ದುಡ್ಡಿಗಾಗಿ ಕುಣಿಯುವಳು ನಾನಲ್ಲ ; ತನ್ನನ್ನು ಲತಾ ಮಂಗೇಶ್ಕರ್ ಗೆ ಹೋಲಿಸಿಕೊಂಡ ಕಂಗನಾ...!
ಕಂಗನಾ ರಣಾವತ್ ಗೊತ್ತಲ್ಲವಾ..? ಸದಾ ಒಂದಿಲ್ಲೊಂದು ವಿಚಾರಕ್ಕೆ ಖ್ಯಾತೆ ತೆಗೆಯುವ ನಟಿ. ಬಾಲಿವುಡ್ ನವರು ಕುಂತರು ತಪ್ಪು.. ನಿಂತರು ತಪ್ಪು.. ಎನ್ನುವ ಕಂಗನಾ, ಸದ್ಯಕ್ಕೆ ಇನ್ನೊಮ್ಮೆ ಕೆಂಡ ಕಾರಿದ್ದಾರೆ. ಅಂಬಾನಿ ಭುಜದ ಮೇಲೆ ಬಂದೂಕು ಇಟ್ಟು ಮಾತಿನ ಸಿಡಿಮದ್ದು ಸಿಡಿಸಿದ್ದಾರೆ.
ಭಾರತ ಕಂಡ ಅಪ್ರತಿಮ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜೊತೆ ತಮ್ಮನ್ನ ತಾವು ಹೋಲಿಕೆ ಮಾಡಿಕೊಂಡಿರುವ ಕಂಗನಾ ರಣಾವತ್, ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ ಎಂದಿದ್ದಾರೆ. ಹಣಕ್ಕಿಂತ ಗುಣ ಮುಖ್ಯ ಅಂದಿದ್ದಾರೆ.

ಲಕ್ಷಾಂತರ ರೂಪಾಯಿ ನೀಡಿದರು ಮದುವೆ ಸಮಾರಂಭದಲ್ಲಿ ನಾನು ಹಾಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಈ ಹಿಂದೆ ಲತಾ ಮಂಗೇಶ್ಕರ್ ಹೇಳಿದ್ದರು. ಆ ಕಾಲಕ್ಕೆ ಲತಾ ಅವರ ಈ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಕೂಡ. ಆ ಸುದ್ದಿಯ ಸ್ಕ್ರೀನ್ ಶಾಟ್ ನ ಕಂಗನಾ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂ ಮೂಲಕ ಎಲ್ಲರಿಗೂ ಲತಾ ಮಂಗೇಶ್ಕರ್ ಅಂದಕಾಲತ್ತಿಲ್ ಹೇಳಿದ್ದ ಹೇಳಿಕೆಯನ್ನ ನೆನಪಿಸಿದ್ದಾರೆ.
ನಾನು ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಹಿನ್ನಡೆಯನ್ನು ನೋಡಿದ್ದೇನೆ, ಅನುಭವಿಸಿದ್ದೇನೆ. ಆದರೆ ನನಗೆ ಎಷ್ಟೇ ಆಮಿಷ ಒಡ್ಡಿದರೂ ಆತ್ಮಸಾಕ್ಷಿಯನ್ನು ನಾನು ಮಾರಿಕೊಳ್ಳಲಿಲ್ಲ ಅವರ ಇಚ್ಛಾನುಸಾರ ನಾನು ಯಾವತ್ತು ಕುಣಿಯಲಿಲ್ಲ ಎಂದಿದ್ದಾರೆ ಕಂಗನಾ.

ಇನ್ನೂ ನನ್ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುವಂತೆ ಕೇಳಿಕೊಂಡರು ನಾನು ಅದೆಲ್ಲದಕ್ಕೂ ಸೊಪ್ಪು ಹಾಕಿದವಳಲ್ಲ ಎಂದಿರುವ ಕಂಗನಾ, ಜೀವನದಲ್ಲಿ ನನಗೆ ಆಸೆ ಇದೆ ದುರಾಸೆ ಇಲ್ಲ ಅಂದಿದ್ದಾರೆ. ಅಡ್ಡದಾರಿಯಲ್ಲಿ ಹಣ ಗಳಿಸುವ ಹುಚ್ಚು ನನಗೆ ಇಲ್ಲ ಎಂದಿದ್ದಾರೆ .
ಕಂಗನಾ ಈ ಮಾತಿನ ಬಾಣವನ್ನ ಯಾರ ಕಡೆ, ಯಾವ ದಿಕ್ಕಿನ ಕಡೆಗೆ ಬಿಟ್ಟಿದ್ದಾರೆ ಅನ್ನುವುದು ನಿಮಗೆ ಈಗಾಗಲೇ ಗೊತ್ತಿರಬೇಕು. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಲಿವುಡ್ ನ 'ಖಾನ್'ದಾನ್ ಗೆ ಕಂಗನಾ ಈ ಮೂಲಕ ಮಾತಿನ ಚಾಟಿ ಬೀಸಿದ್ದಾರೆ ಎಂದು ಮುಂಬೈನ ಜನ ಮಾತನಾಡಿಕೊಳ್ತಿದ್ದಾರೆ. ಯಾಕೆಂದರೆ ಅಂಬಾನಿ ಮದುವೆಯಲ್ಲಿ ಬಾಲಿವುಡ್ ನ ಮೂವರು ಖಾನ್ ಗಳು ಹುಚ್ಚೆದ್ದು ಕುಣಿದಿದ್ದರು.

ಗೊತ್ತಿಲ್ಲ, ರಿಹಾನ ಅವರನ್ನೂ ಗುರಿಯನ್ನಾಗಿಸಿಕೊಂಡು ಕಂಗನಾ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು ಪಡಿಸಿರಬಹುದು. ಯಾಕೆಂದರೆ ಅಂಬಾನಿ ಮಗನ ಮದುವೆಗೆ ಹೀಗೆ ಬಂದು ಹಾಗೇ ಹೋಗಲು ರಿಹಾನಾ 74 ಕೋಟಿ ಪಡೆದಿದ್ದಾರೆ ಅನ್ನುವ ಸುದ್ದಿ ಪ್ರಪಂಚದೆಲ್ಲೆಡೆ ಗುಲ್ಲಾಗಿದೆ.
ಒಟ್ಟಿನಲ್ಲಿ ಸದ್ಯಕ್ಕೆ ಕಂಗನಾ ರಣಾವತ್ ಹಾಕಿಕೊಂಡಿದ್ದ ಇನ್ಸ್ಟಾಗ್ರಾಂ ಸ್ಟೋರಿ ಬಾಲಿವುಡ್ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನ ಹುಟ್ಟುಹಾಕಿದೆ. ಬಾಲಿವುಡ್ ನವರಿಗೆ ಆತ್ಮಸಾಕ್ಷಿ ಇದೆಯಾ ಎಂಬ ಪ್ರಶ್ನೆ ಕೂಡ ಅನೇಕರಿಗೆ ಕಾಡುತ್ತಿದೆ


Click it and Unblock the Notifications










