8 ಕೋಟಿ ಲಾಸ್ ಆಗಿ ಟ್ರೋಲ್ ಆಗಿದ್ದ ಈ ತೆಲುಗು ಸಿನಿಮಾ ಈಗ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಚಿತ್ರ!
ಚಿತ್ರಮಂದಿರದಲ್ಲಿ ದೊಡ್ಡ ಲಾಭ ಗಳಿಸಿದ ಚಿತ್ರಗಳು ಟಿವಿಯಲ್ಲಿ ಪ್ರದರ್ಶನಗೊಂಡಾಗ ಹೆಚ್ಚು ಟಿ ಆರ್ ಪಿ ಪಡೆದುಕೊಳ್ಳುವುದಿಲ್ಲ. ಹಾಗೆಯೇ ಓಟಿಟಿ ವೇದಿಕೆಯಲ್ಲಿ ಹೆಚ್ಚು ವೀಕ್ಷಣೆಗಳನ್ನೂ ಸಹ ಪಡೆದುಕೊಳ್ಳುವುದಿಲ್ಲ. ಏಕೆಂದರೆ ಚಿತ್ರಮಂದಿರದಲ್ಲಿ ಹಿಟ್ ಚಿತ್ರಗಳನ್ನು ಹೆಚ್ಚು ಜನ ವೀಕ್ಷಸಿರುತ್ತಾರೆ, ಹೀಗಾಗಿ ಟಿವಿಯಲ್ಲಿ ಹಾಗೂ ಓಟಿಟಿಯಲ್ಲಿ ಈ ಚಿತ್ರಗಳನ್ನು ಹೆಚ್ಚು ಜನ ನೋಡಲು ಇಚ್ಛಿಸುವುದಿಲ್ಲ ಎನ್ನಬಹುದು.
ಆದರೆ ಫ್ಲಾಪ್ ಆದ ಚಿತ್ರಗಳು ಹೆಚ್ಚು ಟಿ ಆರ್ ಪಿ ಪಡೆದುಕೊಳ್ಳುವುದು ಸಹಜ. ಅದರಲ್ಲಿಯೂ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಾಗ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡ ಸಿನಿಮಾಗಳು ಹೆಚ್ಚೆಚ್ಚು ಟಿ ಆರ್ ಪಿ ಹಾಗೂ ಓಟಿಟಿ ವೀಕ್ಷಣೆಗಳನ್ನು ಪಡೆದುಕೊಳ್ಳಲಿವೆ. ಇನ್ನು ಈಗ ಪ್ಯಾನ್ ಇಂಡಿಯಾ ಯುಗವಾದ ಕಾರಣ ಚಿತ್ರಗಳ ಎಲ್ಲಾ ಭಾಷೆಯ ವರ್ಷನ್ ಓಟಿಟಿಯಲ್ಲಿಯೇ ಬಿಡುಗಡೆಯಾಗುವುದರಿಂದ ಈ ಹಿಂದಿನ ರೀತಿ ಡಬ್ ವರ್ಷನ್‌ಗಳನ್ನು ಯುಟ್ಯೂಬ್‌ನಲ್ಲಿ ಬಿಡುಗಡೆಗೊಳಿಸುತ್ತಿಲ್ಲ.

ಹೌದು, ಈ ಹಿಂದೆ ಸೌತ್ ಇಂಡಿಯನ್ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯುಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತಿತ್ತು. ವಿಶೇಷವೆಂದರೆ ಮೂಲ ಭಾಷೆಗಳಿಗಿಂತ ಹೆಚ್ಚು ವ್ಯೂಸ್ ಈ ಡಬ್ಬಿಂಗ್ ವರ್ಷನ್‌ಗಳಿಗೆ ಬರುತ್ತಿದ್ದವು. ಅದರಲ್ಲಿಯೂ ತೆಲುಗಿನ ಫ್ಲಾಪ್ ಚಿತ್ರಗಳ ಹಿಂದಿ ಡಬ್ ವರ್ಷನ್‌ಗೆ ಹೆಚ್ಚು ವೀಕ್ಷಣೆ ಬರುತ್ತಿದ್ದವು. ಇದನ್ನು ತೆಲುಗು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಟ್ರೋಲ್ ಸಹ ಮಾಡುತ್ತಿದ್ದರು ನಾವು ಡಬ್ಬಾ ಚಿತ್ರ ಎಂದು ಕಡೆಗಣಿಸಿದ ಸಿನಿಮಾಗಳನ್ನು ಇವರು ಇಷ್ಟರ ಮಟ್ಟಕ್ಕೆ ಮೆಚ್ಚಿಕೊಳ್ಳುತ್ತಿದ್ದಾರಲ್ಲ ಎಂದು ಗೇಲಿ ಮಾಡಿ ಹಿಂದಿ ವೀಕ್ಷಕರ ಕಾಲನ್ನು ಎಳೆಯುತ್ತಿದ್ದರು.
ಹೀಗೆ ಈ ಹಿಂದೆ ಟ್ರೋಲ್‌ಗೆ ಒಳಗಾಗಿದ್ದಂತಹ ಅಂತಹದ್ದೇ ಸಿನಿಮಾವೊಂದು ಇದೀಗ ಯುಟ್ಯೂಬ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಂತಹ ಸಿನಿಮಾ ಎನಿಸಿಕೊಂಡಿದೆ. ಹೌದು, 2017ರಲ್ಲಿ ನಿರ್ದೇಶಕ ಭೋಯಾಪತಿ ಶೀನು ಜಯ ಜಾನಕಿ ನಾಯಕ ಎಂಬ ಸಿನಮಾವನ್ನು ನಿರ್ದೇಶಿಸಿದ್ದರು. ಬೆಲ್ಲಂಕೊಂಡ ಶ್ರೀನಿವಾಸ್ ನಾಯಕನಾಗಿ ಹಾಗೂ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರ ಫ್ಲಾಪ್ ಆಗಿತ್ತು.

ಬಿಡುಗಡೆಗೂ ಮುನ್ನ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಹೀನಾಯವಾಗಿ ಸೋತು ಮಕಾಡೆ ಮಲಗಿತ್ತು. ಸುಮಾರು 42 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರದ ವಿತರಣೆ ಹಕ್ಕನ್ನು ವಿತರಕರು 30 ಕೋಟಿಗೆ ಖರೀದಿಸಿದ್ದರು. ಆದರೆ ಚಿತ್ರ ಅಂತಿಮವಾಗಿ ವಿಶ್ವದಾದ್ಯಂತ 21.73 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಕೆ ಮಾಡಿತ್ತು. ಈ ಮೂಲಕ ಈ ಚಿತ್ರ 8.27 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು. ಹೀಗೆ ಬೃಹತ್ ನಷ್ಟ ಅನುಭವಿಸಿದ್ದ ಜಯ ಜಾನಕಿ ನಾಯಕ ಈಗ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಸಿನಿಮಾ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಹೌದು, ಜಯ ಜಾನಕಿ ನಾಯಕ 700 ಮಿಲಿಯನ್ ವೀಕ್ಷಣೆಗಳನ್ನು ಪೂರೈಸಿ ಈ ದಾಖಲೆಯನ್ನು ನಿರ್ಮಿಸಿದೆ. ಚಿತ್ರ ಈ ದಾಖಲೆಯನ್ನು ನಿರ್ಮಿಸಿರುವುದನ್ನೂ ಸಹ ತೆಲುಗು ಟ್ರೋಲ್ ಪೇಜ್‌ಗಳು ಟ್ರೋಲ್ ಮಾಡುತ್ತಿವೆ. ಇಂತಹ ಕೆಟ್ಟ ಚಿತ್ರಕ್ಕೆ 70 ಕೋಟಿ ವೀಕ್ಷಣೆ ಬಂದಿದೆಯಲ್ಲಾ ಎಂದು ನಗತೊಡಗಿದ್ದಾರೆ. ಕೇವಲ ಈ ಚಿತ್ರ ಮಾತ್ರವಲ್ಲದೇ ತೆಲುಗಿನ ಮತ್ತೊಂದು ರುಟೀನ್ ಚಿತ್ರ ನೇನು ಶೈಲಜಾ ಹಿಂದಿ ವರ್ಷನ್ ಸಹ 500 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಸೌತ್‌ನಲ್ಲಿ ಹೀನಾಯವಾಗಿ ಟ್ರೋಲ್ ಆದ ಚಿತ್ರಗಳ ಹಿಂದಿ ವರ್ಷನ್‌ಗಳು ಹಿಂದಿಯಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿವೆ.


Click it and Unblock the Notifications











