ಕಬೀರ್ ಸಿಂಗ್ ನಾನು ಒಪ್ಪಿಕೊಳ್ಳಬಾರದಿತ್ತು ಎಂದ ನಟ ; ಕೆರಳಿ ಕೆಂಡವಾದ ಸಂದೀಪ್ ರೆಡ್ಡಿ ವಂಗಾ..!
ಕೆಲವರಿಗೆ ಗೆಲುವು-ಸೋಲು ಮುಖ್ಯವಾಗಲ್ಲ. ಮುಖ್ಯವಾಗುವುದು ಆತ್ಮತೃಪ್ತಿ ಮತ್ತು ಸಾರ್ಥಕತೆ ಅಷ್ಟೇ. ಯಾಕೆಂದರೆ ಆತ್ಮ ತೃಪ್ತಿಯ ಮುಂದೆ ಯಾವುದು ನಿಜವಾದ ಗೆಲುವು ಅಲ್ಲ. ಇದೇ ಸಾಲಿಗೆ ಸೇರುವವರು ಬಾಲಿವುಡ್‌ನ ವರ್ಸಟೈಲ್ ಆಕ್ಟರ್ ಆದಿಲ್ ಹುಸೇನ್.
ಪಾತ್ರ ಯಾವುದೇ ಇರಲಿ..ಆ ಪಾತ್ರಕ್ಕೆ ತನ್ನ ಶಕ್ತಿಯನುಸಾರ ಜೀವ ತುಂಬಬಲ್ಲ ಸಾಮರ್ಥ್ಯಹೊಂದಿರುವ ಆದಿಲ್ ಹುಸೇನ್,ಇಲ್ಲಿಯವರೆಗೆ ಹತ್ತಾರು ಚಿತ್ರಗಳನ್ನ ಮಾಡಿದ್ದಾರೆ.ಕೇವಲ ಹಿಂದಿಯಲ್ಲಿ ಅಷ್ಟೇ ಅಲ್ಲ ತಮ್ಮ ಮಾತೃಭಾಷೆ ಅಸ್ಸಾಮಿಯಲ್ಲಿಯೂ ನಟಿಸಿದ್ದಾರೆ. ಬೆಂಗಾಲಿ, ಮಲಯಾಳಂ ಚಿತ್ರರಂಗದಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದಾರೆ.

ಆದರೆ.. ಯಾವತ್ತೂ ಕೂಡ ಚಿತ್ರದ ವಿಚಾರದಲ್ಲಿ ಅಥವಾ ಪಾತ್ರದ ವಿಚಾರದಲ್ಲಿ, ಆದಿಲ್ ಹುಸೇನ್ ಪಶ್ಚಾತಾಪ ಪಟ್ಟಿಲ್ಲ. ಆದರೆ, ಇದೇ ಮೊದಲ ಬಾರಿ ಪಶ್ಚಾತಾಪದ ಅಗ್ನಿಕುಂಡದಲ್ಲಿ
ತಾವು ಬೇಯುತ್ತಿರುವುದಾಗಿ ಆದಿಲ್ ಹುಸೇನ್ ಹೇಳಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೆ ಕಾರಣ.. ಕಬೀರ್ ಸಿಂಗ್.
ಹೌದು, ಕಬೀರ್ ಸಿಂಗ್.. ಅರ್ಜುನ್ ರೆಡ್ಡಿಯ ಯಥಾವತ್ತು ಹಿಂದಿ ಅವತರಣಿಕೆ. ಆಂಧ್ರದಲ್ಲಿ ಅರ್ಜುನ್ ರೆಡ್ಡಿ ಹಣ ದೋಚಿದಂತೆ, ಭಾರತದೆಲ್ಲೆಡೆ ಹಣ ಕೊಳ್ಳೆ ಹೊಡೆದ ಈ ಕಬೀರ್ ಸಿಂಗ್‌ನಲ್ಲಿ ಆದಿಲ್ ಹುಸೇನ್ ಕಾಲೇಜಿನ ಡೀನ್ ಪಾತ್ರವನ್ನ ನಿರ್ವಹಿಸಿದ್ದರು. ಆ ಕ್ಷಣಕ್ಕೆ ಆದಿಲ್ ಲೆಕ್ಕಾಚಾರ ಏನಿತ್ತು ಗೊತ್ತಿಲ್ಲ. ಆದರೆ ಈಗ.. ನನ್ನ ಬದುಕಿನ ಬಹುದೊಡ್ಡ ತಪ್ಪು ಕಬೀರ್ ಸಿಂಗ್ ಎಂದು ಆದಿಲ್ ಹುಸೇನ್ ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ಎಪಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಆದಿಲ್ ಹುಸೇನ್, ಕಬೀರ್ ಸಿಂಗ್ ಚಿತ್ರಕ್ಕೆ ಕರೆ ಬಂದಾಗ, ಸುತಾರಾಂ ನನಗೆ ಇಷ್ಟ ಇರಲಿಲ್ಲ ಎಂದಿದ್ದಾರೆ. ಹೀಗಾಗಿಯೇ ನನ್ನ ಮ್ಯಾನೇಜರ್ ಬಳಿ, ಹೆಚ್ಚು ಹಣ ಕೇಳುವಂತೆ ಹೇಳಿದ್ದೆ. ಯಾಕೆಂದರೆ.. ನನ್ನ ಸಂಭಾವನೆ ಕೇಳಿ ಅವರು ಬೇರೆ ಆಯ್ಕೆ ಹುಡುಕುತ್ತಾರೆ ಅನ್ನುವ ನಂಬಿಕೆ ನನಗೆ ಇತ್ತು. ಆದರೆ ನನ್ನ ದುರಾದೃಷ್ಟ.. ಡಿಮ್ಯಾಂಡ್ ಜಾಸ್ತಿ ಮಾಡಿದರೂ ಅವರು ಒಪ್ಪಿಕೊಂಡರು ಎಂದಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಆದಿಲ್ ಹುಸೇನ್, ನನ್ನ ಚಿತ್ರ ಜೀವನದಲ್ಲಿ ಕಥೆಯನ್ನ ಕೇಳದೆ ಒಪ್ಪಿಕೊಂಡ ಸಿನಿಮಾ ಕಬೀರ್ ಸಿಂಗ್ ಅಂದಿದ್ದಾರೆ. ಹಾಗೇ ನೋಡಿದರೆ.. ಚಿತ್ರದಲ್ಲಿ ಆಕ್ಟ್ ಮಾಡುವಾಗ ನನ್ನ ದೃಶ್ಯ ನನಗೆ ಇಷ್ಟವಾಗಿತ್ತು. ಹೀಗಾಗಿ ಸಿನಿಮಾ ಕೂಡ ಇಷ್ಟೇ ಚೆಂದವಾಗಿರುತ್ತೆ ಎಂದು ನಾನು ಅಂದುಕೊಂಡಿದ್ದೆ. ಆದರೆ.. ನಾನು ಅಂದುಕೊಂಡಿದ್ದು ಒಂದು, ತೆರೆ ಮೇಲೆ ಅನಾವರಣವಾದ ಕಥೆ ಇನ್ನೊಂದು ಎಂದಿದ್ದಾರೆ ಆದಿಲ್ ಹುಸೇನ್.

ಚಿತ್ರ ಬಿಡುಗಡೆಯಾದ ನಂತರ, ಸ್ನೇಹಿತರ ಜೊತೆ ದೆಹಲಿಯಲ್ಲಿ ಕಬೀರ್ ಸಿಂಗ್ ಸಿನಿಮಾ ನೋಡಲು ಹೋಗಿದ್ದೆ ಎಂದಿರುವ ಆದಿಲ್ ಹುಸೇನ್, ಕೇವಲ ಇಪ್ಪತ್ತೇ ನಿಮಿಷ.. ಚಿತ್ರಮಂದಿರದಿಂದ ನಾನು ಆಚೆ ಬಂದೆ ಎಂದಿದ್ದಾರೆ. ಇವತ್ತು ಕೂಡ ನನ್ನ ಪತ್ನಿಗೆ ಕಬೀರ್ ಸಿಂಗ್ ಸಿನಿಮಾ ನೋಡು ಎಂದು ಹೇಳುವ ಧೈರ್ಯ ನನಗೆ ಬಂದಿಲ್ಲ ಎಂದು ಕೂಡ ಹೇಳಿರುವ ಆದಿಲ್, ಕಬೀರ್ ಸಿಂಗ್ ಸ್ತ್ರೀದ್ವೇಷದ ಸಿನಿಮಾ. ಮನುಷ್ಯನಾಗಿ ನನ್ನನ್ನು ಚಿಕ್ಕವನನ್ನಾಗಿ ಮಾಡಿದ ಸಿನಿಮಾ ಅಂದಿದ್ದಾರೆ. ಈ ತರಹದ ಸಿನಿಮಾಗಳಿಂದ ಸಮಾಜಯಕ್ಕೆ ನಯಾ ಪೈಸೆ ಉಪಯೋಗ ಇಲ್ಲವೆಂದು ಕೂಡ ಹೇಳಿದ್ದಾರೆ
ಇನ್ನೂ ಇದೇ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಮಾತನಾಡಿರುವ ಆದಿಲ್ ಹುಸೇನ್, ಪ್ರತಿಯೊಬ್ಬರಿಗೂ ಅವರು ಬಯಸಿದ ರೀತಿಯಲ್ಲಿ ಚಿತ್ರ ಮಾಡುವ ಹಕ್ಕಿದೆ . ಸಿನಿಮಾ ಮಾಡುವ ಅವರ ಸ್ವಾತಂತ್ರ್ಯ ನಿಜ ಆದರೆ ನಾನು ಅವರೊಂದಿಗೆ ಸಿನಿಮಾ ಮಾಡಿದ್ದು ಇಷ್ಟವಾಗಲಿಲ್ಲ. ನಾನು ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಆದಿಲ್ ಹುಸೇನ್ ಅವರ ಅಭಿಪ್ರಾಯವನ್ನ ಕೇಳಿ, ಕೆರಳಿದ ಸಿಂಹದಂತೆ ಆಗಿರುವ ಚಿತ್ರದ ಸೂತ್ರಧಾರ ಸಂದೀಪ್ ರೆಡ್ಡಿ ವಂಗಾ ಈಗ, ಆದಿಲ್ ಹುಸೇನ್ ಮೇಲೆ ಬೆಂಕಿಯುಂಡೆ ಉಗುಳಿದ್ದಾರೆ. ನೀವು ಮಾಡಿರುವ ಏಕೈಕ ಬ್ಲಾಕ್ ಬಸ್ಟರ್ ಸಿನಿಮಾದಿಂದ ನಿಮಗೆ ಸಿಕ್ಕ ಜನಪ್ರಿಯತೆ, ನೀವು ನಂಬಿಕೆಯಿಟ್ಟು ಮಾಡಿದ 30 ಕಲಾತ್ಮಕ ಸಿನಿಮಾಗಳಿಂದ ನಿಮಗೆ ಸಿಕ್ಕಿಲ್ಲ ಎಂದಿರುವ ಸಂದೀಪ್ ರೆಡ್ಡಿ ವಂಗಾ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ವಿಷಾದವಿದೆ. ಪ್ಯಾಷನ್ಗಿಂತಲೂ ನಿಮಗೆ ದುರಾಸೆ ಜಾಸ್ತಿ ಇದೆ ಎಂದಿದ್ದಾರೆ. AI ಟೆಕ್ನಾಲಜಿ ಸಹಾಯದೊಂದಿಗೆ ನಿಮ್ಮ ಮುಖವನ್ನೇ ಚಿತ್ರದಲ್ಲಿ ಬದಲಿಸುತ್ತೇನೆ. ಈ ಮೂಲಕ ನಿಮಗೆ ಆದ ಮುಜುಗರವನ್ನು ತಪ್ಪಿಸುತ್ತೇನೆ ಎಂದಿರುವ ವಂಗಾ, ಸ್ಮೈಲ್ ಪ್ಲೀಸ್ ಎಂದು ಆದಿಲ್ ಹುಸೇನ್ ಕಾಲೆಳೆದಿದ್ದಾರೆ.
ಸದ್ಯಕ್ಕೆ ಸಂದೀಪ್ ರೆಡ್ಡಿ ವಂಗಾ ಮತ್ತು ಆದಿಲ್ ಹುಸೇನ್ ಇಬ್ಬರ ಹೆಸರು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. ಇಬ್ಬರಲ್ಲಿ ಯಾರು ಸರಿ ಯಾರು ತಪ್ಪು ಅನ್ನುವ ಚರ್ಚೆ ನಡೆಯುತ್ತಿದೆ. ಇದೆಲ್ಲದರಿಂದ ಯುಟ್ಯೂಬ್ ಮತ್ತು ಓಟಿಟಿಯಲ್ಲಿ, ಕಬೀರ್ ಸಿಂಗ್ ಚಿತ್ರವನ್ನ ಹುಡುಕುತ್ತಿರುವ ಚಿತ್ರಪ್ರೇಮಿಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ


Click it and Unblock the Notifications











