬರಲು ಸಾಧ್ಯವಿಲ್ಲ. ಈ ವರ್ಷ ಅನೇಕ ಕೆಟ್ಟ ಘಟನೆಗಳು ನಡೆಯಿತು. ಆದ್ರೆ, ನಮ್ಮ ಫ್ಯಾಮಿಲಿ ಒಂದಾಗಿದ್ದು ತುಂಬಾ ಸಂತೋಷ ನೀಡಿದೆ' ಎಂದು ಹೇಳಿಕೊಂಡರು.

ಅಮ್ಮನ ಸಾವಿನಿಂದ ಹೊರಬಂದಿಲ್ಲ
'ಅಮ್ಮ ನಿಧನರಾದ ಘಟನೆಯಿಂದ ನಾವು ಇನ್ನು ಹೊರಬಂದಿಲ್ಲ. ಆ ಸಮಯದಲ್ಲಿ ನಮ್ಮೊಂದಿಗೆ ನೀವು ಇದ್ದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಎಲ್ಲ ಬೆಂಬಲದಿಂದಲೇ ನಾನು ನೋವಿನಲ್ಲಿದ್ದರೂ ಕೆಲಸ ಮಾಡಲು ಸಾಧ್ಯವಾಯಿತು. ನನ್ನ ತಂದೆ-ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ನಮ್ಮ ಮುಂದಿನ ಗುರಿ' ಎಂದು ಜಾಹ್ನವಿ ಹೇಳಿದರು.

ಮಹಿಳಾ ಪ್ರಧಾನ ಸಿನಿಮಾ ಎನ್ನುವುದು ಬೇಡ
'ಇತ್ತೀಚಿನ ದಿನಗಳಲ್ಲಿ ನಟಿಯರು ಮುಖ್ಯ ಭೂಮಿಕೆಯಲ್ಲಿ ನಟಿಸುವ ಚಿತ್ರಗಳು ಬಂದ್ರೆ, ಅದನ್ನ ಮಹಿಳಾ ಪ್ರಧಾನ ಸಿನಿಮಾಗಳು ಎಂದು ಟ್ಯಾಗ್ ಲೈನ್ ನೀಡುತ್ತಾರೆ. ಅದು ಸರಿಯಾದ ಬೆಳವಣಿಗೆಯಲ್ಲ. ಈ ಹಿಂದೆ 'ಮದರ್ ಇಂಡಿಯಾ', 'ಸುಜಾತ', 'ಸೀತಾ ಔಟ್ ಗೀತಾ' ಅಂತಹ ಚಿತ್ರಗಳು ಬಂದಿದ್ದವು. ಆ ಸಮಯದಲ್ಲಿ ಆ ಚಿತ್ರಗಳಲ್ಲಿ ನಟಿಯರೇ ಪ್ರಮುಖ ಪಾತ್ರ ಮಾಡಿದ್ದರು. ಆದ್ರೆ, ಆ ಸಿನಿಮಾಗಳನ್ನ ಮಹಿಳಾ ಪ್ರಧಾನ ಸಿನಿಮಾ ಎಂದು ಕರೆದಿಲ್ಲ'' ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ನನ್ನ ನೆಚ್ಚಿನ ನಟಿ ಮಧುಬಾಲ
'ನನಗೆ ಇಷ್ಟವಾದ ನಟಿ ಮಧುಬಾಲ. ಅವರು ಎಷ್ಟೊಂದು ಒಳ್ಳೆಯ ಚಿತ್ರಗಳನ್ನ ಮಾಡಿದ್ದಾರೆ. ಅವರ ನಟನೆ ಮತ್ತು ಕಥೆಯ ಆಯ್ಕೆ ಬಗ್ಗೆ ಸಾಕಷ್ಟು ಜನ ಅವರಿಂದ ಕಲಿತುಕೊಳ್ಳುವುದು ದೊಡ್ಡದಿದೆ. ಅವರು ಕೇವಲ ಅತ್ಯುತ್ತಮ ನಟಿ ಮಾತ್ರವಲ್ಲ, ರೂಪವತಿ' ಎಂದು ಪ್ರಶಂಸೆ ವ್ಯಕ್ತಪಡಿಸಿದರು.


Click it and Unblock the Notifications











