ಮೊದಲ ಸಿನಿಮಾನೇ ಬ್ಲಾಕ್‌ಬಸ್ಟರ್ ಆದರೂ ತುತ್ತು ಅನ್ನಕ್ಕೂ ಪರದಾಡಿದ ನಾಯಕಿ..!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್‌ನ ನಾಯಕಿ ಸ್ಮೈಲಿ ಸೂರಿ ಅತ್ಯುತ್ತಮ ಉದಾಹರಣೆ.
ಹೌದು, ನಿಮಗೆ ಕಲಿಯುಗ್ ಸಿನಿಮಾ ನೆನಪಿರಬೇಕು. ಈಗ್ಗೆ ಹತ್ತೊಂಬತ್ತು ವರ್ಷದ ಹಿಂದೆ ತೆರೆಗೆ ಬಂದಿದ್ದ ಸಿನಿಮಾ ಇದು. ಆ ಕಾಲಕ್ಕೆ ಹಾಡು ಮತ್ತು ಕಥಾವಸ್ತುದಿಂದ ವ್ಯಾಪಕ ಸದ್ದು ಮಾಡಿದ್ದ ಈ ಚಿತ್ರ ಕುನಾಲ್ ಖೇಮು ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಕೂಡ ಹೌದು. ಕೇವಲ ಕುನಾಲ್ ಮಾತ್ರ ಅಲ್ಲ ಸ್ಮೈಲಿ ಸೂರಿಗೆ ಕೂಡ ಕಲಿಯುಗ್ ಮೊದಲ ಚುಂಬನ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶನದಲ್ಲಿ ಬಂದಿದ್ದ ಈ ಚಿತ್ರವನ್ನ, ಮಹೇಶ್ ಭಟ್ ಮತ್ತು ಮುಖೇಶ್ ಭಟ್ ನಿರ್ಮಾಣ ಮಾಡಿದ್ದರು. ವಿಶೇಷ ಅಂದರೆ ಈ ಚಿತ್ರದ ನಾಯಕಿ ಸ್ಮೈಲಿ ಸೂರಿ ಬೇರೆ ಯಾರು ಅಲ್ಲ ಬದಲಿಗೆ ಮೋಹಿತ್ ಸೂರಿ ಅವರ ಸಹೋದರಿ ಮತ್ತು ಮುಖೇಶ್ ಭಟ್ ಅವರ ಸಂಬಂಧಿಯೇ ಆಗಿದ್ದರು.
ಆದರೂ ಕೂಡ .. ಮೊದಲ ಪ್ರಯತ್ನದಲ್ಲಿಯೇ ಅತ್ಯದ್ಭುತ ಗೆಲುವನ್ನ ಕಂಡರೂ ..ಮೋಹಿತ್ ಸೂರಿ ಮತ್ತು ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರ ನಂಟಸ್ತಿಕೆ ಇದ್ದರೂ.. ಸ್ಮೈಲಿ ಸೂರಿಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ. ಮತ್ತೊಂದು ಚಿತ್ರ ಸ್ಮೈಲಿಯನ್ನ ಅರಸಿಕೊಂಡು ಬರಲಿಲ್ಲ. ಇದಕ್ಕೆ ಕಾರಣ .. ಖುದ್ದು ಸ್ಮೈಲಿಗೆ ಗೊತ್ತಿಲ್ಲವಾದರೂ, ಸದ್ಯಕ್ಕೆ ಸ್ಮೈಲಿ ಸೂರಿ ಕಲಿಯುಗ್ ನಂತರದ ಬದುಕು ಹೇಗಿತ್ತು ಎಂದು ಮಾತನಾಡಿದ್ದಾರೆ. ಅಷ್ಟೊಂದು ದೊಡ್ಡ ಸಿನಿಮಾದ ಭಾಗವಾದರೂ ಆ ನಂತರ ಒಂದೊಂದು ಪೈಸೆಗೆ ಒದ್ದಾಡಿದ್ದ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಮನದ ಮಾತು ಹಂಚಿಕೊಂಡು ಬಿಕ್ಕಿದ್ದಾರೆ.

ಹೌದು, ಸಿದ್ಧಾರ್ಥ್ ಕಣ್ಣನ್ ಅವರ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಸ್ಮೈಲಿ ಸೂರಿ, ಕಲಿಯುಗ್ ನಂತರ ಅವಕಾಶ ಸಿಗದ ಹಿನ್ನೆಲೆ ಆರ್ಥಿಕವಾಗಿ ಹೈರಾಣಾಗಿದ್ದೆ ಎಂದಿದ್ದಾರೆ. ಹೀಗಾಗಿಯೇ ಸಿಂಗಾಪೂರ್‌ನಲ್ಲಿ ಪೋಲ್ ಡ್ಯಾನ್ಸ್ ತರಬೇತಿಯನ್ನ ನೀಡಲು ಮುಂದಾಗಿದ್ದೆ ಎಂದಿರುವ ಸ್ಮೈಲಿ, ದುರಾದೃಷ್ಟವಶಾತ್ ಆ ಪೋಲ್ ಖರೀದಿಸಲು ಬೇಕಿದ್ದ ಹಣ ಕೂಡ ನನ್ನ ಬಳಿ ಇರಲಿಲ್ಲ ಅಂದಿದ್ದಾರೆ. ನನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಆಗ ಇದ್ದಿದ್ದು ಕೇವಲ ಎರಡು ರೂಪಾಯಿ ಮಾತ್ರ ಎಂದಿರುವ ಸ್ಮೈಲಿ, ಪೋಲ್ ಗೆ ಬೇಕಿದ್ದ $1000 ಗಾಗಿ ನಾಲ್ಕು ದಿನ ಊಟ ಮಾಡದೇ ಉಪವಾಸ ಮಲಗಿದ್ದೇ ಅಂದಿದ್ದಾರೆ.
ಇನ್ನೂ ಕೊರೊನಾದಿಂದ ದೇಶ ಅಲ್ಲ ವಿಶ್ವವೇ ಸ್ತಬ್ದವಾದಾಗ ನಾನು ಮುಂಬೈನಲ್ಲಿದ್ದೆ, ಆದರೆ ಆಗ್ಲೂ ಕೂಡ ನನ್ನ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ ಅಂದಿದ್ದಾರೆ. ಕೊರೊನಾ ಕಾಲದಲ್ಲಿ ಒಂದು ಕಾಫಿ ಮತ್ತು ಒಂದು ಬಾಳೆಹಣ್ಣಿನಿಂದನೇ ದಿನಗಳನ್ನ ದೂಡಿದ್ದಾಗಿ ಹೇಳಿರುವ ಸ್ಮೈಲಿ ಉಪವಾಸ ಇದ್ದ ಹಿನ್ನೆಲೆ ನಾನು ತುಂಬಾ ಸಣ್ಣ ಆಗಿದ್ದೇ ಎಂದು ಕೂಡ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅದ್ಹೇಗೋ ನನ್ನ ದಾರುಣ ಪರಿಸ್ಥಿತಿಯ ಬಗ್ಗೆ ತಿಳಿದ ನನ್ನ ಸಹೋದರ ಮತ್ತು ಕಲಿಯುಗ್ ಚಿತ್ರದ ನಿರ್ದೇಶಕ ಮೊಹೀತ್ ಸೂರಿ ಆ ನಂತರ ಹಣಕಾಸಿನ ಸಹಾಯವನ್ನ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಸ್ಮೈಲಿ ಸೂರಿ.
ಸದ್ಯಕ್ಕೆ ಸ್ಮೈಲಿ ಸೂರಿ ಅವರ ಈ ಸಂದರ್ಶನ ಅನೇಕರನ್ನ ಭಾವುಕರನ್ನಾಗಿಸುತ್ತಿದೆ. ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸ್ವಜನಪಕ್ಷಪಾತ.. ಹೊರಗಿನವರು.. ಒಳಗಿನವರು.. ಬಗ್ಗೆ ಅನಾದಿಕಾಲದಿಂದ ನಡೆಯುತ್ತಿರುವ ಚರ್ಚೆ ಕೂಡ ಸ್ಮೈಲಿ ಸೂರಿ ವಿಚಾರದಲ್ಲಿ ಈಗ ನಡೆಯುತ್ತಿದೆ. ಅಂದ್ಹಾಗೇ ಸ್ಮೈಲಿ ಸೂರಿ ಸದ್ಯಕ್ಕೆ ಹೌಸ್ ಆಫ್ ಲೈಸ್ ಚಿತ್ರದ ಮೂಲಕ ತಮ್ಮ ಸೆಕೆಂಡ್ ಇನಿಂಗ್ಸ್ ಆರಂಭ ಮಾಡಲು ಸಿದ್ಧರಾಗಿದ್ದಾರೆ.


Click it and Unblock the Notifications











