Jawan Prevue: ಜವಾನ್‌ಗಾಗಿ ಬಾಹುಬಲಿ, ಸಲಾರ್, ಅನ್ನಿಯನ್ ಚಿತ್ರಗಳನ್ನು ಕಾಪಿ ಮಾಡಿದ ಅಟ್ಲಿ!
ಇಂದು ( ಜುಲೈ 10 ) ಬೆಳಗ್ಗೆ 10.30ಕ್ಕೆ ಸರಿಯಾಗಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ನಟನೆಯ ಮುಂದಿನ ಚಿತ್ರ ಜವಾನ್‌ನ ಪ್ರಿವ್ಯೂ ಬಿಡುಗಡೆಗೊಂಡಿದೆ. 2 ನಿಮಿಷ 14 ಸೆಕೆಂಡುಗಳ ಈ ವಿಶೇಷ ವಿಡಿಯೊ ಆರಂಭದಿಂದ ಅಂತ್ಯದವರೆಗೂ ಸಾಲು ಸಾಲು ಗೂಸ್‌ಬಂಪ್ಸ್ ಹಾಗೂ ಸರ್‌ಪ್ರೈಸ್ ಎನಿಸುವಂತಹ ದೃಶ್ಯಗಳ ಸರಮಾಲೆಯೇ ಇದೆ.
ಶಾರುಖ್ ಖಾನ್ ಪ್ರತಿ ದೃಶ್ಯವೂ ಸಹ ಸಿಕ್ಕಾಪಟ್ಟೆ ಮಾಸ್ ಆಗಿದ್ದು, ನಾಯಕಿ ನಯನತಾರಾ ಕ್ಯೂಟ್ ಲುಕ್ ಹಾಗೂ ಮಾಸ್ ಲುಕ್ ಸಿನಿ ರಸಿಕರನ್ನು ಕೆರಳಿಸಿವೆ. ಇನ್ನು ಚಿತ್ರದಲ್ಲಿ ವಿಜಯ್ ಸೇತುಪತಿ ಅವರೂ ಸಹ ಖಡಕ್ ಆಗಿ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದೂ ಸಹ ಈ ಟ್ರೈಲರ್‌ನಲ್ಲಿ ಬಹಿರಂಗವಾಗಿದೆ.

ಈ ಚಿತ್ರಕ್ಕೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬಂಡವಾಳ ಹೂಡಿದ್ದು, ಚಿತ್ರಕ್ಕೆ ಸೌತ್‌ನ ಸ್ಟಾರ್ ಡೈರೆಕ್ಟರ್ ಅಟ್ಲಿ ಆಕ್ಷನ್ ಕಟ್ ಹೇಳಿದ್ದಾರೆ ಹಾಗೂ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಗೊಂಡ ಬಳಿಕ ನೆಟ್ಟಿಗರು ಹಾಗೂ ಶಾರುಖ್ ಖಾನ್ ಅಭಿಮಾನಿಗಳು ಟ್ರೈಲರ್‌ನಲ್ಲಿನ ವಿಶೇಷ ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದು, ಚಿತ್ರದಲ್ಲಿ ನಟಿಸಿರುವ ಕಲಾವಿದರನ್ನು ಹಾಗೂ ತೆರೆಹಿಂದೆ ಕೆಲಸ ಮಾಡಿರುವ ಪ್ರತಿಯೊಬ್ಬರನ್ನೂ ಸಹ ಹೊಗಳುತ್ತಿದ್ದಾರೆ.
ಅದರಲ್ಲಿಯೂ ಶಾರುಖ್ ಖಾನ್ ಅವರನ್ನು ಬಹಳ ವಿಭಿನ್ನವಾಗಿ ಹಾಗೂ ಮಾಸ್ ಆಗಿ ತೆರೆ ಮೇಲೆ ತರಲು ಶ್ರಮಿಸಿರುವ ನಿರ್ದೇಶಕ ಅಟ್ಲಿಗೆ ಶಾರುಖ್ ಖಾನ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಅಟ್ಲಿಯ ಗುಣಗಾನ ಶುರುವಿಟ್ಟುಕೊಂಡಿದ್ದಾರೆ.
ಹೀಗೆ ಅಟ್ಲಿ ತಾವು ನಿರ್ದೇಶಿಸಿರುವ ಮೊದಲ ಬಾಲಿವುಡ್ ಚಿತ್ರ ಬಿಡುಗಡೆಯಾಗುವ ಮುನ್ನವೇ ಬಾಲಿವುಡ್ ಮಂದಿಯ ಒಲವನ್ನು ಪಡೆದುಕೊಂಡರು ಎನ್ನುವಾಗಲೇ ಕೆಲ ನೆಟ್ಟಿಗರು ಜವಾನ್ ಟ್ರೈಲರ್‌ಗೆ ಇಷ್ಟೆಲ್ಲಾ ಬಿಲ್ಡಪ್ ಬೇಡ, ಟ್ರೈಲರ್ ಕಟ್ ಚೆನ್ನಾಗಿದೆ ನಿಜ, ಆದರೆ ನೀವೆಲ್ಲಾ ಹೊಗಳುವಷ್ಟು ಅದ್ಭುತವೇನಲ್ಲ. ಈ ಟ್ರೈಲರ್‌ನಲ್ಲಿ ಬರುವ ಅನೇಕ ದೃಶ್ಯಗಳು ಈಗಾಗಲೇ ಬೇರೆ ಚಿತ್ರಗಳಲ್ಲಿ ಬಂದಿವೆ.
ಅವುಗಳಿಂದ ಸ್ಪೂರ್ತಿ ಪಡೆದಿರುವ ಅಟ್ಲಿ ಹಿಂದಿನ ಚಿತ್ರಗಳ ಹಾಗೆ ಈ ಚಿತ್ರದಲ್ಲಿಯೂ ತಮ್ಮ ಕಾಪಿ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಹೌದು, ಟ್ರೈಲರ್‌ನಲ್ಲಿ ಮಗುವನ್ನು ಎತ್ತಿ ಹಿಡಿಯುವ ದೃಶ್ಯವನ್ನು ಬಾಹುಬಲಿಯಿಂದ ಕದ್ದಿದ್ದಾರೆ ಎಂದಿರುವ ನೆಟ್ಟಿಗರು ಗನ್ ಮೇಲೆ ಕೈ ಹಾಕಿ ಕುಳಿತಿರುವ ಸ್ವಾಗ್ ಲುಕ್ ಪ್ರಭಾಸ್ ನಟನೆಯ ಮುಂದಿನ ಚಿತ್ರ ಸಲಾರ್‌ನ ಪೋಸ್ಟರ್‌ನಿಂದ ಕದ್ದದ್ದು ಎಂದಿದ್ದಾರೆ.
ಈ ದೃಶ್ಯಗಳು ಮಾತ್ರವಲ್ಲದೇ ಅರ್ಧ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ಲುಕ್ ವಿಕ್ರಮ್ ನಟನೆಯ ಹಳೆಯ ಚಿತ್ರ ಅನ್ನಿಯನ್‌ನ ಕಾಪಿ ಎಂದೂ ಸಹ ಟ್ರೋಲ್ ಮಾಡಲಾಗುತ್ತಿದೆ. ಇದಿಷ್ಟು ಮಾತ್ರವಲ್ಲದೇ ಹಾಲಿವುಡ್‌ನಿಂದಲೂ ಸಹ ಜವಾನ್ ಲುಕ್ ಕಾಪಿ ಮಾಡಲಾಗಿದೆ ಎಂದೂ ಸಹ ನೆಟ್ಟಿಗರು ಕಾಲೆಳೆದಿದ್ದಾರೆ.
ಹೌದು, ಶಾರುಖ್ ಖಾನ್ ಅಡಿಯಿಂದ ಮುಡಿವರೆಗೂ ಬಟ್ಟೆ ಸುತ್ತಿಕೊಂಡಿರುವ ಲುಕ್ ಡಾರ್ಕ್ ನೈಟ್ ಚಿತ್ರದ ಕಾಪಿ ಎಂದು ನೆಟ್ಟಿಗರು ಹೋಲಿಸುತ್ತಿದ್ದಾರೆ. ಒಟ್ಟಿನಲ್ಲಿ ಜವಾನ್ ಪ್ರಿವ್ಯೂ ವೀಕ್ಷಿಸಿದ ಸಿನಿ ರಸಿಕರು ಅಟ್ಲಿ ನಿರ್ದೇಶನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಟ್ರೈಲರ್ ಮಾತ್ರ ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.


Click it and Unblock the Notifications











