ಸೆನ್ಸಾರ್ ಮಂಡಳಿ ಹೇಳಿದಂತೆ ಕೇಳುತ್ತೇನೆ ಎಂದ ಕಂಗನಾ, 'ಎಮರ್ಜೆನ್ಸಿ'ಗೆ ಬೀಳಲಿದೆ ಕತ್ತರಿ..!
ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥಾ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು. ಆದರೆ, ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ ರಣಾವತ್‌ಗೆ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರು ತಮ್ಮ ಎಮರ್ಜೆನ್ಸಿ ಚಿತ್ರವನ್ನು ಬಿಡುಗಡೆ ಮಾಡಲು ಒದ್ದಾಡುತ್ತಿದ್ದಾರೆ. ಸೆನ್ಸಾರ್ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಹೀಗಾಗಿಯೇ ಹೇಗಾದರೂ ಸರಿ ಒಟ್ನಲ್ಲಿ ಚಿತ್ರ ಬಿಡುಗಡೆಯಾದರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಂತೆ ಇರುವ ಕಂಗನಾ ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ 'ಮಂಡಿ'ಯೂರಿದ್ದಾರೆ. ಸೆನ್ಸಾರ್‌ನವರು ಹೇಳಿದ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿಕೊಂಡಿದ್ದಾರೆ.ಹೌದು, ಅಸಲಿಗೆ ತಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಬೇಕು ಬೇಕೆಂದೇ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ ಎಂದು ಕಂಗನಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯ ಮೂರ್ತಿಗಳಾದ ಬರ್ಗೆಸ್ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠ ಸೆಪ್ಟೆಂಬರ್ 25ರೊಳಗೆ ಬಿಡುಗಡೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಸೂಚನೆಯನ್ನು ನೀಡಿತ್ತು.

ಬಾಂಬೆ ಹೈಕೋರ್ಟ್ ನೀಡಿದ ಸೂಚನೆಯ ಮೇರೆಗೆ ಸೆನ್ಸಾರ್ ಮಂಡಳಿ ಪರಿಷ್ಕರಣಾ ಸಮಿತಿ ಚಿತ್ರದಲ್ಲಿನ ವಿವಾದಾತ್ಮಕವಾಗಿರುವ 13 ಸನ್ನಿವೇಶಗಳಿಗೆ ಕತ್ತರಿ ಹಾಕುವ ಸಲಹೆಯನ್ನು ಚಿತ್ರತಂಡಕ್ಕೆ ನೀಡಿತ್ತು. ಇದೀಗ ಕಂಗನಾ ಸೆನ್ಸಾರ್ ಮಂಡಳಿ ಹೇಳಿರುವ ಸನ್ನಿವೇಶಗಳಿಗೆ ಕತ್ತರಿ ಹಾಕಲು ಸಿದ್ಧರಿದ್ದಾರೆ ಎಂದು ಕಂಗನಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆ ಪ್ರಕರಣದ ವಿಚಾರಣೆಯನ್ನು ಈಗ ಬಾಂಬೆ ಹೈಕೋರ್ಟ್ ಅಕ್ಟೋಬರ್ 3ಕ್ಕೆ ಮುಂದೂಡಿದೆ.
ಅಂದ್ಹಾಗೇ ಈ ಹಿಂದೆ ನಡೆದ ವಿಚಾರಣೆಯಲ್ಲಿ ಕಂಗನಾ ಪರ ವಕೀಲರು ಬಿಜೆಪಿ ಪಕ್ಷದ ವಿರುದ್ಧವೇ ಆರೋಪವನ್ನು ಮಾಡಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಉದ್ದೇಶಪೂರ್ವಕವಾಗಿಯೇ ಕೇಂದ್ರಿಯ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸರ್ಟಿಫಿಕೆಟ್ ನೀಡದೇ ಬಿಡುಗಡೆಯನ್ನು ವಿಳಂಬ ಮಾಡುತ್ತಿದೆ ಎಂದು ದೂರಿದ್ದರು.
ಹರಿಯಾಣಾದಲ್ಲಿ ಅಕ್ಟೋಬರ್ 5ರಂದು ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿಯುವರೆಗೆ ಚಿತ್ರ ಬಿಡುಗಡೆಯಾಗಂದತೆ ತಡೆಯಲು ಉದ್ದೇಶಪೂರ್ವಕವಾಗಿ ಪ್ರಮಾಣ ಪತ್ರವನ್ನು ಸಿಬಿಎಫ್‌ಸಿ [ ಸೆನ್ಸಾರ್ ಮಂಡಳಿ ] ತಡ ಮಾಡುತ್ತಿದೆ ಎಂದು ವಾದವನ್ನು ವಕೀಲರಾದ ವೆಂಕಟೇಶ್ ಧೋಂಡ್ ಮಾಡಿದ್ದರು. ತಮ್ಮ ಸದಸ್ಯರಿಂದ ಕೆಲವು ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡುವ ಚಿತ್ರ ಬಿಜೆಪಿಗರಿಗೆ ಈಗ ಬೇಕಿಲ್ಲ ಹೀಗಾಗಿ ಬಿಜೆಪಿ ಅಣತಿಯಂತೆ ಸೆನ್ಸಾರ್ ಮಂಡಳಿ ಕುಣಿಯುತ್ತಿದೆ. ಕಂಗನಾ ಅವರನ್ನು ಸತಾಯಿಸುತ್ತಿದೆ ಎಂದು ವಾದವನ್ನು ಕಂಗನಾ ವಕೀಲರು ಮಂಡಿಸಿದ್ದರು.
ಉಳಿದಂತೆ ಎಮರ್ಜೆನ್ಸಿ ಚಿತ್ರದ ವಿರುದ್ಧ ಸಿಖ್ ಸಮುದಾಯದ ಎರಡು ಸಂಘಟನೆಗಳಾದ ಜಬಲ್‌ಪುರ್ ಸಿಖ್ ಸಂಗತ್ ಮತ್ತು ಗುರುಸಿಂಗ್ ಸಭಾ ಆಕ್ಷೇಪ ವ್ಯಕ್ತಪಡಿಸಿದ್ದವು. ಚಿತ್ರದಲ್ಲಿನ ಕೆಲ ದೃಶ್ಯಗಳು ಸಿಖ್ ಸಮುದಾಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಹೀಗಾಗಿ ಕಂಗನಾ ರಣಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು. ಒಟ್ನಲ್ಲಿ ಸದ್ಯಕ್ಕೆ ಕಂಗನಾ ರಣಾವತ್ ಸೆನ್ಸಾರ್ ಮಂಡಳಿ ಹೇಳಿದಂತೆ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ ಮೂರರಂದು ವಿಚಾರಣೆ ನಡೆದ ನಂತರ ಕಂಗನಾ ಚಿತ್ರದ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಇನ್ನೂ ಈ ವಿವಾದದಲ್ಲಿ ಚಿತ್ರ ಸಿಲುಕದಿದ್ದರೆ ಎಮರ್ಜೆನ್ಸಿ ಚಿತ್ರ ಕಳೆದ ಸೆಪ್ಟೆಂಬರ್ ಆರರಂದು ಬಿಡುಗಡೆಯಾಗಬೇಕಿತ್ತು.


Click it and Unblock the Notifications











