ಭಾರಿ ಒಡವೆ, ಸನ್‌ಗ್ಲಾಸ್ ಧರಿಸಿ ದೇವಾಲಯದಲ್ಲಿ ಕಸ ಗುಡಿಸಿದ ನಟಿ ಕಂಗನಾ ರನೌತ್!
ಇಡೀ ದೇಶವೆ ಕಾತುರದಿಂದ ಕಾಯುತ್ತಿರುವ ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸೆಲಬ್ರಿಟಿಗಳು ದಂಡು ದಂಡಾಗಿ ತೆರಳುತಿದ್ದಾರೆ. ದಶಕಗಳಿಂದ ಇದ್ದ ಕೋಟ್ಯಾಂತರ ಮಂದಿಯ ಕನಸು ನನಸಾಗಿದ್ದು, ಹೊಸ ರಾಮಮಂದಿರದಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಜನವರಿ 22 ರ ಮಹೋನ್ನತ ಸಮಾರಂಭಕ್ಕೂ ಮುನ್ನ ನಟಿ ಕಂಗನಾ ರನೌತ್ ಅಯೋಧ್ಯೆ ತಲುಪಿದ್ದು, ಧಾರ್ಮಿಕ ಚಟುವಟಿಕೆಗಳಲ್ಲಿ ಮುಳುಗಿದ್ದಾರೆ.
ಜನವರಿ 21 ರ ಭಾನುವಾರ, ನಟಿ ಕಂಗನಾ ರನೌತ್ ಅಯೋಧ್ಯೆ ತಲುಪಿ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾಗದಲ್ಲಿ ಪಾಲ್ಗೊಂಡಿದ್ದ ಅವರು, ಅಯೋಧ್ಯೆಯ ದೇವಾಲಯದಲ್ಲಿ ಪೊರಕೆ ಹಿಡಿದು ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ರೇಷ್ಮೆ ಸೀರೆ ಧರಿಸಿ, ಭಾರವಾದ ಒಡವೆಗಳು ಮತ್ತು ಸನ್‌ಗ್ಲಾಸ್ ಧರಿಸಿದ್ದು, ಅವರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಅಯೋಧ್ಯೆಯಲ್ಲಿ ಕಂಗನಾ ರನೌತ್ ಮಿಂಚು
ಭಾನುವಾರ ಕಂಗನಾ ರನೌತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನ್ಲಲಿ ಸರಣಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆಗೆ ಹೋಗುತ್ತಿರುವ, ಅಲ್ಲಿ ದೇವಾಲಯದ ಕಸ ಗುಡಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಕತ್ ಚೆನ್ನಾಗಿ ತಯಾರಾಗಿದ್ದ ಅವರು, ದೇವಸ್ಥಾನದಲ್ಲಿ ದೇವರ ಸೇವೆ ಒದಗಿಸುವ ಭಾಗವಾಗಿ ಕೈಯಲ್ಲಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸಿದ್ದಾರೆ.
ಇನ್ನು, ಅಯೋಧ್ಯೆಯಲ್ಲಿ ಸ್ವಾಮಿಜೀ, ಗುರೂಜಿಗಳನ್ನು ಭೇಟಿಯಾಗಿರುವ ಅವರು, ಕೆಲವು ಸಂತರು ಮತ್ತು ಋಷಿಗಳೊಂದಿಗೆ ಯಾಗವನ್ನು ನಿರ್ವಹಿಸುತ್ತಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸಂತ ರಾಮಭದ್ರಾಚಾರ್ಯರ ಆಶೀರ್ವಾದವನ್ನು ತೆಗೆದುಕೊಂಡಿದ್ದಾರೆ. ಅವರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು ಹಿಂದಿಯಲ್ಲಿ, "ಕೆಲಸದಲ್ಲಿಯೂ ರಾಮನಿದ್ದಾನೆ. ಇಂದು ನಾನು ಅತ್ಯಂತ ಪೂಜ್ಯ ಶ್ರೀ ರಾಮಭದ್ರಾಚಾರ್ಯರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದೆ. ಅವರು ಆಯೋಜಿಸಿದ್ದ ಶಾಸ್ತ್ರಾವತ್ ಸಾಮೂಹಿಕ ಹನುಮಾನ್ ಜೀ ಯಾಗದಲ್ಲಿ ಭಾಗವಹಿಸಿದೆ" ಎಂದಿದ್ದಾರೆ.
ಜನವರಿ 22 ರ ಈ ಕಾರ್ಯಕ್ರಮದ ಭಾಗವಾಗುತ್ತಿರುವುದರ ಬಗ್ಗೆ ಖುಷಿ ಹಂಚಿಕೊಂಡಿರುವ ಅವರು, "ಅಯೋಧ್ಯಾ ಧಾಮದಲ್ಲಿ ಶ್ರೀರಾಮನನ್ನು ಸ್ವಾಗತಿಸಲು ಎಲ್ಲರೂ ಸಂತೋಷಪಡುತ್ತಾರೆ. ನಾಳೆ ಅಯೋಧ್ಯೆಯ ರಾಜ ದೀರ್ಘ ವನವಾಸದ ನಂತರ ತನ್ನ ಮನೆಗೆ ಬರುತ್ತಿದ್ದಾನೆ. ಬಾ ನನ್ನ ರಾಮ, ಬಾ ನನ್ನ ರಾಮ" ಎನ್ನುತ್ತಾ ಸಂಭ್ರಮಿಸಿದ್ದಾರೆ.

"ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ಶತಮಾನಗಳ ನಂತರ ರಾಮಲಲ್ಲ ತನ್ನ ಮನೆಗೆ ಮರಳುತ್ತಿದ್ದಾರೆ. ಇದು ಅತ್ಯಂತ ಅದೃಷ್ಟದ ದಿನ. ಈ ದಿನವನ್ನು ವಿವರಿಸಲು ನಮ್ಮಲ್ಲಿ ಪದಗಳಿಲ್ಲ" ಎಂದು ಹೇಳಿದ್ದರು. ಈ ಹಿಂದೆ ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಇರಿಸಲಾಗಿರುವ ಬಾಲರಾಮನ ವಿಗ್ರಹವನ್ನು ನಟಿ ಕಂಗನಾ ಹೊಗಳಿದ್ದರು.
ಕಂಗನಾ ರನೌತ್ ಮುಂದಿನ ಸಿನಿಮಾಗಳು
ಕಂಗನಾ ರನೌತ್ ಕೊನೆಯದಾಗಿ 'ತೇಜಸ್' ಸಿನಿಮಾದಲ್ಲಿ ವಾಯುಪಡೆಯ ಪೈಲಟ್ ಆಗಿ ಕಾಣಿಸಿಕೊಂಡಿದ್ದರು. ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆದ ನಂತರ ಚಿತ್ರವು ಈಗ ಒಟಿಟಿಯಲ್ಲಿ ಲಭ್ಯವಿದೆ. ಮುಂದೆ 'ಎಮರ್ಜನ್ಸಿ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಅವರು ಇನ್ನೂ ಘೋಷಿಸಿಲ್ಲ.


Click it and Unblock the Notifications











