ಅಜಯ್ ದೇವ್ಗನ್-ಕಾಜೋಲ್ ಸಂಸಾರ ಸರಿಗಮ: ಸಿಹಿ-ಕಹಿ ನೆನಪು ಬಿಚ್ಚಿಟ್ಟ ನಟಿ
ಬಾಲಿವುಡ್ ಸ್ಟಾರ್ ಹೀರೋ ಅಜಯ್ ದೇವ್ಗನ್ ಅಭಿನಯದ 100ನೇ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಇಂದು (ಜನವರಿ 10, 2020) ಬಿಡುಗಡೆ ಆಗಲಿದೆ. ಅಜಯ್ ದೇವ್ಗನ್ ಕೋ-ಪ್ರೊಡ್ಯೂಸರ್ ಕೂಡ ಆಗಿರುವ ಈ ಚಿತ್ರದಲ್ಲಿ ಪತ್ನಿ ಕಾಜೋಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರ ಈ 'ತಾನಾಜಿ: ದಿ ಅನ್ ಸಂಗ್ ವಾರಿಯರ್'.
'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ಪತಿ ಅಜಯ್ ದೇವ್ಗನ್ ಜೊತೆಗಿನ ತಮ್ಮ 25 ವರ್ಷಗಳ ಪಯಣದ ಬಗ್ಗೆ ನಟಿ ಕಾಜೋಲ್ ಮೆಲುಕು ಹಾಕಿದ್ದಾರೆ. 25 ವರ್ಷಗಳ ಹಿಂದೆ ಅಜಯ್ ದೇವ್ಗನ್ ರನ್ನು ಭೇಟಿ ಆದ ಸಂದರ್ಭದಿಂದ ಹಿಡಿದು ಇಂದಿನ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದವರೆಗೂ ತಮ್ಮ ಸಂಸಾರ ಸರಿಗಮದ ಬಗ್ಗೆ ನಟಿ ಕಾಜೋಲ್ ಇನ್ಸ್ಟಾಗ್ರಾಮ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

25 ವರ್ಷಗಳ ಹಿಂದೆ ಭೇಟಿ
''ನಾವಿಬ್ಬರು (ಅಜಯ್ ದೇವ್ಗನ್ ಮತ್ತು ಕಾಜೋಲ್) ಭೇಟಿ ಆಗಿದ್ದು 25 ವರ್ಷಗಳ ಹಿಂದೆ. ಅದು 'ಹಲ್ ಚಲ್' ಚಿತ್ರದ ಸೆಟ್ ನಲ್ಲಿ. ನಾನು ಶಾಟ್ ಗೆ ರೆಡಿ ಆಗಿದ್ದೆ. ಆಗ ''ಹೀರೋ ಎಲ್ಲಿ?'' ಕೇಳಿದೆ. ಮೂಲೆಯಲ್ಲಿ ಕೂತಿದ್ದ ಅಜಯ್ ದೇವ್ಗನ್ ಕಡೆ ಯಾರೋ ಬೆಟ್ಟು ಮಾಡಿ ತೋರಿಸಿದರು. ಅದಕ್ಕೂ 10 ನಿಮಿಷಗಳ ಹಿಂದೆಯಷ್ಟೇ ನಾನು ಅಜಯ್ ದೇವ್ಗನ್ ಬಗ್ಗೆ ಬೈಕೊಂಡಿದ್ದೆ. ಸೆಟ್ ನಲ್ಲಿ ಬೆಳೆದ ಒಡನಾಟದಿಂದ ನಾವಿಬ್ಬರು ಫ್ರೆಂಡ್ಸ್ ಆದ್ವಿ''

ನನ್ನ ಅಂದಿನ ಬಾಯ್ ಫ್ರೆಂಡ್ ಬಗ್ಗೆ ಅಜಯ್ ದೇವ್ಗನ್ ಬಳಿ ಕಂಪ್ಲೇಂಟ್ ಹೇಳಿದ್ದೆ.!
''ಆಗ ನಾನು ಇನ್ನೊಬ್ಬರನ್ನು ಡೇಟ್ ಮಾಡುತ್ತಿದೆ. ಅಜಯ್ ದೇವ್ಗನ್ ಕೂಡ ಬೇರೆಯೊಬ್ಬರ ಜೊತೆಗೆ ಡೇಟಿಂಗ್ ನಲ್ಲಿದ್ದರು. ನನ್ನ ಅಂದಿನ ಬಾಯ್ ಫ್ರೆಂಡ್ ಬಗ್ಗೆ ಅಜಯ್ ದೇವ್ಗನ್ ಬಳಿ ನಾನು ಕಂಪ್ಲೇಂಟ್ ಹೇಳಿದ್ದೂ ಇದೆ.! ಹೀಗಿರುವಾಗಲೇ, ನಾನು ಬ್ರೇಕಪ್ ಮಾಡಿಕೊಂಡೆ. ಅಜಯ್ ದೇವ್ಗನ್ ಕೂಡ ಬ್ರೇಕಪ್ ಮಾಡಿಕೊಂಡರು. ಅಸಲಿಗೆ, ನಾವಿಬ್ಬರು ಒಬ್ಬರಿಗೊಬ್ಬರು ಪ್ರಪೋಸ್ ಮಾಡಲೇ ಇಲ್ಲ. ನಾವಿಬ್ಬರು (ಕಾಜೋಲ್-ಅಜಯ್ ದೇವ್ಗನ್) ಒಟ್ಟಿಗೆ ಇರಬೇಕು ಅನ್ನೋದು ಅರ್ಥ ಆಗಿತ್ತು''

ಕಾರ್ ನಲ್ಲಿ ಲವ್ ಸ್ಟೋರಿ
''ನಮ್ಮಿಬ್ಬರ ಅರಿವಿಗೆ ಬರುವ ಮುನ್ನ ಕೈಕೈ ಹಿಡಿದುಕೊಂಡು ಓಡಾಡಿದ್ದಕ್ಕಿಂತ ಜಾಸ್ತಿಯೇ ನಡೆದು ಹೋಗಿತ್ತು. ಹಲವು ಬಾರಿ ನಾವಿಬ್ಬರು ಡಿನ್ನರ್ ಗೆಂದು ಹೊರಗೆ ಹೋಗಿದ್ವಿ. ಅಜಯ್ ದೇವ್ಗನ್ ಜುಹುನಲ್ಲಿದ್ದರು. ನಾನು ಸೌತ್ ಬಾಂಬೆಯಲ್ಲಿ. ಹೀಗಾಗಿ, ನಾವಿಬ್ಬರು ಬಹುತೇಕ ಪ್ರೀತಿ ಮಾಡಿದ್ದು ಕಾರ್ ನಲ್ಲಿ.!''

ಮದುವೆ ಆಗಲು ನಿರ್ಧಾರ
''ನಾಲ್ಕು ವರ್ಷಗಳ ಕಾಲ ನಾವು ಡೇಟಿಂಗ್ ಮಾಡಿದ್ವಿ. ಆಮೇಲೆ ಮದುವೆ ಆಗಲು ನಿರ್ಧಾರಿಸಿದ್ವಿ. ಅಜಯ್ ದೇವ್ಗನ್ ಮನೆಯಲ್ಲಿ ಒಪ್ಪಿಗೆ ಸಿಕ್ತು. ಆದ್ರೆ, ನಮ್ಮ ಮನೆಯಲ್ಲಿ ನನ್ನ ತಂದೆ ನನ್ನೊಂದಿಗೆ ನಾಲ್ಕು ದಿನ ಮಾತನಾಡಲಿಲ್ಲ. ವೃತ್ತಿ ಜೀವನದ ಬಗ್ಗೆ ಫೋಕಸ್ ಮಾಡುವಂತೆ ಹೇಳಿದ್ದರು. ಆದ್ರೆ, ನಾನು ಮದುವೆ ಆಗಲು ನಿರ್ಧಾರ ಮಾಡಿದ್ದೆ. ಕೊನೆಗೆ ಅಪ್ಪ ಒಪ್ಪಿಕೊಂಡರು''

ಮ್ಯಾರೇಜ್ ಸ್ಟೋರಿ
''ಇಲ್ಲೂ ಅಷ್ಟೇ. ಪ್ರಪೋಸಲ್ ಅಂತ ಏನೂ ಇರಲಿಲ್ಲ. ನಮ್ಮ ಜೀವನವನ್ನು ಒಟ್ಟಿಗೆ ಕಳೆಯಬೇಕು ಅನ್ನೋದು ಇಬ್ಬರ ಮನಸ್ಸಿನಲ್ಲೂ ಇತ್ತು. ಮನೆಯಲ್ಲೇ ನಮ್ಮ ಮದುವೆ ನಡೆಯಿತು. ಆದ್ರೆ, ಮೀಡಿಯಾಗೆ ತಪ್ಪು ಸ್ಥಳ ಹೇಳಿದ್ವಿ. ಪಂಜಾಬಿ ಮತ್ತು ಮರಾಠಿ ಸಂಪ್ರದಾಯದಂತೆ ನಮ್ಮ ಮದುವೆ ನಡೆಯಿತು. ವಿವಾಹ ಶಾಸ್ತ್ರಗಳನ್ನು ಬೇಗ ಬೇಗ ಮುಗಿಸುವಂತೆ ಪಂಡಿತರಿಗೆ ಅಜಯ್ ದೇವ್ಗನ್ ದುಡ್ಡು ಕೊಟ್ಟಿದ್ದು ನನಗೆ ಈಗಲೂ ನೆನಪಿದೆ.!''

ಲಾಂಗ್ ಹನಿಮೂನ್
''ನನಗೆ ಲಾಂಗ್ ಹನಿಮೂನ್ ಬೇಕಾಗಿತ್ತು. ಹೀಗಾಗಿ ಸಿಡ್ನಿಗೆ ಹೋದ್ವಿ. ಅಲ್ಲಿಂದ ಹವಾಯಿ, ಲಾಸ್ ಏಂಜಲೀಸ್... ಐದು ವಾರ ಕಳೆಯುತ್ತಿದ್ದ ಹಾಗೆ ಅಜಯ್ ದೇವ್ಗನ್ ಅನಾರೋಗ್ಯಕ್ಕೀಡಾದರು. ''ಬೇಬಿ.. ಮನೆಗೆ ಹೋಗಲು ಫ್ಲೈಟ್ ಬುಕ್ ಮಾಡು'' ಎಂದು ಕೇಳಿದರು. ಅಸಲಿಗೆ, ಆಗ ನಾವು ಈಜಿಪ್ಟ್ ಗೆ ಹೋಗಬೇಕಿತ್ತು. ಆದ್ರೆ, ಮನೆಗೆ ವಾಪಸ್ ಆದ್ವಿ''

ಗರ್ಭಪಾತ ಆಯಿತು
''ಮಕ್ಕಳ ಬಗ್ಗೆ ಪ್ಲಾನಿಂಗ್ ಶುರು ಮಾಡಿದ್ವಿ. 'ಕಭಿ ಕುಷಿ ಕಭಿ ಘಮ್' ಚಿತ್ರದ ವೇಳೆ ನಾನು ಗರ್ಭಿಣಿ ಆಗಿದ್ದೆ. ದುರಾದೃಷ್ಟವಶಾತ್ ನನಗೆ ಗರ್ಭಪಾತ ಆಯಿತು. ಆಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ರೆ, ನಾನು ಖುಷಿ ಆಗಿರಲಿಲ್ಲ. ಗರ್ಭಪಾತದಿಂದಾಗಿ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಬಳಿಕ ಮತ್ತೊಂದು ಬಾರಿಯೂ ನನಗೆ ಗರ್ಭಪಾತ ಆಯ್ತು. ಆನಂತರ ನೀಸಾ ಮತ್ತು ಯುಗ್ ಜನಿಸಿದರು. ನಮ್ಮ ಫ್ಯಾಮಿಲಿ ಕಂಪ್ಲೀಟ್ ಆಯ್ತು''

ಹಲವು ಏಳು-ಬೀಳು ಕಂಡಿದ್ದೇವೆ
''ಜೀವನದಲ್ಲಿ ನಾವಿಬ್ಬರು ಹಲವು ಏಳು-ಬೀಳುಗಳನ್ನು ಕಂಡಿದ್ದೇವೆ. ನಮ್ಮದೇ ಕಂಪನಿ ಶುರು ಮಾಡಿದ್ದೇವೆ. ಈಗ ಅಜಯ್ ದೇವ್ಗನ್ ಅಭಿನಯದ 100ನೇ ಚಿತ್ರ ತೆರೆಗೆ ಬರುತ್ತಿದೆ. ಅವರೊಂದಿಗಿನ ನನ್ನ ಜೀವನ ಸಂತೋಷ ಮಯವಾಗಿದೆ. ನಾವಿಬ್ಬರು ರೊಮ್ಯಾಂಟಿಕ್ ಅಲ್ಲ. ಆದ್ರೆ, ಒಬ್ಬರನ್ನೊಬ್ಬರು ಕೇರ್ ಮಾಡುತ್ತೇವೆ. ಒಮ್ಮೊಮ್ಮೆ ಏನೇನೋ ಯೋಚನೆ ಮಾಡಿ ಫಿಲ್ಟರ್ ಇಲ್ಲದೆ ಮಾತನಾಡುತ್ತೇನೆ. ಅಜಯ್ ದೇವ್ಗನ್ ಕೂಡ ಹಾಗೇ. ಈಗಲೂ ಅಷ್ಟೇ.. ಅಜಯ್ ದೇವ್ಗನ್ ನನ್ನ ಈಜಿಪ್ಟ್ ಟ್ರಿಪ್ ಗೆ ಕರ್ಕೊಂಡು ಹೋಗ್ತಾರಾ ಅಂತ ಯೋಚಿಸುತ್ತಿದ್ದೇನೆ'' ಎಂದು ನಟಿ ಕಾಜೋಲ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











