ನಾನು ಸಾವನ್ನು ಮಾರುವುದಿಲ್ಲ, ಕಿಂಗ್ ಖಾನ್‌ಗೆ ಮಾತಿನಲ್ಲೇ ತಿವಿದ ಬಾಲಿವುಡ್ ಸ್ಟಾರ್...!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಇಂತಹ ಕಾಲದಲ್ಲಿ ಜಾಹಿರಾತಿನ ಸಲುವಾಗಿ ಸಿನಿಮಾ ತಾರೆಯರು ಲಕ್ಷ ಲಕ್ಷ ಹಣ ಎಣಿಸುತ್ತಾರೆ. ಅದರಲ್ಲಿಯೂ ಆ ಜಾಹೀರಾತುಗಳಿಂದ ಮನುಷ್ಯನ ಬದುಕಿನ ಮೇಲಾಗುವ ಪರಿಣಾಮ ಏನೇ ಇರಲಿ, ಬಾಲಿವುಡ್‌ನವರಿಗೆಯಂತೂ ಕಾಸಿದ್ರೆ ಕೈಲಾಸ. ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಇಲ್ಲಿ ಜೀವಂತವಾಗಿ ಇರುವುದೇ ಇಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಪಾನ್ ಮಸಾಲಾದಿಂದ ಹಿಡಿದು ರಮ್ಮಿ ಸರ್ಕಲ್‌ನವರೆಗೆ ಮನುಷ್ಯರನ್ನು ದಾರಿ ತಪ್ಪಿಸುವ ಅನೇಕ ಜಾಹೀರಾತುಗಳಲ್ಲಿ ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಉತ್ಪನ್ನಗಳಿಗೆ ರಾಯಭಾರಿಯಾಗಿ ಭರ್ಜರಿ ಪ್ರಚಾರವನ್ನೂ ಮಾಡಿದ್ದಾರೆ. ವಿಮಲ್ ಪಾನ್ ಮಸಾಲಾ ಜಾಹೀರಾತು ಇದಕ್ಕೆ ಅತ್ಯುತ್ತಮ ಉದಾಹರಣೆ. ಬಾಲಿವುಡ್‌ನ ಮ್ಯಾಚೋ ಮ್ಯಾನ್ ಮೊನ್ನೆ ಇಂತಹ ಸ್ಟಾರ್‌ಗಳ ವಿರುದ್ಧ ಕೆಂಡ ಕಾರಿದ್ದಾರೆ.

ಹೌದು, ಅಸಲಿಗೆ ಜಾನ್ ಅಬ್ರಾಹಿಂ ಅಭಿನಯದ 'ವೇದ' ಈ ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ನಾಯಕ ಜಾನ್ ಅಬ್ರಾಹಂ ಆದ ಕಾರಣ ಚಿತ್ರದಲ್ಲಿ ಹೇರಳವಾಗಿ ಹೊಡಿ ಬಡಿ ದೃಶ್ಯಗಳಿವೆ. ಇನ್ನೂ ನಿಮಗೆ ಗೊತ್ತು. ಈ ಕಾಲದಲ್ಲಿ ಚಿತ್ರ ಮಾಡಿದರಷ್ಟೇ ಸಾಲದು ಆ ಚಿತ್ರಕ್ಕೆ ಬೇಕಿರುವ ಪ್ರಚಾರವನ್ನೂ ಮಾಡಬೇಕು. ಹೀಗಾಗಿಯೇ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇರುವ ಜಾನ್ ಮೊನ್ನೆ ಪಾನ್ ಮಸಾಲಾ ಸ್ಟಾರ್‌ಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಯಾರ ಹೆಸರನ್ನೂ ಹೇಳದೇ ನಾನು ಬೇರೆಯವರಂತೆ ಸಾವನ್ನು ಮಾರಾಟ ಮಾಡಲ್ಲ ಅಂದಿದ್ದಾರೆ. ಇದಕ್ಕೆ ನಾನು ಪಾಲಿಸುವ ಶಿಸ್ತು, ನನಗೆ ನಾನು ವಿಧಿಸಿಕೊಂಡ ಕಟ್ಟು ಪಾಡು ಕಾರಣ ಅಂದಿದ್ದಾರೆ.
ನಾನು ಯಾವ ನಟರನ್ನು ಅಗೌರವಿಸುತ್ತಿಲ್ಲ. ಆದರೆ ನನಗೆ ಆದರ್ಶ ಮುಖ್ಯ ಎಂದಿದ್ದಾರೆ. ಮುಂದುವರೆದು ನಾನು ಪ್ರಾಮಾಣಿಕವಾಗಿದ್ದರೆ ನುಡಿದಂತೆ ನಡೆಯಬೇಕು. ಹಾಗೇ ಮಾಡಿದಾಗ ಮಾತ್ರ ನನ್ನನ್ನು ರೋಲ್ ಮಾಡೆಲ್ ಅನ್ನಬಹುದು. ಆದರೆ ಅದನ್ನು ಮಾಡದೇ ಹೇಳುವುದು ಒಂದು, ಮಾಡುವುದು ಮತ್ತೊಂದು ಆದರೆ ಅದು ಎಲ್ಲರಿಗೆ ಸರಳವಾಗಿ ಗೊತ್ತಾಗುತ್ತೆ ಅಂದಿರುವ ಜಾನ್ ಅಬ್ರಾಹಂ ಫಿಟ್ನೆಸ್ ಬಗ್ಗೆ ಮಾತನಾಡುವವರೇ ಪಾನ್ ಮಸಾಲಾ ಉತ್ಪನ್ನಗಳ ಪ್ರಚಾರವನ್ನು ಮಾಡುತ್ತಾರೆ ಎಂದಿದ್ಧಾರೆ. ಭಾರತದಲ್ಲಿ ಪಾನ್ ಮಸಾಲಾ ಉತ್ಪನ್ನಗಳು ವಾರ್ಷಿಕ 45 ಸಾವಿರ ಕೋಟಿ ವ್ಯವಹಾರ ನಡೆಸುತ್ತವೆ, ಸರ್ಕಾರ ಅದನ್ನು ಅಕ್ರಮ ಎಂದು ಘೋಷಿಸಿಲ್ಲ. ಒಂದರ್ಥದಲ್ಲಿ ಎಲ್ಲರೂ ಸಾವನ್ನು ಮಾರುತ್ತಿದ್ದಾರೆ ಎಂದು ಕಿಡಿಯನ್ನು ಕಾರಿದ್ದಾರೆ. ಪಾನ್ ಮಸಾಲಾ ಜಾಹೀರಾತುಗಳಿಂದ ಸೆಲೆಬ್ರಿಟಿಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತದೆ ಎಂದು ಕೂಡ ಜಾನ್ ಅಬ್ರಾಹಂ ಹೇಳಿದ್ಧಾರೆ.

ಸದ್ಯಕ್ಕೆ ಜಾನ್ ಅಬ್ರಾಹಂ ಅವರ ಈ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವರು ಜಾನ್ ಅಬ್ರಾಹಂ ಅವರ ಈ ನಿಲುವುನ್ನೂ ಗೌರವಿಸಿದರೆ ಇನ್ನೂ ಕೆಲವರು ತಮ್ಮ ಚಿತ್ರದ ಬಿಡುಗಡೆಯ ಸಮಯದಲ್ಲಿ ಮಾತ್ರ ಈ ಸ್ಟಾರ್‌ಗಳಿಗೆ ಈ ತರಹದ ಒಳ್ಳೇಯ ಆಲೋಚನೆ ಬರಲು ಸಾಧ್ಯವೆನ್ನುತ್ತಿದ್ದಾರೆ. ಎಲ್ಲವೂ ಚಿತ್ರದ ಪ್ರಚಾರಕ್ಕೆ ನಾನಾ ಕಸರತ್ತು ಮಾಡಬೇಕಾಗುತ್ತೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಪಠಾಣ್ ಚಿತ್ರದ ಸಮಯದಲ್ಲಿ ಈ ವಿಚಾರವನ್ನು ಪಾನ್ ಮಸಾಲಾದ ರಾಯಭಾರಿಯಾದ ಶಾರುಖ್ ಖಾನ್ ಅವರ ಜೊತೆ ಚರ್ಚೆ ಮಾಡಿದ್ದರೆ ಒಳ್ಳೇಯದಾಗುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











