ಕೊರೊನಾ ನಡುವೆ ಕಾಜಲ್ ಮದುವೆ: ಖುಷಿ ವಿಷಯ ಹಂಚಿಕೊಂಡ ನಟಿ
ನಟಿ ಕಾಜಲ್ ಅಗರ್ವಾಲ್ ಮದುವೆ ಬಗ್ಗೆ ಇದ್ದ ಎಲ್ಲಾ ಊಹಾಪೋಗಳಿಗೆ ತೆರೆ ಬಿದ್ದಿದೆ. ಕಾಜಲ್ ಅಗರ್ವಾಲ್ ಅವರು ಮುಂಬೈನ ಉದ್ಯಮಿ ಗೌತಮ್ ಅನ್ನು ವಿವಾಹವಾಗುತ್ತಿರುವುದಾಗಿ ಹೇಳಿದ್ದಾರೆ.
ಮುಂಬೈನಲ್ಲಿ ಅಕ್ಟೋಬರ್ 30 ರಂದು ಕಾಜಲ್ ಅಗರ್ವಾಲ್ ಹಾಗೂ ಗೌತಮ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಕೊರೊನಾ ಕಾರಣದಿಂದ ಕೆಲವೇ ಸಂಬಂಧಿಗಳ ನಡುವೆ ವಿವಾಹ ನಡೆಯಲಿದೆ ಎಂದು ಕಾಜಲ್ ಅಗರ್ವಾಲ್ ಹೇಳಿದ್ದಾರೆ.
'ಈ ಸಾಂಕ್ರಾಮಿಕ ರೋಗ ನಮ್ಮ ಸಂತೋಶಗಳ ಮೇಲೆ ಕಪ್ಪು ಛಾಯೆ ಹೊದಿಸಿದೆ, ಆದರೆ ನಾವಿಬ್ಬರು ಈ ಹೊಸ ಜೀವನ ಪಯಣ ಆರಂಭಿಸುತ್ತಿರುವುದು ಸಾಕಷ್ಟು ಥ್ರಿಲ್ ನೀಡುತ್ತಿದೆ' ಎಂದಿದ್ದಾರೆ ನಟಿ ಕಾಜಲ್.

ಅಭಿಮಾನಿಗಳ ಆಶೀರ್ವಾದ ಕೇಳಿದ ಕಾಜಲ್
ಇಷ್ಟು ದಿನ ನೀವುಗಳು ನನ್ನನ್ನು ಪ್ರೀತಿಸಿದ್ದೀರಿ, ಅಭಿಮಾನಿಸಿದ್ದೀರಿ. ನನ್ನ ಈ ಹೊಸ ಪಯಣಕ್ಕೆ ನಿಮ್ಮಗಳ ಹಾರೈಕೆ, ಆಶೀರ್ವಾದವನ್ನು ನಾನು ಮತ್ತು ಗೌತಮ್ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ ಕಾಜಲ್ ಅಗರ್ವಾಲ್.

ನಟನೆ ಮುಂದುವರೆಸುತ್ತೇನೆ ಎಂದ ಕಾಜಲ್
ನಾನು ಇಷ್ಟು ವರ್ಷಗಳಿಂದ ಅತಿಯಾಗಿ ಪ್ರೀತಿಸಿದ್ದ, ನಿಮ್ಮನ್ನು ಮನರಂಜಿಸುವ ಕಾರ್ಯವನ್ನು ಮುಂದುವರೆಸಲಿದ್ದೇನೆ. ಹೊಸ ಉದ್ದೇಶ, ಹೊಸ ಅರ್ಥದೊಂದಿಗೆ ನಾನು ನನ್ನ ಪ್ರೇಕ್ಷಕರನ್ನು ಮನರಂಜಿಸುವ ಕಾರ್ಯ ಮಾಡಲಿದ್ದೇನೆ ಎಂದಿದ್ದಾರೆ ಕಾಜಲ್. ಆ ಮೂಲಕ ತಾವು ನಟನೆ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಒಳಾಂಗಣ ವಿನ್ಯಾಸ ಸಂಸ್ಥೆ ಹೊಂದಿರುವ ಗೌತಮ್
ಕಾಜಲ್ ವಿವಾಹವಾಗುತ್ತಿರುವ ಗೌತಮ್ ಕಿಚ್ಲು ಮುಂಬೈನವರಾಗಿದ್ದು, 'ಡೈಸೆರ್ನ್ ಲಿವಿಂಗ್' ಹೆಸರಿನ ಒಳಾಂಗಣ ವಿನ್ಯಾಸದ ಉದ್ಯಮವನ್ನು ಹೊಂದಿದ್ದಾರೆ. ದೇಶದ ಅತ್ಯುತ್ತಮ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಗೌತಮ್ ಸಂಸ್ಥೆಯೂ ಒಂದು.

ಎರಡು ದಿನ ಮದುವೆ ಎನ್ನಲಾಗಿತ್ತು
ಮುಂಬೈ ನಲ್ಲಿ ಎರಡು ದಿನ ಮದುವೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಕಾಜಲ್ ಅವರು ಹೇಳಿರುವಂತೆ ಒಂದು ದಿನವಷ್ಟೆ ಸರಳವಾಗಿಯೇ ವಿವಾಹ ನಡೆಯಲಿದೆ. ಕೇವಲ ಕುಟುಂಬದವರನ್ನು ಮಾತ್ರವೇ ಮದುವೆ ಆಹ್ವಾನಿಸುವ ಸಾಧ್ಯತೆ ಇದೆ.


Click it and Unblock the Notifications











