ಕೆಜಿಎಫ್ ಚಾಪ್ಟರ್ 2 ಟ್ರೈಲರ್ ದಾಖಲೆ ಮುರಿಯುವಲ್ಲಿ ಯಶಸ್ವಿಯಾಯ್ತಾ ಶಾರುಖ್ ಖಾನ್ 'ಜವಾನ್'?
ನಿನ್ನೆಯಷ್ಟೇ ( ಜುಲೈ 10 ) ಬೆಳಗ್ಗೆ 10.30ಕ್ಕೆ ಯುಟ್ಯೂಬ್‌ನಲ್ಲಿ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಜವಾನ್‌ನ ಟ್ರೈಲರ್ ಪ್ರಿವ್ಯೂ ಹೆಸರಿನ ಅಡಿಯಲ್ಲಿ ಬಿಡುಗಡೆಗೊಂಡಿತು. ಆರಂಭದಿಂದ ಅಂತ್ಯದವರೆಗೂ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಒಳಗೊಂಡ ಮಾಸ್ ಟ್ರೈಲರ್ ಇದಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಟ್ರೈಲರ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಇಡೀ ಟ್ರೈಲರ್‌ನಲ್ಲಿ ಮಾತಿಗಿಂತ ಫೈಟ್ ದೃಶ್ಯಗಳೇ ಹೆಚ್ಚಾಗಿದ್ದು, ಶಾರುಖ್ ಖಾನ್ ಮಾತ್ರವಲ್ಲದೇ ನಾಯಕಿ ನಯನತಾರಾ ಸಹ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಡಿರುವ ದೀಪಿಕಾ ಪಡುಕೋಣೆ ಸಹ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

ಇನ್ನು ಈ ಚಿತ್ರದಲ್ಲಿ ವಿಜಯ್ ಸೇತುಪತಿ ಖಳ ನಾಯಕನಾಗಿ ನಟಿಸಿದ್ದು, ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ತಮಿಳಿನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಅಟ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಮೂಲಕ ಅನಿರುದ್ಧ್ ಹಾಗೂ ಅಟ್ಲಿ ಬಾಲಿವುಡ್ ಪ್ರವೇಶವನ್ನೂ ಸಹ ಮಾಡಿದ್ದಾರೆ.
ಸೆಟ್ಟೇರಿದಾಗಿನಿಂದಲೂ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ಈ ಚಿತ್ರ ಟ್ರೈಲರ್ ಬಿಡುಗಡೆಯಾದ ಬಳಿಕ ತನ್ನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿದ್ದಾರೆ. ಒಂದೆಡೆ ಈ ಚಿತ್ರದ ಟ್ರೈಲರ್‌ನಲ್ಲಿರುವ ಆಕ್ಷನ್ ದೃಶ್ಯಗಳು ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಇನ್ನೊಂದೆಡೆ ಚಿತ್ರದ ದೃಶ್ಯಗಳು ಬೇರೆ ಚಿತ್ರಗಳಿಂದ ಕದ್ದಂತಿವೆ ಎಂದೂ ಸಹ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಹೀಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿರುವ ಜವಾನ್ ಚಿತ್ರದ ಟ್ರೈಲರ್ ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಆದರೆ ಜವಾನ್ ಟ್ರೈಲರ್ ವೇಗವಾಗಿ ಒಂದು ಮಿಲಿಯನ್ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡ ಟ್ರೈಲರ್ ಎಂಬ ದಾಖಲೆ ಬರೆಯುವಲ್ಲಿ ವಿಫಲಗೊಂಡಿದೆ. ಹೌದು, ಜವಾನ್ ಚಿತ್ರದ ಟ್ರೈಲರ್ ಒಂದು ಮಿಲಿಯನ್ ಲೈಕ್ಸ್ ಪಡೆದುಕೊಳ್ಳಲು 7 ಗಂಟೆ 50 ನಿಮಿಷಗಳ ಸಮಯವನ್ನು ತೆಗೆದುಕೊಂಡಿದೆ.
ಈ ಮೂಲಕ ಅತಿ ವೇಗವಾಗಿ ಒಂದು ಮಿಲಿಯನ್ ಲೈಕ್ಸ್ ಪಡೆದುಕೊಂಡ ನಾಲ್ಕನೇ ಹಿಂದಿ ಟ್ರೈಲರ್ ಎನಿಸಿಕೊಂಡಿದೆ. ಹಾಗಿದ್ದರೆ ಅತಿ ವೇಗವಾಗಿ ಒಂದು ಮಿಲಿಯನ್ ಲೈಕ್ಸ್ ಪಡೆದ ಹಿಂದಿ ಟ್ರೈಲರ್‌ಗಳ ಪಟ್ಟಿಯಲ್ಲಿ ಯಾವ ಚಿತ್ರ ಅಗ್ರಸ್ಥಾನದಲ್ಲಿದೆ ಹಾಗೂ ಈ ಟಾಪ್ 4 ಪಟ್ಟಿ ಹೇಗಿದೆ ಎಂಬ ಮಾತುಗಳು ಈ ಕೆಳಕಂಡಂತಿದೆ..
1. ಸುಶಾಂತ್ ಸಿಂಗ್ ರಜಪೂತ್ ನಟನೆಯ ಅಂತಿಮ ಸಿನಿಮಾ ದಿಲ್ ಬೆಚಾರಾ ಅತಿ ವೇಗವಾಗಿ ಒಂದು ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡ ಹಿಂದಿ ಚಿತ್ರದ ಟ್ರೈಲರ್ ಎನಿಸಿಕೊಂಡಿದೆ. ದಿಲ್ ಬೆಚಾರಾ ಕೇವಲ 98 ನಿಮಿಷಗಳಲ್ಲಿ ಮಿಲಿಯನ್ ಲೈಕ್ಸ್ ಮುಟ್ಟಿತ್ತು.
2. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ 4 ಗಂಟೆಗಳಲ್ಲಿ ಮಿಲಿಯನ್ ಲೈಕ್ಸ್ ಪಡೆದುಕೊಂಡಿತ್ತು. ಈ ಮೂಲಕ ಅತಿ ವೇಗವಾಗಿ ಮಿಲಿಯನ್ ಲೈಕ್ಸ್ ಪಡೆದುಕೊಂಡ ಹಿಂದಿ ಟ್ರೈಲರ್‌ಗಳ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಎರಡನೇ ಸ್ಥಾನದಲ್ಲಿದೆ.
3. ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಟ್ರೈಲರ್ 5 ಗಂಟೆ 24 ನಿಮಿಷಗಳಲ್ಲಿ ಮಿಲಿಯನ್ ಲೈಕ್ಸ್ ಪಡೆದುಕೊಂಡು ಅತಿ ವೇಗವಾಗಿ ಮಿಲಿಯನ್ ಲೈಕ್ಸ್ ಪಡೆದ ಬಾಲಿವುಡ್ ಟ್ರೈಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
4. ಜವಾನ್ ಟ್ರೈಲರ್ 7 ಗಂಟೆ 50 ನಿಮಿಷಗಳಲ್ಲಿ ಮಿಲಿಯನ್ ಲೈಕ್ಸ್ ಪಡೆದುಕೊಂಡಿದ್ದು, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.


Click it and Unblock the Notifications











