ಕನ್ನಡ ಸಿನಿರಸಿಕರ ಕೆಂಗಣ್ಣಿಗೆ ಗುರಿಯಾದ ಶಾರುಕ್: 4 ತಿಂಗಳು ತಡವಾಗಲಿದೆ 'ಜವಾನ್' ಅಬ್ಬರ
ಸಿನಿ ವಿಶ್ಲೇಷಕರ ಲೆಕ್ಕಾಚಾರ ನಿಜವಾಗಿದೆ. ಶಾರುಕ್ ಖಾನ್ 'ಜವಾನ್' ಆಗಿ ಬರೋದು ತಡವಾಗಲಿದೆ. ಮತ್ತೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಅಟ್ಲಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈಲರ್ ಚಿತ್ರದಲ್ಲಿ ಸೌತ್- ಬಾಲಿವುಡ್ ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮವಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ. ಜೂನ್ 2ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು.
ಹೇಳಿದ್ದ ಸಮಯಕ್ಕೆ ಇನ್ನೊಂದು ತಿಂಗಳು ಬಾಕಿ ಇದ್ರು 'ಜವಾನ್' ಚಿತ್ರತಂಡದಿಂದ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಇರಲಿಲ್ಲ. ಆಗ್ಲೇ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುವ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅದು ನಿಜವಾಗಿದೆ. ಸಣ್ಣ ಟೀಸರ್ ಝಲರ್ ರಿಲೀಸ್ ಮಾಡಿ ಹೊಸ ರಿಲೀಸ್ ಡೇಟ್ ಘೋಷಿಸಲಾಗಿದೆ. ಅದರ ಬೆನ್ನಲ್ಲೇ ಶಾರುಕ್ ಖಾನ್ ಟ್ವಿಟರ್‌ನಲ್ಲಿ ಅಭಿಮಾನಿಗಳ ಜೊತೆ ಲೈವ್ ಚಾಟ್ ನಡೆಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಿನಿಮಾ ರಿಲೀಸ್ ತಡವಾಗುತ್ತಿರುವುದು ಕೆಲವರಿಗೆ ಬೇಸರ ತಂದಿದೆ.

'ಪಠಾಣ್' ಆಗಿ ಈ ವರ್ಷ ಕಿಂಗ್ ಖಾನ್ ಸೂಪರ್ ಸಕ್ಸಸ್ ಕಂಡಿದ್ದಾರೆ. ಅದೇ ಗೆಲುವಿನ ಅಲೆಯಲ್ಲಿ 'ಜವಾನ್' ಸಿನಿಮಾ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಚಿತ್ರದ ಗ್ರಾಫಿಕ್ಸ್ ವರ್ಕ್ ತಡವಾಗುತ್ತಿರುವುದರಿಂದ ರಿಲೀಸ್ ಡೇಟ್ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಶಾರುಕ್ ಖಾನ್ ಜೊತೆಗೆ ನಯನತಾರ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣ ಇದೆ. ಇನ್ನು ದಳಪತಿ ವಿಜಯ್, ಸಂಜಯ್ ದತ್, ದೀಪಿಕಾ ಪಡುಕೋಣೆ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಇದೀಗ ಸೆಪ್ಟೆಂಬರ್ 7ಕ್ಕೆ ಸಿನಿಮಾ ರಿಲೀಸ್ ಮಾಡಲು ತಂಡ ಹೊಸ ಮುಹೂರ್ತ ಫಿಕ್ಸ್ ಮಾಡಿದೆ.

ಉಲ್ಟಾ ಹೊಡೆದ ಶಾರುಕ್ ಖಾನ್
ಶಾರುಕ್ ಖಾನ್ ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ 'ಜವಾನ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಈ ಹಿಂದೆ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಇದ್ದಕ್ಕಿದಂತೆ ಈಗ ಹಿಂದಿ ಜೊತೆಗೆ ತೆಲುಗು, ತಮಿಳಿನಲ್ಲಿ ಮಾತ್ರ ಸಿನಿಮಾ ಮಾಡುವುದಾಗಿ ಹೇಳಲಾಗಿದೆ. ಹೊಸ ಟೀಸರ್‌ನಲ್ಲಿ ಅದು ಮತ್ತಷ್ಟು ಸ್ಪಷ್ಟವಾಗಿದೆ. ಡಬ್ಬಿಂಗ್ ಅವಕಾಶ ಇದ್ದರೂ ಚಿತ್ರತಂಡ ಇದೀಗ ಉಲ್ಟಾ ಹೊಡೆಯುತ್ತಿದೆ.
ಟ್ವಿಟ್ಟರ್‌ನಲ್ಲಿ ಬೇಸರ
ದಕ್ಷಿಣದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ತೆರೆಗಪ್ಪಳಿಸುತ್ತಿದೆ. ಬಾಲಿವುಡ್‌ನಲ್ಲೂ ಆಗೊಮ್ಮೆ ಹೀಗೊಮ್ಮೆ ಇಂತಹ ಪ್ರಯತ್ನ ನಡೀತಿದೆ. ಈ ಹಿಂದೆ ದಬಾಂಗ್- 3 ಸೇರಿದಂತೆ ಕೆಲವು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲಾಗಿತ್ತು. 'ಜವಾನ್' ಆರ್ಭಟವನ್ನು ಕನ್ನಡದಲ್ಲಿ ಕಣ್ತುಂಬಿಕೊಳ್ಳಬಹುದು ಎಂದುಕೊಂಡಿದ್ದವರಿಗೆ ಈಗ ನಿರಾಸೆಯಾಗಿದೆ. ಟ್ವಿಟ್ಟರ್‌ನಲ್ಲಿ ಕೆಲವರು ಇದೇ ವಿಚಾರಕ್ಕೆ ಬೇಸರ ವ್ಯಕ್ತಪಡಿಸ್ತಿದ್ದಾರೆ.
ಕಮಲ್ ಸಿನಿಮಾ ಪ್ರೇರಣೆ
ಕಮಲ್ ಹಾಸನ್ ನಟನೆಯ 'ಒರು ಕೈದಿಯಿನ್ ಡೈರಿ' ಚಿತ್ರದಿಂದ ಪ್ರೇರಣೆಗೊಂಡು ನಿರ್ದೇಶಕ ಅಟ್ಲಿ 'ಜವಾನ್' ಸಿನಿಮಾ ಕಟ್ಟಿಕೊಡ್ತಿದ್ದಾರೆ ಎನ್ನಲಾಗ್ತಿದೆ. ಇದೇ ಸಿನಿಮಾ ಮೂಲಕ ನಯನತಾರಾ ಬಾಲಿವುಡ್‌ಗೆ ಅಡಿ ಇಡುತ್ತಿದ್ದಾರೆ. ಚಿತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ. ಜೂನ್ 16ಕ್ಕೆ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ರಿಲೀಸ್ ಆಗ್ತಿದೆ. ಅದೇ ಕಾರಣಕ್ಕೆ 'ಜವಾನ್' ಬರೋದು ತಡವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ದ್ವಿಪಾತ್ರದಲ್ಲಿ ಕಿಂಗ್‌ಖಾನ್
ಜಿ. ಕೆ ವಿಷ್ಣು ಛಾಯಾಗ್ರಹಣ, ಅನಿರುದ್ದ್ ರವಿಚಂದರ್ ಮ್ಯೂಸಿಕ್ 'ಜವಾನ್' ಚಿತ್ರಕ್ಕಿದೆ. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಾಸ್ಥಾನ್ ಹಾಗೂ ಔರಂಗಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಕಿಂಗ್ ಖಾನ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











