"ಗಾಂಧೀಜಿ- ಅಂಬೇಡ್ಕರ್ ನಡುವಿನ ಆ ಚರ್ಚೆ ನೋಡ್ಬೇಕು ಎನ್ನುವ ಆಸೆಯಿದೆ: ಜಾನ್ವಿ
ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶ್ರೀದೇವಿ ಪುತ್ರಿ ಈಗಾಗಲೇ ತೆಲುಗಿನ 'ದೇವರ' ಚಿತ್ರದಲ್ಲಿ ನಟಿಸಿದ್ದಾರೆ. ರಾಮ್‌ಚರಣ್ ನಟನೆಯ ಹೊಸ ಚಿತ್ರಕ್ಕೂ ಆಯ್ಕೆ ಆಗಿದ್ದಾರೆ. ಶೀಘ್ರದಲ್ಲೇ ತಮಿಳು ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ.
ಇನ್ನು ಸೆಲೆಬ್ರೆಟಿಗಳಿಗೆ ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚು ಅರಿವು ಇರುವುದಿಲ್ಲ. ಅವರೆಲ್ಲಾ ದೇವತಾ ಮನುಷ್ಯರಂತೆ ಇರುವವರು ಎಂದೇ ಕೆಲವರು ಭಾವಿಸುತ್ತಾರೆ. ಆದರೆ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ. ಜಾತಿವಾದದ ಬಗ್ಗೆ ಅಂಬೇಡ್ಕರ್ ಹಾಗೂ ಗಾಂಧೀಜಿ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಜಾನ್ವಿ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಜಾನ್ವಿ ಕಪೂರ್, "ಅಂಬೇಡ್ಕರ್ ಅವರು ತಮ್ಮ ನಿಲುವು ಏನು ಎನ್ನುವುದರ ಬಗ್ಗೆ ಮೊದಲಿನಿಂದಲೂ ಸ್ಪಷ್ಟ ಮತ್ತು ನಿಷ್ಠುರರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ ಗಾಂಧಿಯ ದೃಷ್ಟಿಕೋನವು ಹೆಚ್ಚು ಹೆಚ್ಚು ತೆರೆದುಕೊಂಡಂತೆ ವಿಕಸನಗೊಂಡಿತು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜದಲ್ಲಿರುವ ಈ ಜಾತಿವಾದದ ಸಮಸ್ಯೆ ಬಗ್ಗೆ ಮಾತನಾಡುವುದಾದರೆ ಆ ಬಗ್ಗೆ ಮೂರನೇ ವ್ಯಕ್ತಿಯಿಂದ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ ಅಲ್ಲಿದ್ದು ನಿಜವಾಗಿ ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆ" ಎಂದಿದ್ದಾರೆ.
ನಿಮ್ಮ ಶಾಲೆಯಲ್ಲಿ ಜಾತಿಯ ಬಗ್ಗೆ ಎಂದಾದರೂ ಚರ್ಚೆಗಳು ನಡೆದಿತ್ತಾ? ಎನ್ನುವ ನಿರೂಪಕನ ಪ್ರಶ್ನೆಗೆ ಇಲ್ಲ, ನಮ್ಮ ಮನೆಯಲ್ಲಿ ಕೂಡ ಯಾವತ್ತೂ ಅಂತಹ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಜಾನ್ವಿ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ. ಕೆಲವರು ಜಾನ್ವಿ ಕಪೂರ್ ಮಾತುಗಳನ್ನು ಕೇಳಿ ವಾಹ್ ಎಂದರೆ ಮತ್ತೆ ಕೆಲವರು ಪಿಆರ್ ಟೀಂ ಆಕೆಯನ್ನು ಚೆನ್ನಾಗಿಯೇ ಸಿದ್ಧಪಡಿಸಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
"ಇಂತಹ ತಿಳುವಳಿಕೆ ಮತ್ತು ಅಧ್ಯಯನದ ಮಟ್ಟವನ್ನು ನೋಡುವುದು ಬಹಳ ಅಪರೂಪ. ಬಹಳ ಅಚ್ಚರಿ ಮೂಡಿಸುತ್ತದೆ. ಅದೂ ಕೂಡ ಹೊಸ ತಲೆಮಾರಿನ ಬಾಲಿವುಡ್ ನಟಿ ಈ ರೀತಿ ಮಾತನಾಡುತ್ತಿದ್ದಾಳೆ. ತಾನು ಮಾತನಾಡುತ್ತಿರುವ ವಿಚಾರದ ಬಗ್ಗೆಯೂ ಆಕೆಗೆ ಚೆನ್ನಾಗಿ ಗೊತ್ತಿದ್ದೆ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ನಟಿ ಸ್ವರಾ ಭಾಸ್ಕರ್ ಕೂಡ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲೇನು ವಿಶೇಷತೆ ಇಲ್ಲ" ಎಂದಿದ್ದಾರೆ.
2018ರಲ್ಲಿ ಜಾನ್ವಿ ಕಪೂರ್ ಬಾಲಿವುಡ್ ಪ್ರವೇಶಿಸಿದರು. ಮಗಳನ್ನು ನಾಯಕಿಯಾಗಿ ದೊಡ್ಡ ಪರದೆಯಲ್ಲಿ ನೋಡಬೇಕು ಎನ್ನುವುದು ಶ್ರೀದೇವಿ ಆಸೆ ಆಗಿತ್ತು. ಆದರೆ ಆಕೆಯ ನಿಧನದ ನಂತರ ಜಾನ್ವಿ ನಟಿಸಿದ 'ಧಡಕ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ. ಬಳಿಕ ಕೂಡ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಶ್ರೀದೇವಿ ಪುತ್ರಿ ನಿರಾಸೆ ಅನುಭವಿಸಿದ್ದರು.
ತಂದೆ ದೊಡ್ಡ ನಿರ್ಮಾಪಕರಾಗಿದ್ದರೂ ಶ್ರೀದೇವಿಯ ಹೆಸರು ಬೆನ್ನಿಗಿದ್ದರೂ ಜಾನ್ವಿಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ಈ ಬಗ್ಗೆ ಆಕೆ ಕೂಡ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕೆಗೆ ದೊಡ್ಡ ಫಾಲೋಯಿಂಗ್ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ 24 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.
ನನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಎಲ್ಲರೂ ನನ್ನ ಅಭಿಮಾನಿಗಳಲ್ಲ. ಒಂದೇ ವೇಳೆ ಅದೇ ನಿಜವಾಗಿದ್ದರೆ ನನ್ನ ಸಿನಿಮಾಗಳೆಲ್ಲಾ ಗೆಲ್ಲಬೇಕಿತ್ತು ಎಂದು ಹೇಳಿಕೊಂಡಿದ್ದರು. ಸದ್ಯ 'ಮಿ & ಮಿ ಮಾಹಿ' ಎನ್ನುವ ಚಿತ್ರದಲ್ಲಿ ಆಕೆ ನಟಿಸಿದ್ದು ಶೀಘ್ರದಲ್ಲೇ ತೆರೆಗೆ ಬರಲಿದೆ. 'ಉಲಾಜ್' ಹಾಗೂ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಎನ್ನುವ ಮತ್ತೆರಡು ಬಾಲಿವುಡ್ ಸಿನಿಮಾಗಳು ಕೈಯಲ್ಲಿದೆ.


Click it and Unblock the Notifications











