John Abraham: ಸಣ್ಣ ವಿಷಯಕ್ಕೆ ಪತ್ರಕರ್ತರ ಮೇಲೆ ಗರಂ ಆದ ನಟ ಜಾನ್ ಅಬ್ರಹಾಂ
ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡಿದ್ದಾರೆ. ಈ ಹಿಂದೆ ಅಭಿಮಾನಿಗಳ ಜೊತೆ ಸಿಟ್ಟಿನಿಂದ ವರ್ತಿಸಿದ್ದ ಜಾನ್ ಅಬ್ರಹಾಂ ಈಗ ಪತ್ರಕರ್ತ ಮೇಲೆ ಸಿಟ್ಟು ಹೊರಹಾಕಿದ್ದಾರೆ.
ತಮ್ಮ 'ಆಕ್ಷನ್' ಸಿನಿಮಾದ ಪ್ರಚಾರವನ್ನು ಜಾನ್ ಅಬ್ರಹಾಂ ಮಾಡುತ್ತಿದ್ದಾರೆ. ಇದರ ಸಂಬಂಧ ಆಯೋಜಿತವಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಾನ್ ಅಬ್ರಹಾಂ ಭಾಗವಹಿಸಿದ್ದರು. ಆಗ ಪತ್ರಕರ್ತರೊಬ್ಬರು, ''ನಿಮ್ಮ ಫೈಟ್ ದೃಶ್ಯಗಳು ತುಸು ಅತಿ ಎನಿಸುತ್ತವೆ. ನೀವು ಐದಾರು ಜನರ ವಿರುದ್ಧ ಫೈಟ್ ಮಾಡಿದರೆ ಒಪ್ಪಬಹುದು ಆದರೆ 200 ಜನರ ವಿರುದ್ಧ ಫೈಟ್ ಮಾಡಿದರೆ ಒಪ್ಪುವುದು ಹೇಗೆ? ಬರಿಗೈಯಲ್ಲಿ ಬೈಕ್‌ಗಳನ್ನು ಎತ್ತಿ ಬಿಸಾಡುತ್ತೀರಿ, ಬರಿಗೈಲಿ ಹೆಲಿಕಾಪ್ಟರ್ ಅನ್ನು ತಡೆದು ಬಿಡುತ್ತೀರಿ ಇದೆಲ್ಲ ಅತಿ ಅಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆಗೆ ಅಸಮಾಧಾನಗೊಂಡ ಜಾನ್ ಅಬ್ರಹಾಂ, ''ನಾನೀಗ 'ಅಟ್ಯಾಕ್' ಸಿನಿಮಾದ ಬಗ್ಗೆಯಷ್ಟೆ ಮಾತನಾಡುತ್ತಿದ್ದೇನೆ. ನಿಮಗೆ ಇದರಿಂದ ತೊಂದರೆ ಇದ್ದರೆ ಹೇಳಿ'' ಎನ್ನುವ ಜಾನ್, ನಂತರ ತನ್ನ ಪಕ್ಕ ಕೂತಿದ್ದ ನಟನ ಕಡೆಗೆ ತಿರುಗಿ, ಪಾಪ ಆತ ಬಹಳ ಹತಾಶೆಗೊಂಡಿರಬೇಕು'' ಎಂದಿದ್ದಾರೆ.

ನಂತರ ಮತ್ತೊಬ್ಬ ಪತ್ರಕರ್ತ, ಜಾನ್ ಅಬ್ರಹಾಂಗೆ ಅವರ ಫಿಟ್‌ನೆಸ್, ವರ್ಕೌಟ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಜಾನ್, ''ನಾನು ದೈಹಿಕ ವ್ಯಾಯಾಮಕ್ಕಿಂತಲೂ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತೇನೆ. ಏಕೆಂದರೆ ಕೆಲವು ಬಾರಿ ಬಹಳ ದಡ್ಡ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ. ನಿಮ್ಮ ಬಗ್ಗೆ ನನಗೆ ಕರುಣೆ ಇದೆ. ನೀವು ನಿಮ್ಮ ಮೆದುಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದೀರಿ ಎನಿಸುತ್ತದೆ. ಮುಂದಿನ ಬಾರಿ ಮೆದುಳಿನ ಜೊತೆಗೆ ಬನ್ನಿ, ಆಗ ನಿಮ್ಮ ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಬಲ್ಲಿರಿ'' ಎಂದು ಪತ್ರಕರ್ತನ ಕಾಲೆಳೆದಿದ್ದಾರೆ ಜಾನ್.
ಅಷ್ಟಕ್ಕೂ ಸುಮ್ಮನಾಗದ ಜಾನ್, ''ನೀವು ಅದೇ ಕಿತ್ತು ಹೋದ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ ಹೇಗೆ. ನೀವು ಇಂದಿನ ಇವೆಂಟ್‌ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಬೇಕು. ಕೇಳಿ 'ಅಟ್ಯಾಕ್' ಯಾಕೆ ವಿಶೇಷ ಸಿನಿಮಾ, 'ಅಟ್ಯಾಕ್' ಸಿನಿಮಾ ಭಿನ್ನವೇಕೆ? ಈ ಬಗ್ಗೆ ಪ್ರಶ್ನೆ ಕೇಳಿ? ಅದನ್ನು ಬಿಟ್ಟು ಹಳೆಯ ಪ್ರಶ್ನೆಗಳನ್ನು, ಸಂಬಂಧವಿಲ್ಲದ ಪ್ರಶ್ನೆಗಳನ್ನು ಏಕೆ ಕೇಳುತ್ತೀರಿ?'' ಎಂದಿದ್ದಾರೆ. ಜಾನ್ ಅಬ್ರಹಾಂ ನಟಿಸಿರುವ 'ಅಟ್ಯಾಕ್' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ.


Click it and Unblock the Notifications











